ಹೆಚ್ಚುತ್ತಿರುವ ಸೋಂಕು ; ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಕಠಿಣ ಕ್ರಮ ! ನಾಳೆಯಿಂದ ಹೊರಗೆ ಬರುವಂತಿಲ್ಲ ! ಬೆಳಗ್ಗೆ 10ಕ್ಕೆ ಫುಲ್ ಕ್ಲೋಸ್ ! ವಾಹನ ಜಪ್ತಿ , ಲಾಠಿ ರುಚಿ ಉಚಿತ !

06-05-21 05:56 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾಡಳಿತ ಮೇ 7ರಿಂದ (ಶುಕ್ರವಾರ) ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಟಫ್ ರೂಲ್ಸ್ ಜಾರಿಗೆ ತರಲು ನಿರ್ಧರಿಸಿದೆ. 

ಮಂಗಳೂರು, ಮೇ 6: ದಿನದಿಂದ ದಿನಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮೇ 7ರಿಂದ (ಶುಕ್ರವಾರ) ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಟಫ್ ರೂಲ್ಸ್ ಜಾರಿಗೆ ತರಲು ನಿರ್ಧರಿಸಿದೆ. 

ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಕೊರೋನಾ ಪ್ರಕರಣ ಹೆಚ್ಚುತ್ತಿರುವುದರಿಂದ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಸದರು, ಶಾಸಕರ ಜೊತೆ ತುರ್ತು ಸಭೆ ನಡೆಸಿದ್ದಾರೆ. 

ಸಭೆಯಲ್ಲಿ ಕೋವಿಡ್ ಸೋಂಕು  ಹರಡುವುದನ್ನು ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂಬ ಸಲಹೆಗಳು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಕೇಳಿಬಂದಿದ್ದು ಇದರಂತೆ ಜಿಲ್ಲಾಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. 

ಇದರಂತೆ, ದಿನಸಿ ಖರೀದಿಗೆ ಮತ್ತು ಜನರ ಓಡಾಟದ ವಿಚಾರದಲ್ಲಿ ಕೆಳಗಿನಂತೆ ಕ್ರಮ ಜರುಗಿಸಲಾಗಿದೆ. ಜಿಲ್ಲೆಯಾದ್ಯಂತ ಮೇ 7 ರ ಬೆಳಗ್ಗೆ 6 ರಿಂದ 9 ಗಂಟೆ ವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ಇರಲಿದೆ. 10 ಗಂಟೆ ಒಳಗೆ ವ್ಯಾಪಾರಸ್ಥರು ಹಾಗೂ ಖರೀದಿದಾರರು ಮನೆ ಸೇರಬೇಕು. 10 ಗಂಟೆಯ ಬಳಿಕ ಜನರು ರಸ್ತೆ ಮೇಲೆ, ವಾಹನಗಳಲ್ಲಿ ಓಡಾಡುವುದು ಕಂಡುಬಂದರೆ ವಾಹನ ಜಪ್ತಿ ಸೇರಿದಂತೆ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. 

ವೈದ್ಯಕೀಯ ಅಗತ್ಯಕ್ಕೆ ತೆರಳುವವರು ತಮ್ಮ ಮನೆಯ ಹತ್ತಿರದ ಮೆಡಿಕಲ್ ಗಷ್ಟೆ ಹೋಗಬೇಕು‌. ವಾಹನಗಳಲ್ಲಿ ಬೇರೆ ಕಡೆ ಹೋದ್ರೆ ವಾಹನ ಸೀಝ್ ಮಾಡಲು ಪೊಲೀಸರಿಗೆ ಅವಕಾಶ ನೀಡಲಾಗಿದೆ. ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲು ಪೊಲೀಸರ ಮೂಲಕ ಲಾಠಿ ಎತ್ತಲು ಅನುಮತಿ ನೀಡಲಾಗಿದೆ.

ಮೇ 15 ಬಳಿಕ ಮದುವೆ, ಗೃಹಪ್ರವೇಶ, ಹುಟ್ಟಿದ ಹಬ್ಬ ಸೇರಿದಂತೆ ಯಾವುದೇ ಕಾರ್ಯಕ್ರಮ ನಡೆಸಲು ಅವಕಾಶ ಇರುವುದಿಲ್ಲ. ಮೇ 15 ರ ಬಳಿಕ ನಿಗದಿಯಾಗಿರುವ ಎಲ್ಲ ರೀತಿಯ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲು ಜಿಲ್ಲಾಡಳಿತ ನಿರ್ಣಯ ಮಾಡಿದೆ.‌ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ಪಡೆದಿದ್ದರೂ ಆಯಾ ಭಾಗದ ಅಧಿಕಾರಿಗಳು ಸಂಬಂಧಿತರ ಮನವೊಲಿಸಿ ಅದನ್ನು ಮುಂದಕ್ಕೆ ಹಾಕಿಸುವಂತೆ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. 

ಸಭೆಯಲ್ಲಿ ಪೊಲೀಸ್ ಕಮಿಷನರ್ ಶಶಿಕುಮಾರ್, ಸಂಸದ ನಳಿನ್ ಕುಮಾರ್, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಮಾಜಿ ಸಚಿವ ಯು.ಟಿ.ಖಾದರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 

ಸಭೆಯಲ್ಲಿ ಕೇಳಿಬಂದ ಸಲಹೆಗಳು... 

  • ಗ್ರಾಮೀಣ ಪ್ರದೇಶದಲ್ಲಿ ಮದುವೆ ಕಾರ್ಯಕ್ರಮಗಳಿದ್ದರೆ, ಬೆಂಗಳೂರು ಮತ್ತಿತರ ನಗರ ಪ್ರದೇಶಗಳ ಮಂದಿ ಭಾಗವಹಿಸುತ್ತಿದ್ದು ಇದರಿಂದಾಗಿ ಸೋ‌ಂಕು ಹೆಚ್ಚು ಹರಡುತ್ತಿದೆ. 
  • ಪಾಸಿಟಿವ್ ಆದವರು ಕೂಡ ಹೊರಗಿನ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದಾರೆ. ಹೋಮ್ ಐಸೊಲೇಶನ್ ಆದವರು ಕ್ವಾರಂಟೈನ್ ನಿಯಮ ಪಾಲನೆ ಮಾಡುತ್ತಿಲ್ಲ. 
  • ಬಿಗಿಯಾದ ಲಾಕ್ಡೌನ್ ಇಲ್ಲದೆ ಸೋಂಕು ಹರಡುವುದನ್ನು ತಪ್ಪಿಸಲು ಸಾಧ್ಯವಿಲ್ಲ. 
  • ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ ಆಯಾ ವಾರ್ಡ್  ಗಳಲ್ಲಿ ಟಾಸ್ಕ್ ಫೋರ್ಸ್‌ ರಚಿಸಿ, ಅದರ ಜವಾಬ್ದಾರಿಯನ್ನು ಕಾರ್ಪೊರೇಟರಿಗೆ ವಹಿಸಬೇಕು.

Covid spike in Dakshina Kannada Mangalore DC orders tougher rules to restrict the unnecessary movement of people from May 7th. As per the order, people will be allowed to purchase essential commodities from 6 am to 9 am, rather than till 10 am. People will be allowed to purchase medical supplies from the nearest pharmacies.