ಬಹ್ರೇನ್ ಆಕ್ಸಿಜನ್ ; ಬಿಜೆಪಿ ನಾಯಕರ ಮೋದಿ ಕ್ರೆಡಿಟ್ಟಿಗೆ ಯು.ಟಿ ಖಾದರ್ ವ್ಯಂಗ್ಯ !

06-05-21 05:23 pm       Mangalore Correspondent   ಕರಾವಳಿ

ಮಂಗಳೂರಿಗೆ ಬಂದ 40 ಮೆಟ್ರಿಕ್ ಟನ್ ಆಕ್ಸಿಜನ್‌ನ ಸಂಪೂರ್ಣ ಕ್ರೆಡಿಟ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲಬೇಕೆಂಬ ಬಿಜೆಪಿಗರ ವಾದಕ್ಕೆ ಮಾಜಿ ಸಚಿವ ಯು.ಟಿ ಖಾದರ್ ವ್ಯಂಗ್ಯವಾಡಿದ್ದಾರೆ.

ಮಂಗಳೂರು, ಮೇ 6 : ಬಹ್ರೇನ್‌ನಿಂದ ಮಂಗಳೂರಿಗೆ ತರಿಸಿದ 40 ಮೆಟ್ರಿಕ್ ಟನ್ ಆಕ್ಸಿಜನ್‌ ಸಂಪೂರ್ಣ ಕ್ರೆಡಿಟ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲಬೇಕೆಂಬ ಸ್ಥಳೀಯ ಬಿಜೆಪಿ ನಾಯಕರ ವಾದಕ್ಕೆ ಮಾಜಿ ಸಚಿವ ಯು.ಟಿ. ಖಾದರ್ ವ್ಯಂಗ್ಯವಾಡಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿ ಕುಹಕವಾಡಿರುವ ಯು.ಟಿ ಖಾದರ್, ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಬಳಸಲು ನಮಗೆ ಅವಕಾಶವಿಲ್ಲ. ದೂರದ ಬಹ್ರೇನ್‌ನಿಂದ ಕಳಿಸಿಕೊಟ್ಟ ಆಕ್ಸಿಜನ್ ಹಡಗೇರಿ ಖುಷಿಪಡುವ ಬಿಜೆಪಿ ನಾಯಕರ ಆತ್ಮನಿರ್ಭರಕ್ಕೆ ಚಪ್ಪಾಳೆ ಹೊಡೆಯಬೇಕೋ, ದೀಪ ಹಚ್ಚಬೇಕೋ ತಿಳಿಯುತ್ತಿಲ್ಲ. ಧಿಕ್ಕಾರವಿದೆ ನಿಮ್ಮ ಆಡಳಿತ ವೈಫಲ್ಯಕ್ಕೆ ಅಂತಾ ಆಕ್ಸಿಜನ್ ಟ್ಯಾಂಕ್ ಎದುರು ನಿಂತ ಬಿಜೆಪಿ ನಾಯಕರ ಫೋಟೋ ಹಾಕಿ ವ್ಯಂಗ್ಯವಾಡಿದ್ದಾರೆ.

ನಿನ್ನೆ ಬಹ್ರೇನ್ ಮತ್ತು ಭಾರತ ಸರ್ಕಾರದ ನಡುವಿನ ಸಹಕಾರ ಒಪ್ಪಂದದಂತೆ 30 ಮೆಟ್ರಿಕ್ ಟನ್‌ನ ಎರಡು ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್‌ಗಳು ನವಮಂಗಳೂರು ಬಂದರಿಗೆ ಬಂದಿತ್ತು. ಭಾರತೀಯ ಕರಾವಳಿ ತಟರಕ್ಷಣಾ ಪಡೆಯ ಐಎನ್ಎಸ್ ತಲ್ವಾರ್ ಆಕ್ಸಿಜನ್ ಟ್ಯಾಂಕರ್ ಗಳನ್ನು ಬಹ್ರೇನ್‌ನಿಂದ ಹೊತ್ತು ತಂದಿದ್ದು, ಕ್ರೇನ್ ಮೂಲಕ ಟ್ಯಾಂಕರ್ ಗಳನ್ನು ಬಂದರಿನಲ್ಲಿ ಕೆಳಗಿಳಿಸಲಾಗಿತ್ತು.

ನೌಕೆಯಲ್ಲಿ ಕೊವೀಡ್ ಚಿಕಿತ್ಸೆಗೆ ಬಳಸುವ ಇತರ ವೈದ್ಯಕೀಯ ಉಪಕರಣಗಳನ್ನೂ ಕಳಿಸಿಕೊಡಲಾಗಿದ್ದು, ಯುದ್ಧ ನೌಕೆಯನ್ನು ಸ್ವಾಗತ ಮಾಡಲು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಅಧಿಕಾರಿಗಳು ಜನಪ್ರತಿನಿಧಿಗಳು ಭಾಗವಹಿಸಿದ್ದರು.

Read: ಬಹರೈನ್ ಸಹಾಯ ಹಸ್ತ ; ಮಂಗಳೂರಿಗೆ ಬಂತು 40 ಮೆಟ್ರಿಕ್ ಟನ್ ಆಕ್ಸಿಜನ್ !!