ಥೈಲ್ಯಾಂಡ್‌ನಿಂದ ಬಂದು ಚಿನ್ನ ಗೆದ್ದ 6ರ ಪೋರ ; ರಾಷ್ಟ್ರ ಮಟ್ಟಕ್ಕೆ ಉಡುಪಿ ಮೂಲದ ಪುಟ್ಟ ಸ್ಕೇಟರ್ ! ಚಿನ್ನಕ್ಕೆ ಗುರಿಯಿಟ್ಟ ಸಲ್ಮಾನ್ ಶಾರೀಕ್

09-11-26 10:03 pm       HK News Staffer   ಕರಾವಳಿ

ವಯಸ್ಸು ಕೇವಲ ಆರು ವರ್ಷ, ಸಾಧನೆಯ ಹಾದಿ ಮಾತ್ರ ಅದ್ಭುತ! ಥೈಲ್ಯಾಂಡ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಉಡುಪಿ ಮೂಲದ ಪುಟ್ಟ ಬಾಲಕನೊಬ್ಬ ಬೆಂಗಳೂರಿಗೆ ಬಂದು ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದ್ದಾನೆ. ಅಷ್ಟೇ ಅಲ್ಲ, ಇದೀಗ ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಾನೆ.

ಉಡುಪಿ, ನ.9: ವಯಸ್ಸು ಕೇವಲ ಆರು ವರ್ಷ, ಸಾಧನೆಯ ಹಾದಿ ಮಾತ್ರ ಅದ್ಭುತ! ಥೈಲ್ಯಾಂಡ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಉಡುಪಿ ಮೂಲದ ಪುಟ್ಟ ಬಾಲಕನೊಬ್ಬ ಬೆಂಗಳೂರಿಗೆ ಬಂದು ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದ್ದಾನೆ. ಅಷ್ಟೇ ಅಲ್ಲ, ಇದೀಗ ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಾನೆ.

ಉಡುಪಿ ಜಿಲ್ಲೆಯ ಆರು ವರ್ಷದ ಸಲ್ಮಾನ್ ಶಾರಿಕ್ ಶೇಖ್ ಈ ಸಾಧನೆ ಮಾಡಿದ ಬಾಲ ಪ್ರತಿಭೆ. ಬೆಂಗಳೂರಿನಲ್ಲಿ ನಡೆದ 2026ರ ಕರ್ನಾಟಕ ರಾಜ್ಯ ಸ್ಕೇಟ್‌ ಬೋರ್ಡಿಂಗ್ ಚಾಂಪಿಯನ್‌ಶಿಪ್‌ನ ಅಂಡರ್-8 ಸ್ಟ್ರೀಟ್ ಸ್ಕೇಟ್‌ ಬೋರ್ಡಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾನೆ.

ಸಲ್ಮಾನ್ ಪ್ರಸ್ತುತ ಥೈಲ್ಯಾಂಡ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಾಗಿಯೇ ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ್ದ. ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದ ಬಳಿಕ ಡಿಸೆಂಬರ್ 2026ರಲ್ಲಿ ಚಿಂತಾಮಣಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾನೆ.

ಕುಟುಂಬದವರು ತಿಳಿಸಿರುವ ಪ್ರಕಾರ, ಕರ್ನಾಟಕದಿಂದ ಈ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಅತ್ಯಂತ ಕಿರಿಯ ಸ್ಕೇಟ್‌ಬೋರ್ಡರ್ ಸಲ್ಮಾನ್ ಎಂಬುದು ವಿಶೇಷ. ಸಲ್ಮಾನ್‌ಗೆ ಚಿಕ್ಕ ವಯಸ್ಸಿನಿಂದಲೇ ಸ್ಕೇಟಿಂಗ್ ಬಗ್ಗೆ ಅಪಾರ ಆಸಕ್ತಿ. ಕೇವಲ ನಾಲ್ಕನೇ ವಯಸ್ಸಿನಲ್ಲೇ ಸ್ಕೇಟಿಂಗ್ ಅಭ್ಯಾಸ ಆರಂಭಿಸಿದ್ದ ಈತ, ಥೈಲ್ಯಾಂಡ್‌ನ ಸ್ಥಳೀಯ ಸ್ಕೇಟ್‌ ಪಾರ್ಕ್‌ಗಳಲ್ಲಿ ನಿರಂತರ ತರಬೇತಿ ಪಡೆಯುತ್ತಿದ್ದಾನೆ.

ನಾಲ್ಕು ಮತ್ತು ಐದು ವರ್ಷದವನಿದ್ದಾಗಲೇ ಥೈಲ್ಯಾಂಡ್‌ನ ಪಟ್ಟಾಯದಲ್ಲಿ ನಡೆದ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ. ಆ ಎರಡೂ ಸ್ಪರ್ಧೆಗಳಲ್ಲಿ ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದ ಎಂಬುದು ಮತ್ತೊಂದು ವಿಶೇಷ. ಆರಂಭದಲ್ಲಿ ಸ್ಕೇಟ್‌ಬೋರ್ಡ್ ಮೇಲೆ ಸಮತೋಲನ ಕಾಯ್ದುಕೊಳ್ಳುವುದರಿಂದ ಹಿಡಿದು, ಬಿದ್ದ ಬಳಿಕ ಮತ್ತೆ ಎದ್ದು ನಿಂತು ಅಭ್ಯಾಸ ಮುಂದುವರಿಸುವವರೆಗೆ ಹಲವು ಸವಾಲುಗಳನ್ನು ಎದುರಿಸಿದ್ದಾನೆ. ನಿರಂತರ ಅಭ್ಯಾಸ ಮತ್ತು ಆಸಕ್ತಿಯೇ ಇಂದು ಆತನನ್ನು ರಾಜ್ಯಮಟ್ಟದ ಚಾಂಪಿಯನ್ ಆಗಿಸಿದೆ.

ಸಲ್ಮಾನ್‌ನ ಸಾಧನೆಯ ಹಿಂದೆ ತಂದೆ ಶಾರಿಕ್ ಹುಸೇನ್ ಮತ್ತು ತಾಯಿ ಸನಿಹಾ ಶೇಖ್ ಅವರ ಪ್ರೋತ್ಸಾಹವೂ ಇದೆ. ಮಗನ ಆಸಕ್ತಿಗೆ ಬೆಂಬಲವಾಗಿ ನಿಂತಿರುವ ಪೋಷಕರು, ಅಭ್ಯಾಸಕ್ಕೆ ಸಮಯ ಹೊಂದಿಸುವುದರ ಜೊತೆಗೆ ಕ್ರೀಡೆಯನ್ನು ಆಸ್ವಾದಿಸುತ್ತ ಮುಂದುವರಿಯುವಂತೆ ಪ್ರೇರೇಪಿಸುತ್ತಿದ್ದಾರೆ.

ಉಡುಪಿಯ ಇಮಾಮ್ ಸಾಹೇಬ್ (ಮುನ್ಸಿಪಾಲಿಟಿ) ಅವರ ಮರಿಮಗನಾಗಿರುವ ಸಲ್ಮಾನ್‌ನ ಕುಟುಂಬದ ಬೇರುಗಳು ಉಡುಪಿ ಮತ್ತು ಮಂಗಳೂರಿನಲ್ಲಿವೆ. ಇದೀಗ ಥೈಲ್ಯಾಂಡ್‌ನಿಂದ ಬಂದು ಕರ್ನಾಟಕದ ಪರ ರಾಜ್ಯ ಮಟ್ಟದಲ್ಲಿ ಚಿನ್ನ ಗೆದ್ದಿರುವ ಈ ಪುಟ್ಟ ಸ್ಕೇಟರ್, ರಾಷ್ಟ್ರ ಮಟ್ಟದಲ್ಲೂ ತನ್ನ ಪ್ರತಿಭೆ ಪ್ರದರ್ಶಿಸಲು ಸಜ್ಜಾಗಿದ್ದಾನೆ. ಆರು ವರ್ಷದ ಬಾಲಕನ ಈ ಸಾಧನೆ ಕರಾವಳಿಯ ಕ್ರೀಡಾಭಿಮಾನಿಗಳಲ್ಲಿ ಹೆಮ್ಮೆ ಮತ್ತು ಸಂತಸ ಮೂಡಿಸಿದೆ.