ಮತ್ತೆ ಸ್ಯಾಟಲೈಟ್ ಗುಮ್ಮ ; ರಾಜ್ಯ ಸರಕಾರಕ್ಕಿಲ್ಲ ಗಮನ ! ಪಚ್ಚನಾಡಿ ಸೇರಿ ಐದು ಕಡೆ ಲೊಕೇಶನ್ !

01-04-21 07:05 pm       Mangaluru correspondent   ಕರಾವಳಿ

ಕರಾವಳಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಗಳು ಏಕ್ಟಿವ್ ಆಗಿರುವುದನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಮಂಗಳೂರು, ಎ.1: ಕರಾವಳಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಗಳು ಏಕ್ಟಿವ್ ಆಗಿರುವುದನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಗಳಿಂದ ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಗಳಿಂದ ನಿಗೂಢ ವ್ಯಕ್ತಿಗಳು ಸಂಪರ್ಕ ಸಾಧಿಸಿರುವುದನ್ನು ಪತ್ತೆ ಮಾಡಲಾಗಿದೆ.

ಕಳೆದ ಒಂದು ವಾರದಲ್ಲಿ ಐದು ಪ್ರದೇಶಗಳಲ್ಲಿ ಸ್ಯಾಟಲೈಟ್ ಫೋನ್ ವರ್ಕ್ ಆಗಿರುವುದನ್ನು ಕೇಂದ್ರೀಯ ರಾ ಏಜನ್ಸಿ ಅಧಿಕಾರಿಗಳು ಪತ್ತೆ ಮಾಡಿದ್ದು, ರಾಜ್ಯ ಗುಪ್ತಚರ ಇಲಾಖೆಗೆ ಸಂದೇಶ ರವಾನಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬಳಿಯ ಮಾದನಗೇರಿ, ಶ್ರೀ ಕ್ಷೇತ್ರ ಕೊಲ್ಲೂರು ಬಳಿಯ ದಟ್ಟಾರಣ್ಯ, ಮಂಗಳೂರು ನಗರದ ಪಚ್ಚನಾಡಿ, ಪುತ್ತೂರು – ಸುಬ್ರಹ್ಮಣ್ಯ  ಹೆದ್ದಾರಿಯಲ್ಲಿ ಸಿಗುವ ಪಾಣಾಜೆ, ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಮತ್ತು ತರೀಕೆರೆ ಎಂಬಲ್ಲಿನ ಅರಣ್ಯ ಪ್ರದೇಶಗಳಿಂದ ಸ್ಯಾಟಲೈಟ್ ಫೋನ್ ನಿಗೂಢ ವ್ಯಕ್ತಿಗಳ ಜೊತೆ ಸಂಪರ್ಕ ಸಾಧಿಸಿದ್ದು, ಇದರ ಲೊಕೇಶನ್ ಅನ್ನು ಅಧಿಕಾರಿಗಳು ಟ್ರೇಸ್ ಮಾಡಿದ್ದಾರೆ.

9 Best Satellite Phones 2020 - YouTube

ಮಾರ್ಚ್ 23ರಿಂದ 27ರ ನಡುವೆ ಈ ಐದೂ ಕಡೆಗಳಲ್ಲಿ ಫೋನ್ ರಿಂಗಣಿಸಿದ್ದು, ಗುಪ್ತಚರ ಅಧಿಕಾರಿಗಳು ಸ್ಯಾಟಲೈಟ್ ಲೊಕೇಶನ್ ಪತ್ತೆ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಗುಪ್ತಚರ ಅಧಿಕಾರಿಗಳು ಮತ್ತೆ ತಲೆಕೆಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೂರು ತಿಂಗಳ ಹಿಂದೆ ಇದೇ ರೀತಿ ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ ಏಕ್ಟಿವ್ ಆಗಿರುವುದು ಕಂಡುಬಂದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾವೂರು, ಧರ್ಮಸ್ಥಳ ಬಳಿಯ ಅರಣ್ಯ ಪ್ರದೇಶಗಳಲ್ಲಿ ಸ್ಯಾಟಲೈಟ್ ಫೋನ್ ವರ್ಕ್ ಆಗಿರುವುದನ್ನು ಪತ್ತೆ ಮಾಡಲಾಗಿತ್ತು. ಆಬಳಿಕ ರಾಜ್ಯ ಗುಪ್ತಚರ ತಂಡಗಳು ಈ ಬಗ್ಗೆ ತೀವ್ರ ತಪಾಸಣೆ ನಡೆಸಿದ್ದವು. ಆದರೆ, ಅಲ್ಲಿ ಯಾವುದೇ ಸಾಕ್ಷ್ಯಗಳ ಪತ್ತೆ ಸಾಧ್ಯವಾಗಿರಲಿಲ್ಲ.

ಇದೀಗ ಮತ್ತೆ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಫೋನ್ ವರ್ಕ್ ಆಗಿರುವುದನ್ನು ರಾ ಅಧಿಕಾರಿಗಳು ಪತ್ತೆ ಮಾಡಿದ್ದು ರಾಜ್ಯ ಗುಪ್ತಚರ ಇಲಾಖೆಗೆ ಸಂದೇಶ ರವಾನಿಸಿದ್ದಾರೆ. ಮೂರು ತಿಂಗಳ ಬಳಿಕ ಈ ರೀತಿ ಸ್ಯಾಟಲೈಟ್ ಫೋನ್ ವರ್ಕ್ ಆಗಿರುವುದು ಕರಾವಳಿಯಲ್ಲಿ ಮತ್ತೆ ಉಗ್ರರ ಸ್ಲೀಪಿಂಗ್ ಸೆಲ್ ಏಕ್ಟಿವ್ ಆಗಿದ್ಯಾ ಅನ್ನುವ ಅನುಮಾನ, ಶಂಕೆ ಮೂಡುವಂತಾಗಿದೆ. ಅಲ್ಲದೆ, ಈ ರೀತಿ ನಿಗೂಢ ಜಾಗಕ್ಕೆ ತೆರಳಿ, ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಿರುವ ಮಂದಿ ಯಾರು ಮತ್ತು ಅವರು ಯಾರ ಜೊತೆಗೆ ಸಂಪರ್ಕ ಸಾಧಿಸುತ್ತಿದ್ದಾರೆ, ಪಾಕ್ ಮೂಲದ ವಿದೇಶಿ ಉಗ್ರ ಸಂಘಟನೆಗಳ ಕೈವಾಡ ಇದೆಯೇ ಎನ್ನುವ ಬಗ್ಗೆ ಕುತೂಹಲ ಉಂಟಾಗಿದೆ.

Satellite Phone Monitoring |Thuraya|Iridium|Inmarsat

ಕಳೆದ ಒಂದು ವರ್ಷದಲ್ಲಿ ಎರಡು ಮೂರು ಬಾರಿ ಹೀಗೆ ವಿವಿಧ ಕಡೆಗಳಿಂದ ನಿಷೇಧಿತ ನೆಟ್ವರ್ಕ್ ಸಕ್ರಿಯವಾಗಿರುವುದು ಪತ್ತೆಯಾಗಿದ್ದರೂ, ಅದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ತಂತ್ರಜ್ಞಾನ ಆಧರಿಸಿ, ಲೊಕೇಶನ್ ಟ್ರೇಸ್ ಮಾಡಲು ಸಾಧ್ಯವಾದರೂ, ಅದರ ನಂಬರ್ ಆಗಲೀ, ಮೊಬೈಲನ್ನಾಗಲೀ ಪತ್ತೆ ಮಾಡಲು ಸಾಧ್ಯವಾಗದ ಕಾರಣ ಇದರ ಹಿಂದಿನ ವ್ಯಕ್ತಿಗಳನ್ನೂ ಪತ್ತೆ ಮಾಡಲು ಆಗುತ್ತಿಲ್ಲ. ಪದೇ ಪದೇ ಈ ಕೃತ್ಯ ಬೆಳಕಿಗೆ ಬರುತ್ತಿದ್ದರೂ, ರಾಜ್ಯ ಸರಕಾರವೂ ಏನೂ ಆಗೇ ಇಲ್ಲ ಎಂಬಂತೆ ಮೌನ ತಳೆದಿದೆ. ವಿಧ್ವಂಸಕ ಕೃತ್ಯ ನಡೆದಲ್ಲಿ ಮಾತ್ರ ಎಚ್ಚತ್ತುಕೊಳ್ಳುತ್ತೋ ಏನೋ..

A Satellite phone has been activated in five places including Pachanady in Mangalore. From the past one-week satellite phone signals are said to be activated.