ವೀಕೆಂಡಲ್ಲಿ ಫುಲ್ ಬಂದ್ ; ದಿನಸಿ ಇಲ್ಲ , ಹಾಲು, ತರಕಾರಿ ಮಾತ್ರ ! ಆನ್ ಲೈನ್ ಮಾರಾಟಕ್ಕೆ ಅವಕಾಶ !

06-05-21 08:27 pm       Mangaluru Correspondent   ಕರಾವಳಿ

ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದ ಕರ್ಫ್ಯೂ ಜಾರಿಯನ್ನು ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 12 ಗಂಟೆ ವರೆಗಿದ್ದ ಅವಕಾಶವನ್ನು ಹಿಂಪಡೆದು, ಬೆಳಗ್ಗೆ 6 ರಿಂದ 9 ಗಂಟೆ ವರೆಗೆ ಮಾತ್ರ ಅವಕಾಶ ನೀಡಲಾಗಿದೆ.

ಮಂಗಳೂರು, ಮೇ 6:  ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದ ಕರ್ಫ್ಯೂ ಜಾರಿಯನ್ನು ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 12 ಗಂಟೆ ವರೆಗಿದ್ದ ಅವಕಾಶವನ್ನು ಹಿಂಪಡೆದು, ಬೆಳಗ್ಗೆ 6 ರಿಂದ 9 ಗಂಟೆ ವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಆಬಳಿಕ ಎಲ್ಲರೂ ಮನೆ ಸೇರಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ತುರ್ತು ಸಭೆ ನಡೆಸಲಾಗಿದ್ದು ಅಧ್ಯಕ್ಷತೆ ವಹಿಸಿದ್ದ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ.

ಕರ್ಫ್ಯೂ ಜಾರಿಗೆ ತಂದು ವಾರ ಕಳೆದರೂ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಸಣ್ಣಪುಟ್ಟ ನೆಪಗಳನ್ನು ಹೇಳಿಕೊಂಡು ನಗರದಲ್ಲಿ ಅನಾವಶ್ಯಕ ಓಡಾಡುತ್ತಿರುವುದು, ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದು ಗಮನಕ್ಕೆ ಬಂದಿದೆ. ಇದೇ ಕಾರಣದಿಂದ ಸೋಂಕು ಹರಡುತ್ತಿದ್ದು ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಅವಶ್ಯವಿದ್ದಲ್ಲಿ ಮಾತ್ರ ಖರೀದಿಗೆ ಮನೆಯಿಂದ ಹೊರಬರಬೇಕು. ಇಲ್ಲವಾದಲ್ಲಿ ಮನೆಯಲ್ಲೇ ಸುರಕ್ಷಿತವಾಗಿ ಇರಬೇಕು ಎಂದರು.

ಶನಿವಾರ ಮತ್ತು ಭಾನುವಾರ ಪೂರ್ಣ ಪ್ರಮಾಣದಲ್ಲಿ ಲಾಕ್‍ಡೌನ್ ಮಾಡಲು ಚಿಂತಿಸಲಾಗಿದೆ. ಕೊರೋನಾ ಪ್ರಕರಣಗಳು ಏರುಗತಿಯಲ್ಲಿ ಕಂಡುಬಂದಲ್ಲಿ ಈ ರೀತಿಯ ಕ್ರಮ ಅನಿವಾರ್ಯ. ವೀಕೆಂಡಿನ ಎರಡು ದಿನಗಳಲ್ಲಿ ದಿನಸಿ ಅಂಗಡಿ ತೆರೆಯಲು ಅವಕಾಶವಿರುವುದಿಲ್ಲ. ಹಾಪ್ ಕಾಮ್ಸ್, ಹಾಲಿನ ಅಂಗಡಿಗಳು, ತರಕಾರಿ, ಹಣ್ಣು ಹಂಪಲು ತಳ್ಳುಗಾಡಿಗಳಿಗೆ ಬೆಳಗ್ಗಿನ ವೇಳೆ ಅವಕಾಶ ನೀಡಲಾಗುವುದು ಎಂದರು.

ಕರ್ಫ್ಯೂ ಅವಧಿಯಲ್ಲಿ ವಾಹನಗಳಲ್ಲಿ ಸಂಚರಿಸುವವರನ್ನು ಪೊಲೀಸರು ತಡೆದು ವಿಚಾರಿಸಬೇಕು. ನಕಲಿ ಗುರುತಿನ ಚೀಟಿ ತೋರಿಸುವವರು, ಅನಗತ್ಯವಾಗಿ ವಾಹನಗಳಲ್ಲಿ ಓಡಾಡುವುದು ಕಂಡುಬಂದರೆ ಅಂತಹ ವಾಹನಗಳನ್ನು ನಿರ್ದಾಕ್ಷಿಣ್ಯವಾಗಿ ಸೀಝ್ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಪೂರ್ವ ನಿಗದಿತವಾಗಿರುವ ಮದುವೆ ಇನ್ನಿತರ ಸಭೆ, ಸಮಾರಂಭಗಳನ್ನು ಮೇ 15 ರ ವರೆಗೆ ಮಾತ್ರ ನಡೆಸಲು ಅವಕಾಶ ನೀಡಬೇಕು‌. ಆಬಳಿಕ ಯಾವುದೇ ಸಮಾರಂಭಗಳಿಗೆ ಅವಕಾಶ ನೀಡಬಾರದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ಸ್ವಿಗ್ಗಿ, ಝೊಮೆಟೋಗೆ ಅವಕಾಶ !

ಕರ್ಫ್ಯೂ ಕಠಿಣ ನಿಯಮ ಜಾರಿಗೊಳಿಸಿದರೂ, ಆನ್ ಲೈನಲ್ಲಿ ಆಹಾರ ಪೂರೈಕೆ ಮಾಡುವ ಸ್ವಿಗ್ಗಿ , ಜೊಮೇಟೋ ಸಿಬಂದಿಗೆ ಅವಕಾಶ ನೀಡಲಾಗಿದೆ. ಆದರೆ, ರಾತ್ರಿ 10 ಗಂಟೆಯೊಳಗೆ ಕೆಲಸ ನಿಲ್ಲಿಸಿ ಮನೆ ಸೇರಬೇಕು ಎಂದು ಸಭೆಯಲ್ಲಿ ತಾಕೀತು ಮಾಡಲಾಗಿದೆ.

ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಲು ಸೆಕ್ಟರ್ ಮ್ಯಾಜಿಸ್ಟ್ರೇಟ್ ಗಳನ್ನು ನೇಮಿಸಲಾಗುವುದು. ಇವರು ತಮಗೆ ನಿಗದಿಪಡಿಸಿದ ವ್ಯಾಪ್ತಿಯೊಳಗೆ ಸಂಚರಿಸಿ ಯಾವುದೇ ಲಾಕ್ ಡೌನ್ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ರಾಜೇಂದ್ರ ಹೇಳಿದ್ದಾರೆ.

ಸಭೆಯಲ್ಲಿ ಶಾಸಕರಾದ ಭರತ್. ವೈ ಶೆಟ್ಟಿ, ವೇದವ್ಯಾಸ್ ಕಾಮತ್, ಹರೀಶ್ ಪೂಂಜ, ರಾಜೇಶ್ ನಾಯಕ್, ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ಯು.ಟಿ ಖಾದರ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲಾ ರಾವ್, ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಎಸ್ಪಿ ಸೋನವಾನೆ ಋಷಿಕೇಶ್ ಭಗವಾನ್, ಸಹಾಯಕ ಪೊಲೀಸ್‍ ಆಯುಕ್ತ ಪಿ.ಎ ಹೆಗ್ಡೆ,  ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಜಿಪಂ ಸಿಇಓ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ದಿನೇಶ್ ಕುಮಾರ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕಿಶೋರ್, ವೆನ್ಲಾಕ್ ಡಿಎಂಓ ಡಾ.ಸದಾಶಿವ ಶ್ಯಾನುಬೋಗ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Video:

Kota Srinivas Pojary orders for Weekend complete lockdown in Dakshina Kannada. As the coronavirus cases are spiking in the state, the district administration's plans to enforce tougher rules to restrict the unnecessary movement of people in Dakshina Kannada. Only the Provisional store and milk booth will be available during the weekend lockdown.