ಎ.18ರಿಂದ 26 ; ಸೋಮೇಶ್ವರ ಸೋಮನಾಥನಿಗೆ ಅಷ್ಟಬಂಧ ಬ್ರಹ್ಮಕಲಶ, ಬ್ರಹ್ಮರಥೋತ್ಸವ ಸಂಭ್ರಮ

17-04-21 05:49 pm       Mangalore Correspondent   ಕರಾವಳಿ

ಸೋಮೇಶ್ವರ ಸೋಮನಾಥ ದೇವಾಲಯದ ನವೀಕರಣ ಕಾರ್ಯ ಪೂರ್ಣಗೊಂಡಿದ್ದು ಎ.18ರಿಂದ 26ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿವೆ. 

ಉಳ್ಳಾಲ, ಎ.17 : ಇತಿಹಾಸ ಪ್ರಸಿದ್ಧ ಸೋಮೇಶ್ವರ ಸೋಮನಾಥ ದೇವಾಲಯದ ನವೀಕರಣ ಕಾರ್ಯ ಪೂರ್ಣಗೊಂಡಿದ್ದು ಎ.18ರಿಂದ 26ರ ವರೆಗೆ ಶ್ರೀ ಕ್ಷೇತ್ರದಲ್ಲಿ ಸೋಮನಾಥನಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ವೈದಿಕ ಕಾರ್ಯಗಳು ನಡೆಯಲಿವೆ. 

ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಸೋಮನಾಥ ದೇವಸ್ಥಾನದಲ್ಲಿ ನಡೆಯಬೇಕಿದ್ದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕೊರೋನಾ ಲಾಕ್ ಡೌನ್ ಕಾರಣ ರದ್ದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ದೇವಸ್ಥಾನದ ನವೀಕರಣ ಕಾರ್ಯ ಸಂಪೂರ್ಣಗೊಂಡು ಭಾನುವಾರದಿಂದ ಎ.26 ರ ವರೆಗೆ ಸೋಮನಾಥ ದೇವರಿಗೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ನಡೆಯಲಿದೆ. ಕಾರ್ಯಕ್ರಮದ ಬಗ್ಗೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ಬಿ.ರವೀಂದ್ರನಾಥ ರೈ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. 

ಸೋಮನಾಥ ದೇವಸ್ಥಾನದಲ್ಲಿ  ಗಣಪತಿ ಪ್ರಾರ್ಥನೆ,ಉಗ್ರಾಣ ಮುಹೂರ್ತ ಹಾಗೂ ಚಪ್ಪರ ಮುಹೂರ್ತದ ಮೂಲಕ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಗುವುದು. ಎ.19 ರ ಸೋಮವಾರ ಮಧ್ಯಾಹ್ನ 2.30 ಕ್ಕೆ ಸರಿಯಾಗಿ ತೊಕ್ಕೊಟ್ಟು ಜೈ ವೀರಮಾರುತಿ ವ್ಯಾಯಾಮ ಶಾಲೆಯಿಂದ ಸೋಮನಾಥ ಕ್ಷೇತ್ರಕ್ಕೆ ಬೃಹತ್ ಹೊರೆಕಾಣಿಕೆ ಮತ್ತು ನೂತನ ಬ್ರಹ್ಮರಥದ ಭವ್ಯ ಮೆರವಣಿಗೆ ಸಾಗಲಿದೆ. ಎ.20ರಿಂದ 25 ರ ತನಕ ಪ್ರತಿನಿತ್ಯವೂ ಕ್ಷೇತ್ರದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಕೋವಿಡ್ ನಿಯಮದಂತೇ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು. 

ಎ.26 ರ ಸೋಮವಾರ ಸೋಮನಾಥ ದೇವರಿಗೆ ಬೆಳಗ್ಗೆ 11.37 ರ ಕರ್ಕಾಟಕ ಲಗ್ನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದು ರಾತ್ರಿ ಶತಮಾನದ ನಂತರ ಶ್ರೀ ಸೋಮನಾಥ ದೇವರ "ಬ್ರಹ್ಮರಥಾರೋಹಣ" ರಥೋತ್ಸವ, ಸುಡುಮದ್ದು ಪ್ರದರ್ಶನ ನಡೆಯಲಿರುವುದು. ಎ.27 ರಿಂದ 30ರ ವರೆಗೆ ವರ್ಷಾವಧಿ ಉತ್ಸವ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಜನಾರ್ದನ ಹೊಳ್ಳ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ವರ್ಕಾಡಿ, ಕಾರ್ಯದರ್ಶಿಗಳಾದ ರವಿಶಂಕರ್ ಸೋಮೇಶ್ವರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಯು.ಸದಾನಂದ ಬಂಗೇರ, ಎಸ್.ರಾಮದಾಸ್, ಭಗವತೀಶ್ ಬಿ.ಅಡ್ಕ, ಪವಿತ್ರ ಕುಮಾರ್ ಗಟ್ಟಿ, ವಸಂತ ಉಳ್ಳಾಲ್ , ಶ್ರೀಮತಿ ಹರಿಣಾಕ್ಷಿ ಕೊಲ್ಯ, ಶ್ರೀಮತಿ ಮಾಧವಿ ಉಳ್ಳಾಲ, ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕರಾದ ಹರೀಶ್ ಕುತ್ತಾರು, ಸುರೇಶ್ ಭಟ್ನಗರ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕರಾದ ರಾಘವ ಆರ್.ಉಚ್ಚಿಲ್, ದೀಪಕ್ ಪಿಲಾರ್, ಪದ್ಮನಾಭ ಗಟ್ಟಿ ಬಜಿಲಕೇರಿ ಮೊದಲಾದವರು ಉಪಸ್ಥಿತರಿದ್ದರು.