ರಾತ್ರಿಗೆ ಕರ್ಫ್ಯೂ, ಹಗಲಿಗೆ ಕೋವಿಡ್ ಮಾರ್ಶಲ್ ಫೀಲ್ಡಿಗೆ ; ಮಾಸ್ಕ್ ಹಾಕದೇ ಇದ್ದವರಿಗೆ 250 ರೂ. ದಂಡ

12-04-21 05:18 pm       Mangalore Correspondent   ಕರಾವಳಿ

ಹಗಲಿನಲ್ಲಿ ಮಾಸ್ಕ್ ಹಾಕದೇ ತಿರುಗಾಡುವ ಮಂದಿಗೆ ಬಿಸಿ ಮುಟ್ಟಿಸುವುದಕ್ಕಾಗಿ ಕೋವಿಡ್ ಮಾರ್ಶಲ್ ಗಳು ಬೀದಿಗೆ ಇಳಿದಿದ್ದಾರೆ.

ಮಂಗಳೂರು, ಎ.12: ಕೋವಿಡ್ ನಿಯಂತ್ರಣಕ್ಕಾಗಿ ಒಂದ್ಕಡೆ ರಾತ್ರಿ ವೇಳೆ ನೈಟ್ ಕರ್ಫ್ಯೂ ವಿಧಿಸಿದ್ದರೆ, ಮತ್ತೊಂದ್ಕಡೆ ಹಗಲಿನಲ್ಲಿ ಮಾಸ್ಕ್ ಹಾಕದೇ ತಿರುಗಾಡುವ ಮಂದಿಗೆ ಬಿಸಿ ಮುಟ್ಟಿಸುವುದಕ್ಕಾಗಿ ಕೋವಿಡ್ ಮಾರ್ಶಲ್ ಗಳು ಬೀದಿಗೆ ಇಳಿದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಜಂಟಿ ಆಪರೇಶನ್ ನಡೆಸಲಾಗಿದ್ದು, ಇದಕ್ಕಾಗಿ ಹೋಮ್ ಗಾರ್ಡ್ ಗಳನ್ನು ಬಳಕೆ ಮಾಡಲಾಗಿದೆ. ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳ ಜೊತೆ ಮಂಗಳೂರಿನಲ್ಲಿ ದಾಳಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಮಧ್ಯಾಹ್ನ 3 ಗಂಟೆ ಸುಮಾರಿಗೆ ನಗರದಾದ್ಯಂತ ಏಕಕಾಲದಲ್ಲಿ ಮಾರ್ಶಲ್ ಗಳು ರಸ್ತೆಗೆ ಇಳಿದಿದ್ದು ಮಾಸ್ಕ್ ಹಾಕದೇ ತಿರುಗಾಡುವ ಮಂದಿಗೆ 250 ರೂ. ದಂಡ ವಿಧಿಸುತ್ತಿದ್ದಾರೆ. ಸುಮಾರು 50 ಮಂದಿಯ ತಂಡವನ್ನು ಇದಕ್ಕಾಗಿ ಮಾಡಲಾಗಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಫೀಲ್ಡಿಗೆ ಇಳಿದಿದ್ದಾರೆ. ನಗರದ ಹಂಪನಕಟ್ಟೆ, ಕುದ್ರೋಳಿ, ಲಾಲ್ ಬಾಗ್ ಹೀಗೆ ಪ್ರಮುಖ ಭಾಗದಲ್ಲಿ ಕೋವಿಡ್ ಮಾರ್ಶಲ್ ಮತ್ತು ಅಧಿಕಾರಿಗಳು ಜೊತೆಯಾಗಿ ದಾಳಿ ನಡೆಸುತ್ತಿದ್ದಾರೆ.

ಹೋಮ್ ಗಾರ್ಡ್ ಸಿಬಂದಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಜೊತೆಯಾಗಿ ಬೇರೆ ಬೇರೆ ಕಡೆ ವಾಹನದಲ್ಲಿ ತೆರಳುತ್ತಿದ್ದು, ಜನರು ಇರುವಲ್ಲಿ ಗಾಡಿ ನಿಲ್ಲಿಸಿ ಸ್ಪಾಟ್ ಫೈನ್ ಜಾರಿಗೆ ತರುತ್ತಿದ್ದಾರೆ. ಮಾಸ್ಕ್ ಸರಿಯಾಗಿ ಹಾಕಿರದಿದ್ದರೆ ಸರಿ ಹಾಕುವಂತೆ ಸೂಚನೆ ಕೊಡುತ್ತಾರೆ. ಮಾಸ್ಕ್ ಇಲ್ಲದೇ ಇದ್ದವರಿಗೆ ಸ್ಥಳದಲ್ಲೇ 250 ರೂ. ದಂಡ ವಿಧಿಸುತ್ತಿದ್ದಾರೆ.

ಜಿಲ್ಲಾಡಳಿತದಿಂದ 125 ಹೋಮ್ ಗಾರ್ಡ್ ಸಿಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ವಿವಿಧ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದು, ಬಸ್ ನಿಲ್ದಾಣ, ಬಸ್, ಮಾರ್ಕೆಟ್ ಹೀಗೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾರ್ಶಲ್ ಗಳು ಬೀಡು ಬಿಟ್ಟಿದ್ದು, ಸ್ಥಳದಲ್ಲೇ ಹಣ ಪೀಕಿಸುವ ಕೆಲಸ ಮಾಡುತ್ತಿದ್ದಾರೆ. 

Mangalore Mcc deploy Marshals in public places to collect fines from those not following covid guidelines.