ವೆನ್ಲಾಕ್ ಆಸ್ಪತ್ರೆಗೆ ಬಂದಿದ್ದ ಬಡಪಾಯಿ ರೋಗಿಗೆ ಕಪಾಳಮೋಕ್ಷ ಮಾಡಿದ ವೈದ್ಯ!!

30-03-21 04:09 pm       Mangalore Correspondent   ಕರಾವಳಿ

ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಬಂದ ಮಹಿಳೆಯೊಬ್ಬರಿಗೆ ಅಲ್ಲಿನ ವೈದ್ಯರೊಬ್ಬರು ಕಪಾಳಕ್ಕೆ ಬಾರಿಸಿರುವ ಘಟನೆ ನಡೆದಿದೆ.

ಮಂಗಳೂರು, ಮಾ.30: ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಬಂದ ಮಹಿಳೆಯೊಬ್ಬರಿಗೆ ಅಲ್ಲಿನ ವೈದ್ಯರೊಬ್ಬರು ಕಪಾಳಕ್ಕೆ ಬಾರಿಸಿರುವ ಘಟನೆ ನಡೆದಿದ್ದು, ಮನೆಯವರು ಈ ಬಗ್ಗೆ ನೋವು ತೋಡಿಕೊಂಡಿದ್ದಾರೆ.

ನಗರದ ಯೆಯ್ಯಾಡಿಯ ವಸಂತಿ (56) ಎಂಬ ಮಹಿಳೆಯನ್ನು ನಾಲ್ಕು ದಿನಗಳ ಹಿಂದೆ ಅಪೆಂಡಿಕ್ಸ್ ಆಗಿರುವ ಕಾರಣಕ್ಕೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ಆಪರೇಶನ್ ಮಾಡಲಾಗಿತ್ತು. ಆನಂತರ ಡಿಸ್ಚಾರ್ಜ್ ಆಗಿ ತೆರಳಿದ್ದ ಮಹಿಳೆಗೆ ನಿನ್ನೆ ಊಟ ಮಾಡಲು ಕಷ್ಟವಾಗಿತ್ತು. ಎರಡು ದಿನಗಳಿಂದ ಸರಿಯಾಗಿ ಆಹಾರ ಸೇವಿಸದೆ ಕೃಶವಾಗಿದ್ದ ಮಹಿಳೆಯನ್ನು ಇಂದು ಬೆಳಗ್ಗೆ ಮತ್ತೆ ವೆನ್ಲಾಕ್ ಆಸ್ಪತ್ರೆಗೆ ಕರೆತಂದು ವೈದ್ಯರಿಗೆ ತೋರಿಸಿದ್ದಾರೆ.

ಮಹಿಳೆಯ ಇಬ್ಬರು ಪುತ್ರಿಯರು ಸೇರಿ, ಆಸ್ಪತ್ರೆಗೆ ಕರೆತಂದಿದ್ದು, ಈ ವೇಳೆ ಆಪರೇಶನ್ ಮಾಡಿದ್ದ ವೈದ್ಯರು ಇರಲಿಲ್ಲ. ಅಲ್ಲಿದ್ದ ಡ್ಯೂಟಿ ಡಾಕ್ಟರ್ ಒಬ್ಬರು ತಪಾಸಣೆ ನಡೆಸಿ, ಊಟ ಮಾಡಲು ಕಷ್ಟವಾದರೆ ಟ್ಯೂಬ್ ಮೂಲಕ ಜ್ಯೂಸ್ ನೀಡಿ ಎಂದು ಹೇಳಿ ಬಾಯಿಗೆ ಟ್ಯೂಬ್ ತೂರಿಸಿದ್ದಾರೆ. ಈ ವೇಳೆ, ಮಹಿಳೆ ಟ್ಯೂಬ್ ಹಾಕುವುದಕ್ಕೆ ಆಕ್ಷೇಪಿಸಿದ್ದಾರೆ. ಇದೇ ಕಾರಣಕ್ಕೆ ಡ್ಯೂಟ್ ಡಾಕ್ಟರ್ ಮಹಾಶಯ ಮಹಿಳೆಯ ಕಪಾಳಕ್ಕೆ ಎರಡೇಟು ಹೊಡೆದಿದ್ದಾನೆ.

ತಮ್ಮ ಎದುರಲ್ಲೇ ತಾಯಿಗೆ ವೈದ್ಯರು ಹೊಡೆದಿದ್ದನ್ನು ನೋಡಿದ ಪುತ್ರಿಯರಿಬ್ಬರು ಅಳುತ್ತಾ ಹೊರಬಂದಿದ್ದಾರೆ. ತಮ್ಮ ಸಂಬಂಧಿಕರಿಗೂ ಈ ಬಗ್ಗೆ ಹೇಳಿದ್ದಾರೆ. ಬಳಿಕ ಕೆಲವರ ಸಲಹೆಯಂತೆ, ಅಲ್ಲಿನ ವೈದ್ಯಕೀಯ ಅಧೀಕ್ಷಕರಿಗೆ ತಿಳಿಸಲು ಹೋಗಿದ್ದಾರೆ. ಅಲ್ಲಿ ತೆರಳಿದಾಗ, ಈಗ ಅವರಿಗೆ ಟೈಮ್ ಇಲ್ಲ. ಅರ್ಧ ಗಂಟೆ ಬಿಟ್ಟು ಬನ್ನಿ ಎಂದು ಹೇಳಿದ್ದಾರಂತೆ. ಇದರಿಂದ ಬೇಸತ್ತ ಪುತ್ರಿಯರು ತಾಯಿಯನ್ನು ಕರೆದುಕೊಂಡು ನಿಮ್ಮ ಸಹವಾಸವೇ ಬೇಡವೆಂದು ಮತ್ತೆ ಮನೆಗೆ ಮರಳಿದ್ದಾರೆ. ಮಹಿಳೆಯರು ನಾವು ಹಿಂತಿರುಗಿ ಹೋಗುತ್ತೇವೆ ಎನ್ನುವಷ್ಟರಲ್ಲಿ, ಅಲ್ಲಿಗೆ ಬಂದ ವೈದ್ಯ ತನ್ನದು ತಪ್ಪಾಗಿದೆ, ಕ್ಷಮಿಸಿ.. ಬೇರೆ ವಿಚಾರದಲ್ಲಿ ಸ್ವಲ್ಪ ತಲೆನೋವು ಇತ್ತು. ನಿಮಗೆ ಏಟು ಕೊಟ್ಟುಬಿಟ್ಟೆ ತಪ್ಪಾಯ್ತು ಎಂದು ಕ್ಷಮೆ ಯಾಚಿಸಿದ್ದಾನಂತೆ.

ವೆನ್ಲಾಕ್ ಆಸ್ಪತ್ರೆಯಲ್ಲಿ ಕೆಎಂಸಿ ಆಸ್ಪತ್ರೆಯ ಹೊರಗುತ್ತಿಗೆ ಕರ್ತವ್ಯದ ವೈದ್ಯರೂ ಡ್ಯೂಟಿ ಡಾಕ್ಟರ್ ಇರುತ್ತಾರೆ. ಒಬ್ಬ ಬಡಪಾಯಿ ರೋಗಿಯ ಮೇಲೆ ಕೈಮಾಡಿದ ವೈದ್ಯ ಮಹಾಶಯ ವೆನ್ಲಾಕ್ ಜಿಲ್ಲಾಸ್ಪತ್ರೆಯ ಫುಲ್ ಟೈಮ್ ವೈದ್ಯನೋ, ಕೆಎಂಸಿ ಆಸ್ಪತ್ರೆಗೆ ಸೇರಿದ ವ್ಯಕ್ತಿಯೋ ಗೊತ್ತಿಲ್ಲ. ಮನೆಯವರು ದೂರು ಕೊಡುತ್ತಿದ್ದರೆ, ವೈದ್ಯ ಮಹಾಶಯ ಮಹಿಳೆಯ ಮೇಲೆ ಕೈಮಾಡಿದ ಕಾರಣಕ್ಕೆ ಅರೆಸ್ಟ್ ಆಗುತ್ತಿದ್ದ. 

Duty doctor assults women patient in wenlock hospital in Mangalore.