ಕೊರೊನಾ ಓಡಿಸಲು ಸ್ಟೀಮಿಂಗ್ ವ್ಯವಸ್ಥೆ ; ಬರ್ಕೆ ಠಾಣೆಯಲ್ಲಿ ಪೊಲೀಸರಿಗೆ ರಿಲೀಫ್ !

01-05-21 04:41 pm       Mangalore Correspondent   ಕರಾವಳಿ

ಮಂಗಳೂರಿನ ಪೊಲೀಸ್ ಸ್ಟೇಶನ್ ಒಂದರಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಎನ್ನುವಂತೆ ವಿಶೇಷ ರೀತಿಯ ಸ್ಟೀಮಿಂಗ್ ವ್ಯವಸ್ಥೆ ಮಾಡಲಾಗಿದೆ.

ಮಂಗಳೂರು, ಮೇ 1: ಕೊರೊನಾ ಹರಡುವುದನ್ನು ತಪ್ಪಿಸಲು ರಾಜ್ಯ ಸರಕಾರ ಲಾಕ್ಡೌನ್ ಹೇರಿದೆ. ಆದರೆ, ಏನೇ ಲಾಕ್ಡೌನ್ ಹೇರಿದರೂ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕರ್ತವ್ಯ ಮಾಡಬೇಕಾದವರು ಪೊಲೀಸರು. ಇದೇ ಕಾರಣಕ್ಕೆ ಪೊಲೀಸರು ತಮಗೆ ಸೋಂಕು ಹರಡದಂತೆ ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ. ಮಂಗಳೂರಿನ ಪೊಲೀಸ್ ಸ್ಟೇಶನ್ ಒಂದರಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಎನ್ನುವಂತೆ ವಿಶೇಷ ರೀತಿಯ ಸ್ಟೀಮಿಂಗ್ ವ್ಯವಸ್ಥೆ ಮಾಡಲಾಗಿದೆ.

ಹೌದು.. ಮಂಗಳೂರು ನಗರದ ಬರ್ಕೆ ಠಾಣೆಯಲ್ಲಿ ಪೊಲೀಸ್ ಕಮಿಷನರ್ ಶಶಿಕುಮಾರ್ ಉಸ್ತುವಾರಿಯಲ್ಲಿ ವಿಶೇಷ ರೀತಿಯ ಸ್ಟೀಮಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಹೊರಗೆ ತೆರಳಿ, ಠಾಣೆಗೆ ಬರುವ ಸಿಬಂದಿ ಸ್ಟೀಮಿಂಗ್ ಪೂರೈಸಿಕೊಂಡೇ ಒಳಬರಬೇಕಾಗಿದೆ. ಐದು ನಿಮಿಷ ಕಾಲ ಬಿಸಿ ಶಾಖವನ್ನು ಉಸಿರಿನಲ್ಲಿ ಒಳಗೆಳೆದುಕೊಂಡರೆ ಗಂಟಲಲ್ಲಿರುವ ರೋಗಾಣು ಸಾಯುತ್ತದೆ ಎನ್ನಲಾಗುತ್ತಿದೆ.

ಇದಕ್ಕಾಗಿ ಠಾಣೆಯ ಇನ್ ಸ್ಪೆಕ್ಟರ್ ಜ್ಯೋತಿರ್ಲಿಂಗ ಮತ್ತು ಸಿಬಂದಿ ಸೇರಿಕೊಂಡು ಕುಕ್ಕರ್ ಬಳಸಿ, ಕೊಳವೆಯ ಮೂಲಕ ಶಾಖ ಹೊರಗೆ ಬರುವಂತೆ ಮಾಡಿದ್ದಾರೆ. ತುಳಸಿ, ಲವಂಗ ಇನ್ನಿತರ ಆಯುರ್ವೇದ ಅಂಶಗಳುಳ್ಳ ಸಸ್ಯಗಳನ್ನು ನೀರಿಗೆ ಹಾಕಿ ಕುದಿಸಿ, ಅದರಿಂದ ಬರುವ ಶಾಖವನ್ನು ಮೂರು ಕೊಳವೆಗಳಲ್ಲಿ ಹೊರಬಿಡುತ್ತಿದ್ದು, ಸಿಬಂದಿ ಕುಳಿತಲ್ಲೇ ಶಾಖ ಒಳಗೆಳೆದುಕೊಳ್ಳಬಹುದು. ಹೀಗೆ ಶಾಖವನ್ನು ಮೂಗು ಮತ್ತು ಬಾಯಲ್ಲಿ ಒಳಗೆಳೆದುಕೊಂಡಲ್ಲಿ ಗಂಟಲಲ್ಲಿ ಕಟ್ಟಿಕೊಂಡ ಕಫ ನೀರಾಗುತ್ತದೆ. ಅಲ್ಲದೆ, ಮೂಗು ಕಟ್ಟಿದ್ದರೆ, ಶ್ವಾಸಕೋಶದಲ್ಲಿ ಕಫ ಕಟ್ಟಿಕೊಂಡಿದ್ದರೆ ಕರಗಿ ಗಂಟಲು ಸ್ವಚ್ಛವಾಗುತ್ತದೆ. ಹೀಗೆ ಮಾಡುವುದರಿಂದ ಯಾರಲ್ಲಾದರೂ ರೋಗಾಣು ಅಂಶ ಇದ್ದರೂ, ಅಲ್ಲಿನ ಇತರೇ ಸಿಬಂದಿಗೆ ಹರಡುವುದನ್ನು ತಪ್ಪಿಸಬಹುದು.

ಶೀತ, ನೆಗಡಿ ಇದ್ದವರು ಅಥವಾ ಇತರೇ ಈ ರೀತಿಯ ರೋಗದ ಸಮಸ್ಯೆ ಇದ್ದವರು ಬಿಸಿ ಶಾಖವನ್ನು ಒಳಗೆಳೆದುಕೊಳ್ಳುವುದರಿಂದ ಬಹಳಷ್ಟು ಲಾಭ ಇದೆ ಎಂದು ಆಯುರ್ವೇದ ಹೇಳುತ್ತದೆ. ಈಗಾಗ್ಲೇ ಮಂಗಳೂರು ನಗರದ ಉರ್ವಾ ಠಾಣೆಯಲ್ಲಿ ಕೊರೊನಾ ಓಡಿಸಲು ಕಷಾಯ ತಯಾರಿಸಿ ಕುಡಿಯುವ ಪದ್ಧತಿ ತರಲಾಗಿದೆ. ಈಗ ಬರ್ಕೆ ಠಾಣೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟು ಸ್ಟೀಮಿಂಗ್ ವ್ಯವಸ್ಥೆಯನ್ನು ಅನುಷ್ಠಾನಿಸಲಾಗಿದೆ. ವಿಶೇಷ ಅಂದ್ರೆ, ಬರ್ಕೆ ಠಾಣೆಯಲ್ಲಿ ಪೊಲೀಸರು ನಡೆಸುತ್ತಿರುವ ಪ್ರಯೋಗ ರಾಷ್ಟ್ರದ ಗಮನ ಸೆಳೆದಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿರುವ ಉಡುಪಿ ಮೂಲದ ಬಿ.ಎಲ್. ಸಂತೋಷ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕ್ಕೊಂಡಿದ್ದಾರೆ.

Video: 

As the pandemic rages on, people are trying various ways to beat the virus. The barke Police station in Mangalore has come up with a contraption attached to a pressure cooker that helps generate steam for inhalation.