ಕೋವಿಡ್ ನಿರ್ಬಂಧ ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಸೇವೆ ರದ್ದಿಗೆ ಭಕ್ತರ ಆಕ್ರೋಶ

21-04-21 12:45 pm       Mangalore Correspondent   ಕರಾವಳಿ

ಕೋವಿಡ್ ನಿರ್ಬಂಧಗಳನ್ನು ಹೇರಿದ್ದರಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿಢೀರ್ ಆಗಿ ಸರ್ಪ ಸಂಸ್ಕಾರ ಸೇವೆಗಳನ್ನು ರದ್ದುಗೊಳಿಸಲಾಗಿದೆ.

ಸುಳ್ಯ, ಎ.21: ರಾಜ್ಯ ಸರಕಾರ ಕೋವಿಡ್ ನಿರ್ಬಂಧಗಳನ್ನು ಹೇರಿದ್ದರಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿಢೀರ್ ಆಗಿ ಸರ್ಪ ಸಂಸ್ಕಾರ ಸೇವೆಗಳನ್ನು ರದ್ದುಗೊಳಿಸಲಾಗಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಪ ಸಂಸ್ಕಾರ ಸೇವೆಯ ಹಿನ್ನೆಲೆಯಲ್ಲಿ ನೂರಾರು ಭಕ್ತರು ಒಂದು ದಿನದ ಮುನ್ನವೇ ಕ್ಷೇತ್ರಕ್ಕೆ ಆಗಮಿಸಿದ್ದರು. ಸರ್ಪ ಸಂಸ್ಕಾರ ಸೇವೆ ನೆರವೇರಿಸುವ ಮಂದಿ ಎರಡು ದಿನದ ಮೊದಲೇ ಬಂದು ಇರಬೇಕಾಗುವುದರಿಂದ ಭಕ್ತರು ಸೇವೆಯನ್ನು ತಿಂಗಳ ಮೊದಲೇ ಬುಕ್ ಮಾಡಿಕೊಂಡು ಬಂದಿದ್ದರು.

ಆದರೆ, ದಿಢೀರ್ ಆಗಿ ಸೇವೆಯನ್ನು ಬಂದ್ ಮಾಡಿರುವುದಕ್ಕೆ ದೇವಸ್ಥಾನದ ಆಡಳಿತ ಸಮಿತಿಯನ್ನು ಭಕ್ತರು ತರಾಟೆಗೆ ತೆಗೆದುಕೊಂಡರು. ಸರ್ಪ ಸಂಸ್ಕಾರ ಸೇವೆಯನ್ನು ನಡೆಸಲು ಕುಕ್ಕೆಗೆ ಬಂದಿದ್ದೆವು. ಎರಡು- ಮೂರು ತಿಂಗಳ ಮೊದಲೇ ಬುಕ್ ಮಾಡಿದ್ದೆವು. ಆದರೆ ಈಗ ಕೋವಿಡ್ ನೆಪದಲ್ಲಿ ದಿಢೀರ್ ಆಗಿ ರದ್ದು ಪಡಿಸಿದ್ದಾರೆ. ದೂರದ ಊರುಗಳಿಂದ ಎರಡು ದಿನ ಮೊದಲೇ ರೂಮ್ ಬುಕ್ ಮಾಡಿಕೊಂಡು ಉಳಿದುಕೊಂಡವರಿಗೆ ಸಮಸ್ಯೆ ಆಗಿದೆ. ಸೇವೆ ಇರುವುದನ್ನು ಖಚಿತಪಡಿಸಿಕೊಂಡೇ ಬಂದಿದ್ದೆವು , ಈಗ ಇಲ್ಲ ಎಂದರೆ ನಾವು ಏನು ಮಾಡಬೇಕು ಎಂದು ಪ್ರಶ್ನೆ ಮಾಡುತ್ತಿದ್ದರು.

ಸರ್ಪ ಸಂಸ್ಕಾರ ಸೇವೆ ಎರಡು ದಿನ ನಡೆಯುತ್ತದೆ. ಅದಕ್ಕಾಗಿ ಮುನ್ನಾ ದಿನವೇ ಬಂದು ಇರಬೇಕಾಗುತ್ತದೆ. ಆದರೆ, ಸರಕಾರದ ಮಾರ್ಗಸೂಚಿ ದಿಢೀರ್ ಆಗಿ ಬಂದಿದ್ದು, ಅದನ್ನು ಪಾಲಿಸಬೇಕಾಗುತ್ತದೆ. ಗುರುವಾರದ ಸೇವೆಗೆ ಅವಕಾಶ ಇಲ್ಲದ ಕಾರಣ ಬುಧವಾರದ ಸೇವೆಯನ್ನು ರದ್ದು ಪಡಿಸಲಾಗಿದೆ ಎಂದು ಆಡಳಿತ ಮಂಡಳಿಯ ಸದಸ್ಯರು ಹೇಳಿದರು. ಸರಕಾರದ ಮಾರ್ಗಸೂಚಿ ಪ್ರಕಾರ ದೇವಾಲಯದಲ್ಲಿ ಯಾವುದೇ ಸೇವೆಗಳನ್ನು ನಡೆಸಲು ಅವಕಾಶ ಇಲ್ಲ. ಆದರೆ ಈ ಬಗ್ಗೆ ಅರಿಯದ ನೂರಾರು ಭಕ್ತಾದಿಗಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. 

Devotees turn angry after Poojas being cancelled in Kukke Shri Subrahmanya Temple. Many devotees had already arrived from poojas but we're disappointed as all the prayers were cancelled.