ಬಂದರು ದಕ್ಕೆಯಲ್ಲಿ ಸಾರ್ವಜನಿಕರು ಮೀನು ಖರೀದಿ ಮಾಡುವಂತಿಲ್ಲ !

04-05-21 12:46 pm       Mangalore Correspondent   ಕರಾವಳಿ

ಜನ ಸೇರುವುದರಿಂದ ಸೋಂಕು ಹರಡುತ್ತೆ ಎಂಬ ಭೀತಿಯಲ್ಲಿ ಬಂದರಿನಲ್ಲಿ ಸಾರ್ವಜನಿಕರು ಮೀನು ಖರೀದಿ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. 

ಮಂಗಳೂರು, ಮೇ 4 : ನಗರದ ಮೀನುಗಾರಿಕೆ ಬಂದರು ದಕ್ಕೆಯಲ್ಲಿ ಸಾರ್ವಜನಿಕರು ನೇರವಾಗಿ ಮೀನು ಖರೀದಿ ಮಾಡಲು ಬರುತ್ತಿದ್ದರು. ಜನ ಸೇರುವುದರಿಂದ ಸೋಂಕು ಹರಡುತ್ತೆ ಎಂಬ ಭೀತಿಯಲ್ಲಿ ಬಂದರಿನಲ್ಲಿ ಸಾರ್ವಜನಿಕರು ಮೀನು ಖರೀದಿ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. 

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಸಕರು ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ಜೊತೆ ಹಳೆ ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕರು ಮೀನುಗಾರಿಕೆ ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿ ಗಾಳಿಗೆ ತೂರಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮೀನು ಖರೀದಿಸುತ್ತಿದ್ದು ಜನಜಂಗುಳಿ ಏರ್ಪಡುತ್ತಿದ್ದು , ಇದರಿಂದ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಬಂದರಿನಲ್ಲಿ ಮೀನು ಖರೀದಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ‌. ನಿಯಮ ಉಲ್ಲಂಘನೆ ಮಾಡಿದಲ್ಲಿ ಅಂತವರ ವಿರುದ್ಧ ದಂಡ ವಸೂಲಿ ಮಾಡುವುದರೊಂದಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಾರ್ವಜನಿಕರು ಮೀನುಗಳನ್ನು ಸ್ಥಳೀಯ ವ್ಯಾಪ್ತಿಯ ಮೀನು ಮಾರುಕಟ್ಟೆಗಳಲ್ಲಿ ಖರೀದಿಸಬಹುದು. ಅಲ್ಲದೆ, ಸ್ಥಳೀಯ ಮಾರುಕಟ್ಟೆಗಳಲ್ಲಿಯೇ ಕಟ್ಟಿಂಗ್ ಮಾಡುವುದು ಮತ್ತು ಶುಚಿಗೊಳಿಸುವುದನ್ನೂ ಮಾಡಬಹುದು.‌ ಮಂಗಳೂರು ಮೀನುಗಾರಿಕೆ ಬಂದರಿನ ಒಳಗೆ ಹೊರ ರಾಜ್ಯದಿಂದ ಬರುವ ಮೀನುಗಳ ಹೋಲ್ ಸೇಲ್ ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರ ಮಾಡುವಂತಿಲ್ಲ.  ಸಾರ್ವಜನಿಕರು ಕೂಡ ಬಂದರಿನಲ್ಲಿ ಅನವಶ್ಯಕ ಓಡಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Covid lockdown effect Entry of people into Bunder Port is prohibited orders Mangalore DC Dr Rajendra Kumar after a meeting held with officals.