ಆಕ್ಸಿಜನ್ ಕೊರತೆ ಬೆನ್ನಲ್ಲೇ ಎಚ್ಚೆತ್ತ ಸರಕಾರ ; ಕಾಪು ಬಳಿ ಆಕ್ಸಿಜನ್‌ ರಿಫಿಲ್ಲಿಂಗ್‌ ಘಟಕ ಸ್ಥಾಪನೆ

26-04-21 05:21 pm       Udupi Correspondent   ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಪ್ರಥಮ ಆಕ್ಸಿಜನ್‌ ರಿಫಿಲ್ಲಿಂಗ್‌ ಘಟಕ ಕಾಪು ತಾಲೂಕಿನ ಬೆಳಪುವಿನಲ್ಲಿ ಆರಂಭಗೊಂಡಿದೆ. 

ಉಡುಪಿ, ಏ.26 : ದೇಶದಲ್ಲಿ ಕೊರೊ ಕಾರಣದಿಂದ ಆಕ್ಸಿಜನ್‌ ಕೊರತೆ ಕಾಣಿಸಿಕೊಂಡ ಬೆನ್ನಲ್ಲೇ  ಸರಕಾರ ಎಚ್ಚತ್ತುಕೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಥಮ ಆಕ್ಸಿಜನ್‌ ರಿಫಿಲ್ಲಿಂಗ್‌ ಘಟಕ ಕಾಪು ತಾಲೂಕಿನ ಬೆಳಪುವಿನಲ್ಲಿ ಆರಂಭಗೊಂಡಿದೆ. 

ಮಂಗಳೂರಿನ ಬೈಕಂಪಾಡಿ ಮತ್ತು ಕಾರ್ನಾಡ್‌ ಕೈಗಾರಿಕಾ ವಲಯದಲ್ಲಿರುವ ಮೂರು ಆಕ್ಸಿಜನ್‌ ಘಟಕಗಳಿಂದ ಸದ್ಯ ಉಡುಪಿ ಜಿಲ್ಲೆಯ ಆಸ್ಪತ್ರೆಗಳು ಮತ್ತು ಕೈಗಾರಿಕೆಗಳಿಗೆ ಆಕ್ಸಿಜನ್‌ ಪೂರೈಸಲಾಗುತ್ತಿದೆ. ಆದರೆ ಈಗ ಬೆಳಪುವಿನಲ್ಲಿ ಆಕ್ಸಿಜನ್‌ ರಿಫಿಲ್ಲಿಂಗ್‌ ಸ್ಥಾವರ ಸ್ಥಾಪನೆಯಾಗಿದ್ದು ಜಿಲ್ಲೆಯಲ್ಲೇ ರೀ ಫಿಲ್ಲಿಂಗ್ ಸಾಧ್ಯವಾಗಲಿದೆ. 

ಬೆಳಪು ಬಳಿಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಎಸ್‌.ಎನ್‌. ಕ್ರೈಯೋಜನಿಕ್ಸ್‌ ಪ್ರೈ. ಲಿ. ಸಂಸ್ಥೆಯು ಕೈಗಾರಿಕೆಗೆ ಮತ್ತು ಆಸ್ಪತ್ರೆಗಳಿಗೆ ಆಕ್ಸಿಜನ್‌ ಸಿಲಿಂಡರ್ ಸರಬರಾಜು ಮಾಡುವ ನಿಟ್ಟಿನಲ್ಲಿ ಸ್ಥಾಪಿಸಿದೆ. ಇಲ್ಲಿಗೆ ಬೇಕಾಗುವ ಲಿಕ್ವಿಡ್‌ ಆಕ್ಸಿಜನ್‌ ಅನ್ನು ಬೆಂಗಳೂರು ಮತ್ತು ಬಳ್ಳಾರಿ ಸಮೀಪದ ತೋರಂಗಲ್‌ನಿಂದ ತರಿಸಿಕೊಳ್ಳಲಾಗುತ್ತದೆ. ಒಮ್ಮೆಗೆ 20 ಸಾವಿರ ಕ್ಯೂಬಿಕ್‌ ಮೀ. ಲಿಕ್ವಿಡ್‌ ಆಕ್ಸಿಜನ್‌ ತರಿಸಿ ದಾಸ್ತಾನು ಮಾಡಿ ಆನಂತರ ಗ್ಯಾಸ್‌ ಆಗಿ ಸಂಸ್ಕರಿಸಿ ಸಿಲಿಂಡರ್‌ಗಳಿಗೆ ತುಂಬಲಾಗುತ್ತದೆ. 

ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮುಖ್ಯಸ್ಥ ನಟರಾಜ್‌, ಸ್ಥಾವರ ಸ್ಥಾಪನೆಯಿಂದಾಗಿ ಜಿಲ್ಲೆಯ ಆಸ್ಪತ್ರೆಗಳಿಗೆ ಕಡಿಮೆ ಅವಧಿಯಲ್ಲಿ ಆಕ್ಸಿಜನ್‌ ಪೂರೈಕೆ ಸಾಧ್ಯವಾಗುತ್ತದೆ. ಜಿಲ್ಲೆಯ ಉಡುಪಿ, ಮಣಿಪಾಲ, ಕುಂದಾಪುರ, ಬ್ರಹ್ಮಾವರ, ಕಾರ್ಕಳ ಸೇರಿದಂತೆ ಸರಕಾರಿ ಮತ್ತು ಖಾಸಗಿ ವಲಯದ 40ಕ್ಕೂ ಅಧಿಕ ಆಸ್ಪತ್ರೆಗಳಿಗೆ ಆಕ್ಸಿಜನ್‌ ಸರಬರಾಜು ಮಾಡಲು ಸುಲಭ ಎಂದು ತಿಳಿಸಿದ್ದಾರೆ.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ಬೆಳಪುವಿನ ಈ ಘಟಕದಿಂದಾಗಿ ಜಿಲ್ಲೆಯ ಮೆಡಿಕಲ್‌ ಎಮರ್ಜೆನ್ಸಿಗೆ ಸಹಾಯವಾಗಲಿದೆ. ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

The government now opens an oxygen refilling center in Kapu, Udupi.