ಕುಲಪತಿ ಹುದ್ದೆಗೆ ಲಂಚ ; ಪ್ರೊಫೆಸರ್ ಅಮಾನತು ! ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಸಿಂಡಿಕೇಟ್ ನಿರ್ಣಯ

09-04-21 08:36 pm       Mangaluru correspondent   ಕರಾವಳಿ

ಕುಲಪತಿ ಹುದ್ದೆಗಾಗಿ ಲಂಚ ನೀಡಿದ್ದ ಆರೋಪದಲ್ಲಿ ಮಂಗಳೂರು ವಿವಿಯ ಪ್ರೊಫೆಸರ್ ಜಯಶಂಕರ್ ಅವರನ್ನು ಅಮಾನತು ಮಾಡಲಾಗಿದೆ. 

ಮಂಗಳೂರು, ಎ.9:  ಕುಲಪತಿ ಹುದ್ದೆಗಾಗಿ ಲಂಚ ನೀಡಿದ್ದ ಆರೋಪದಲ್ಲಿ ಮಂಗಳೂರು ವಿವಿಯ ಪ್ರೊಫೆಸರ್ ಜಯಶಂಕರ್ ಅವರನ್ನು ಅಮಾನತು ಮಾಡಲಾಗಿದೆ. 

ಮಂಗಳೂರು ವಿವಿಯಲ್ಲಿ ಇಂದು ಸಿಂಡಿಕೇಟ್ ಸಭೆ ನಡೆದಿದ್ದು ಸಭೆಯಲ್ಲಿ ಆರೋಪಿತ ಪ್ರೊಫೆಸರ್ ಜಯಶಂಕರ್ ಅವರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಆದೇಶ ಮಾಡಲಾಗಿದೆ. ಅಲ್ಲದೆ ನಿವೃತ್ತ ನ್ಯಾಯಾಧೀಶರ ಮೂಲಕ ಪ್ರಕರಣದ ತನಿಖೆ ನಡೆಸಲು ನಿರ್ಧರಿಸಲಾಗಿದೆ. 

ಮಂಗಳೂರು ಅಥವಾ ರಾಯಚೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿ ಹುದ್ದೆ ಕೊಡಿಸುವ ವಿಚಾರದಲ್ಲಿ ಪ್ರೊ. ಜಯಶಂಕರ್, ರಾಮಸೇನೆಯ ರಾಜ್ಯಾಧ್ಯಕ್ಷ ಪ್ರಸಾದ ಅತ್ತಾವರ ಮೂಲಕ 17.5 ಲಕ್ಷ ರೂ. ನೀಡಿದ್ದರು. ಹಣ ಕೊಟ್ಟು ವರ್ಷ ಕಳೆದರೂ, ಕುಲಪತಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಜಯಶಂಕರ್ ಮಂಗಳೂರಿನ ಕಂಕನಾಡಿ ಠಾಣೆಗೆ ದೂರು ನೀಡಿದ್ದರು. ದೂರಿನಂತೆ ತ‌ನಿಖೆ ನಡೆಸಿದ ಪೊಲೀಸರು ಪ್ರಸಾದ್ ಅತ್ತಾವರನನ್ನು ಬಂಧಿಸಿದ್ದರು. 

ಪ್ರಕರಣ ಬೆಳಕಿಗೆ ಬರುತ್ತಲೇ ಕುಲಪತಿ ಹುದ್ದೆಗಾಗಿ ಲಂಚ ನೀಡಿದ್ದ ಸರಕಾರಿ ನೌಕರನಾಗಿರುವ ಪ್ರೊಫೆಸರ್ ಅನ್ನು ಅಮಾನತುಗೊಳಿಸಬೇಕೆಂದು ಆಗ್ರಹ ಕೇಳಿಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ, ಒತ್ತಾಯವೂ ಕೇಳಿಬಂದಿತ್ತು. ಈ ನಡುವೆ, ಪ್ರೊಫೆಸರ್ ಜೈಶಂಕರ್ ಗೆ ವಿವಿಯಿಂದ ಸ್ಪಷ್ಟನೆ ಕೇಳಿ ನೋಟಿಸ್ ನೀಡಲಾಗಿತ್ತು. ನೋಟೀಸಿಗೆ ವಿವಿಯ ಕುಲಪತಿ ಪ್ರೊ. ಯಡಪಡಿತ್ತಾಯರಿಗೆ ಪ್ರೊಫೆಸರ್ ಉತ್ತರವನ್ನೂ ನೀಡಿದ್ದರು. ನೋಟೀಸಿಗೆ ನೀಡಿದ್ದ ಉತ್ತರ ಮತ್ತು ಒಟ್ಟು ಪ್ರಕರಣ ಸಿಂಡಿಕೇಟ್ ಸಭೆಯಲ್ಲಿ ಇಂದು ಚರ್ಚೆಗೆ ಬಂದಿದೆ. ಒಬ್ಬ ಗೌರವಾನ್ವಿತ ಪ್ರೊಫೆಸರ್ ಆಗಿದ್ದುಕೊಂಡು ಕುಲಪತಿಯಾಗಲು ಲಂಚ ನೀಡಿರುವುದು ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಸಾಬೀತಾಗಿದ್ದಲ್ಲದೆ ಮಂಗಳೂರು ವಿವಿಯ ಗೌರವಕ್ಕೆ ಧಕ್ಕೆ ತಂದಿದ್ದಾರೆಂಬ ನೆಲೆಯಲ್ಲಿ ಅವರನ್ನು ಆರು ತಿಂಗಳ ಕಾಲ ಅಮಾನತು ಮಾಡಲು ಸಿಂಡಿಕೇಟ್ ಮಂಡಳಿ ಸಭೆ ನಿರ್ಧರಿಸಿದೆ.


Prof M Jayashanakar who had filed a cheating case against Prasad Attavar has been suspended by Managalore University Syndicate bench over bribe charges.