24 ಗಂಟೆಯಲ್ಲಿ 452 ವಾಹನ ಜಪ್ತಿ ! ಲಾಕ್ಡೌನಲ್ಲಿ ಜಪ್ತಿಯಾದರೆ ಬಿಡಿಸಿಕೊಳ್ಳಲಾಗಲ್ಲ ; ಕಮಿಷನರ್

07-05-21 09:06 pm       Mangaluru Correspondent   ಕರಾವಳಿ

ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿ ತರಲು ಪೊಲೀಸರು ಮುಂದಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಶಶಿಕುಮಾರ್ ಖುದ್ದಾಗಿ ಫೀಲ್ಡಿಗೆ ಇಳಿದಿದ್ದಾರೆ.

Photo credits : Rept Image

ಮಂಗಳೂರು, ಮೇ 7: ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿ ತರಲು ಪೊಲೀಸರು ಮುಂದಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಶಶಿಕುಮಾರ್ ಖುದ್ದಾಗಿ ಫೀಲ್ಡಿಗೆ ಇಳಿದಿದ್ದಾರೆ.

ವಿನಾಕಾರಣ ರಸ್ತೆಗೆ ಬರುವ ವಾಹನಗಳನ್ನು ಸೀಜ್ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. 24 ಗಂಟೆಯಲ್ಲಿ 452 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಅದರಲ್ಲಿ 401 ದ್ವಿಚಕ್ರ ವಾಹನ, 40 ಕಾರು, ಹಾಗೂ 11 ಆಟೊರಿಕ್ಷಾಗಳನ್ನು ಸೀಜ್ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಅಗತ್ಯ ಕಾರ್ಯಕ್ಕೆ ಎಂದು ಇಂಗ್ಲಿಷಿನಲ್ಲಿ ಸ್ಟಿಕ್ಟರ್ ಅಂಟಿಸಿಕೊಂಡು ಓಡಾಡುವ ವಾಹನಗಳನ್ನು ಕಮಿಷನರ್ ಖುದ್ದಾಗಿ ರಸ್ತೆಗಿಳಿದು ಸೀಜ್ ಮಾಡಿದ್ದಾರೆ. ಕೆಲವರು ಕಂಪನಿ ಹೆಸರಲ್ಲಿ ಎಸನ್ಶಿಯಲ್ ಸರ್ವಿಸ್ ಎಂದು ಸ್ಟಿಕ್ಕರ್ ಅಂಟಿಸಿಕೊಂಡಿದ್ದು ಕಂಡುಬಂದಿದೆ. ಶುಕ್ರವಾರ ಬೆಳಗ್ಗೆ ಕಮಿಷನರ್ ಕುಳೂರಿನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಒಬ್ಬ ವ್ಯಕ್ತಿ ಬಿಎಂಡಬ್ಲ್ಯು ಕಾರಿನಲ್ಲಿ ಬಂದಿದ್ದ. ಎದುರಿಗೆ ಎಸನ್ಶಿಯಲ್ ಸರ್ವಿಸ್ ಎಂದು ಸ್ಟಿಕ್ಕರ್ ಇತ್ತು. ಕಾರು ನಿಲ್ಲಿಸಿದ ಕಮಿಷನರ್ ಶಶಿಕುಮಾರ್, ಎಲ್ಲಿಗೆ ಹೋಗ್ತಿದೀಯಪ್ಪಾ.. ಎಂದು ಕೇಳಿದ್ದಾರೆ. ಆತ ಏನೋ ಕಂಪನಿ ಹೆಸರನ್ನು ಹೇಳಿದ್ದಲ್ಲದೆ, ಅದರ ಓನರ್ ಎಂದಿದ್ದಾನೆ. ಕೂಡಲೇ ಕಾರು ಜಪ್ತಿ ಮಾಡುವಂತೆ ಅಲ್ಲಿನ ಕಾವೂರು ಇನ್ ಸ್ಪೆಕ್ಟರಿಗೆ ಸೂಚನೆ ನೀಡಿದ್ದಾರೆ.

ಲಾಕ್ಡೌನ್ ಸಂದರ್ಭದಲ್ಲಿ ಜಪ್ತಿ ಮಾಡುವ ವಾಹನಗಳನ್ನು ಎಪಿಡಮಿಕ್ ಏಕ್ಟ್ ಅಡಿ ಸೀಝ್ ಮಾಡಲಾಗುತ್ತಿದ್ದು, ಅದನ್ನು ಸ್ಟೇಶನಲ್ಲಿ ಬಿಡಿಸಿಕೊಳ್ಳಲು ಸಾಧ್ಯವಾಗಲ್ಲ. ಬದಲಿಗೆ, ಕೋರ್ಟಿನಲ್ಲೇ ದಂಡ ಕಟ್ಟಿ ಬಿಡಿಸಬೇಕಾಗುತ್ತದೆ. ಈಗಂತೂ ಕೋರ್ಟ್ ಇರುವುದಿಲ್ಲ. ಎರಡು- ಮೂರು ತಿಂಗಳು ವಾಹನಗಳು ಜಪ್ತಿಯಲ್ಲೇ ಇರಬೇಕಾಗುತ್ತದೆ. ಹೀಗಾಗಿ ಲಾಕ್ಡೌನ್ ಸಂದರ್ಭದಲ್ಲಿ ವಾಹನಗಳನ್ನು ರಸ್ತೆಗೆ ತರದೆ ಕಾನೂನು ಪಾಲನೆ ಮಾಡಿಕೊಳ್ಳಿ ಎಂದು ಕಮಿಷನರ್ ಖುದ್ದಾಗಿ ಹೇಳುತ್ತಿದ್ದರು.

Lockdown violation in Mangalore 452 vehicles including cars, two-wheelers and Auto have been seized within 24 hours. The seized vehicles can be retrieved only in the court said Police Commissioner Shashi Kumar.