ರಸ್ತೆ ಗುಂಡಿ ಬಿದ್ದಿದ್ದಕ್ಕೆ ಜನಪ್ರತಿನಿಧಿಗಳು, ಪೊಲೀಸರಿಗೆ ನಿಂದನೆ ; ರಸ್ತೆಯಲ್ಲಿ ಬೈಕ್ ಇಟ್ಟು ಸಂಚಾರಕ್ಕೆ ತಡೆ, ಮೂಡುಬಿದ್ರೆ ಬಳಿ ಹೈಡ್ರಾಮಾ ನಡೆಸಿದ ಆರೋಪಿ ಬಂಧನ

04-11-26 02:41 pm       HK News Staffer   ಕರಾವಳಿ

ಮೂಡುಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾವೀರ ಕಾಲೇಜು ಬಳಿ ರಸ್ತೆ ಗುಂಡಿ ಬಿದ್ದ ನೆಪದಲ್ಲಿ ರಾಜ್ಯ ಹೆದ್ದಾರಿ ಮೇಲೆ ತನ್ನ ವಾಹನವನ್ನು ಇರಿಸಿ ವಾಹನ ಸಂಚಾರ ಮತ್ತು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ನ.4: ಮೂಡುಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾವೀರ ಕಾಲೇಜು ಬಳಿ ರಸ್ತೆ ಗುಂಡಿ ಬಿದ್ದ ನೆಪದಲ್ಲಿ ರಾಜ್ಯ ಹೆದ್ದಾರಿ ಮೇಲೆ ತನ್ನ ವಾಹನವನ್ನು ಇರಿಸಿ ವಾಹನ ಸಂಚಾರ ಮತ್ತು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಪುಚ್ಚಮೊಗರು ನಿವಾಸಿ ಪ್ರಶಾಂತ @ ಪಚ್ಚು ಬಂಧಿತ ಆರೋಪಿ.‌ ನ.2ರಂದು ಮೂಡುಬಿದ್ರೆ ಬಳಿಯ ಪ್ರಾಂತ್ಯ ಗ್ರಾಮದ ಮಹಾವೀರ ಕಾಲೇಜಿನ ಮಾರಿಗುಡಿ ಬಳಿ ಸಂಜೆ ಸುಮಾರು 6.30 ಗಂಟೆಗೆ ಪುಚ್ಚಮೊಗರು ನಿವಾಸಿ ಪ್ರಶಾಂತ್ ಎಂಬವನು ತನ್ನ ಮೋಟಾರು ಸೈಕಲನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಿ ರಸ್ತೆಯಲ್ಲಿ ಉಂಟಾದ ಹೊಂಡ ಗುಂಡಿಗಳನ್ನು ಮುಚ್ಚಲು ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಬರಬೇಕು. ರಸ್ತೆಯ ಹೊಂಡ ಗುಂಡಿಗಳನ್ನು ಕೂಡಲೇ ಮುಚ್ಚಿ ಡಾಮರೀಕರಣ ಮಾಡಬೇಕು. 

ಇಲ್ಲದಿದ್ದರೆ ಈ ರಸ್ತೆಯಲ್ಲಿ ಯಾವುದೇ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ತಡೆಯುಂಟು ಮಾಡಿ ಸ್ಥಳಕ್ಕೆ ವಾಹನಗಳ ಸುಗಮ ಸಂಚಾರ ನಿರ್ವಣೆಗೆ ಬಂದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. “ಮೂಡಬಿದ್ರೆಯ ಇನ್ಸ್ ಪೆಕ್ಟರ್ ಎಲ್ಲಿಂದಲೋ ಘಟ್ಟದಿಂದ ಬಂದವನು. ಅವನ ಅಧಿಕಾರ ಇಲ್ಲಿ ನಡೆಯುವುದಿಲ್ಲ, ನಾನು ಇಲ್ಲಿಯೇ ಹುಟ್ಟಿ ಬೆಳೆದವ" ಎಂಬ ರೀತಿ ಬೈದು ದುರ್ವರ್ತನೆ ತೋರಿದ್ದಾನೆ. 

ಇದರಿಂದಾಗಿ, ಮೂಡುಬಿದ್ರೆಯಿಂದ ಬೆಳ್ತಂಗಡಿ ಕಡೆಗೆ ಹೋಗುವ ರಸ್ತೆಯಲ್ಲಿ ಎರಡೂ ಕಡೆ ಸುಮಾರು ಒಂದು ಕಿಲೊಮೀಟರ್ ತನಕ ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿದ್ದು ವಾಹನ ಪ್ರಯಾಣಿಕರಿಗೆ ಹಾಗೂ ಇತರ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಬಗ್ಗೆ ಮೂಡುಬಿದ್ರೆ ಠಾಣೆಯಲ್ಲಿ ಅ.ಕ್ರ 153/2026 ಕಲಂ:126(2), 352, 351(2) ಬಿ ಎನ್ ಎಸ್ ನಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪ್ರಶಾಂತ @ ಪಚ್ಚು (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.