ಕುಡಿಯುವ ನೀರಿನ ಸಮಸ್ಯೆಗೆ ಇಂಗುಗುಂಡಿ ಉತ್ತರ ; ಉಳ್ಳಾಲ ನಗರಸಭೆ ಸದಸ್ಯರ ಕಳಕಳಿಗೆ ಆಯುಕ್ತರ ಸಾಥ್

31-03-21 03:18 pm       Mangalore Correspondent   ಕರಾವಳಿ

ಉಳ್ಳಾಲದ ನಗರಸಭಾ ಸದಸ್ಯ ಮುಶ್ತಾಕ್ ಪಟ್ಲ ಎಂಬವರು ತನ್ನ ವಾರ್ಡ್ ವ್ಯಾಪ್ತಿಯಲ್ಲಿ ಕನಿಷ್ಠ 25 ಮನೆಗಳಲ್ಲಿ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. 

ಉಳ್ಳಾಲ, ಮಾ.31: ಬೇಸಗೆಯಲ್ಲಿ ಎಲ್ಲಿ ನೋಡಿದರೂ ನೀರಿನದ್ದೇ ಸಮಸ್ಯೆ. ಪಂಚಾಯತ್, ನಗರಸಭೆಗಳ ಅಧಿಕಾರಿಗಳಿಗೆ ಜನಸಾಮಾನ್ಯರಿಗೆ ಕುಡಿಯುವ ನೀರು ಪೂರೈಸುವುದೇ ತಲೆನೋವಿನ ಸಂಗತಿ. ಇದನ್ನರಿತ ಉಳ್ಳಾಲದ ನಗರಸಭಾ ಸದಸ್ಯ ಮುಶ್ತಾಕ್ ಪಟ್ಲ ಎಂಬವರು ತನ್ನ ವಾರ್ಡಿನಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಪಣ ತೊಟ್ಟಿದ್ದಾರೆ. 

ತನ್ನ ವಾರ್ಡ್ ವ್ಯಾಪ್ತಿಯಲ್ಲಿ ಕನಿಷ್ಠ 25 ಮನೆಗಳಲ್ಲಿ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಲು ಉಳ್ಳಾಲ ನಗರಸಭಾ ಸದಸ್ಯ ಮುಶ್ತಾಕ್ ಪಟ್ಲ ಮುಂದಾಗಿದ್ದು, ಇಂಗು ಗುಂಡಿಗಳ ನಿರ್ಮಾಣಕ್ಕೆ ಚಾಲನೆಯನ್ನೂ ನೀಡಿದ್ದು ಈ ಕಾರ್ಯಕ್ಕೆ ನಗರಸಭೆ ಆಯುಕ್ತರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲವು ಯೋಜನೆಗಳಲ್ಲಿ ಮಳೆ ನೀರು ಇಂಗು ಗುಂಡಿಗಳ ನಿರ್ಮಾಣ ಅತ್ಯಂತ ಸರಳ ಮತ್ತು ಮಿತ ವೆಚ್ಚದ್ದು. ಈ ನಿಟ್ಟಿನಲ್ಲಿ ಉಳ್ಳಾಲ ನಗರಸಭೆಯ ಕಲ್ಲಾಪು - ಪಟ್ಲ ವಾರ್ಡಿನ ಸದಸ್ಯರಾದ ಮುಶ್ತಾಕ್ ಪಟ್ಲ ಅವರು ತಾನು ಪ್ರತಿನಿಧಿಸುತ್ತಿರುವ ಕ್ಷೇತ್ರ ವ್ಯಾಪ್ತಿಯಲ್ಲಿ ಬೇಸಿಗೆ ಅವಧಿಯಲ್ಲಿ ಸುಮಾರು 25 ಮನೆಗಳಲ್ಲಿ ಮಳೆ ನೀರಿನ ಇಂಗು ಗುಂಡಿಗಳ ನಿರ್ಮಾಣದ ಗುರಿ ಇಟ್ಟು ಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಬಬ್ಬುಕಟ್ಟೆ ನಿವಾಸಿ ಮೆಹಪೂಝ್ ಅವರ ನಿವಾಸದಲ್ಲಿ ಮೊದಲ ಇಂಗುಗುಂಡಿ ನಿರ್ಮಾಣ ಆಗಿದೆ. 

ಮೆಹಪೂಝ್ ಅವರ ಮನೆಯಲ್ಲಿ ನಿರ್ಮಿಸಲಾದ ಮಳೆ ನೀರು ಇಂಗು ಗುಂಡಿಯನ್ನು ನಗರಸಭೆ ಆಯುಕ್ತರಾದ ರಾಯಪ್ಪ ಅವರೇ ಬಂದು ಪರಿಶೀಲಿಸಿದ್ದು ಭವಿಷ್ಯದ ಉತ್ತಮ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂತರ್ಜಲದ ಮಟ್ಟವನ್ನ ವೃದ್ದಿಸುವ ನಿಟ್ಟಿನಲ್ಲಿ ಮಳೆ ನೀರಿನ ಇಂಗು ಗುಂಡಿಗಳ ಮೂಲಕ ತೆರೆದ ಬಾವಿ, ಕೊಳವೆ ಬಾವಿಗಳಿಗೆ ನೀರನ್ನು ಪುನರ್ ಭರ್ತಿ ಮಾಡಲು ಸಾರ್ವಜನಿಕರು ಪ್ರಯತ್ನ ನಡೆಸಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲು ಸಾಧ್ಯವಿಲ್ಲ ಎಂದಿದ್ದಾರೆ.

ಅನೇಕ ಮನೆಗಳಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದರೂ ಮಳೆ ನೀರನ್ನು ಸುಮ್ಮನೆ ವ್ಯರ್ಥವಾಗಿ ಹರಿಯ ಬಿಡಲಾಗುತ್ತದೆ. ವಾರ್ಡ್ ನಿವಾಸಿಗಳಲ್ಲಿ ಮಳೆ ನೀರು ಇಂಗಿಸುವಿಕೆಯ ಮಹತ್ವ , ಪ್ರಯೋಜನಗಳನ್ನು ತಿಳಿಯ ಪಡಿಸಿದ್ದು ಕನಿಷ್ಠ 25 ಮನೆಗಳಲ್ಲಿ ಮಳೆ ನೀರು ಇಂಗು ಗುಂಡಿಗಳನ್ನು ಈ  ಬಾರಿ ನಿರ್ಮಿಸುವುದಾಗಿ ನಗರ ಸದಸ್ಯ ಮುಶ್ತಾಕ್ ಪಟ್ಲ ಹೇಳಿದ್ದಾರೆ.