ಸುದೆಮುಗೇರು ; ಎತ್ತಿಗೆ ಜ್ವರ ಎಮ್ಮೆಗೆ ಬರೆ ! ಹತ್ತು ಜನರ ಸೋಂಕಿಗೆ ಇಡೀ ಗ್ರಾಮಕ್ಕೆ ಸೀಲ್ ಡೌನ್ ಶಿಕ್ಷೆ !

11-05-21 03:51 pm       Mangalore Correspondent   ಕರಾವಳಿ

ಸುದೆಮುಗೆರು ಪರಿಸರದಲ್ಲಿ ಆರು ಮನೆಗಳ ಹತ್ತು ಮಂದಿಗೆ ಕೋವಿಡ್ ಸೋಂಕು ಕಾಣಿಸಿತ್ತು. ಹೀಗಾಗಿ ಗ್ರಾಮದ 78 ಮನೆಗಳಿಗೂ ಸೀಲ್ ಡೌನ್ ನಿರ್ಬಂಧ ಹೇರಿದ್ದಲ್ಲದೆ, ಇಡೀ ಗ್ರಾಮಕ್ಕೆ ಭೀತಿ ಮೂಡಿಸಿತ್ತು.

ಬೆಳ್ತಂಗಡಿ, ಮೇ 11 : ತಾಲೂಕಿನ ಸುದೆಮುಗೆರು ಪರಿಸರದಲ್ಲಿ ಆರು ಮನೆಗಳ ಹತ್ತು ಮಂದಿಗೆ ಕೋವಿಡ್ ಸೋಂಕು ಕಾಣಿಸಿತ್ತು. ಹೀಗಾಗಿ ಗ್ರಾಮದ 78 ಮನೆಗಳಿಗೂ ಸೀಲ್ ಡೌನ್ ನಿರ್ಬಂಧ ಹೇರಿದ್ದಲ್ಲದೆ, ಇಡೀ ಗ್ರಾಮಕ್ಕೆ ಭೀತಿ ಮೂಡಿಸಿತ್ತು. ಈ ಬಗ್ಗೆ ಆಕ್ರೋಶ ಹೊರಬೀಳುತ್ತಿದ್ದಂತೆ, ಸೀಲ್ ಡೌನ್ ನಿಯಮವನ್ನು ತಾಲೂಕು ಆಡಳಿತ ಸರಳಗೊಳಿಸಿದೆ. ರಸ್ತೆಗೆ ಹಾಕಿದ್ದ ತಡೆ ಬೇಲಿಯನ್ನು ತೆರವುಗೊಳಿಸಿದ್ದು, ಕೋವಿಡ್ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡ ಆರು ಮನೆಗಳನ್ನು ಮಾತ್ರ ಸೀಲ್ ಡೌನ್ ಮಾಡಿದೆ.

ಸುದೆಮುಗೇರು ಗ್ರಾಮದಲ್ಲಿ ಆರು ಮನೆಗಳ ಹತ್ತು ಮಂದಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಇಲ್ಲಿನ ಮುಖ್ಯ ರಸ್ತೆಗೆ ಬೇಲಿ ಹಾಕಿ 78 ಮನೆಗಳನ್ನೂ ಸೀಲ್ ಡೌನ್ ಮಾಡಿ ನಿವಾಸಿಗಳಿಗೆ ದಿಗ್ಬಂಧನ ವಿಧಿಸಿತ್ತು. ಕೂಲಿ ಕಾರ್ಮಿಕರೇ ಹೆಚ್ವಿರುವ ಈ ಪ್ರದೇಶದಲ್ಲಿ ಜನರ ಕಷ್ಟದ ಬಗ್ಗೆ ತಿಳಿದ ಮಾಜಿ ಶಾಸಕ ಕೆ. ವಸಂತ ಬಂಗೇರ ಹಾಗು ಸಿಪಿಐಎಂ ಮುಖಂಡರು ಸೋಮವಾರ ಅಲ್ಲಿನ ಮನೆಯವರಿಗೆ ಅಗತ್ಯ ಸಾಮಗ್ರಿಗಳ ಕಿಟ್ ನೀಡಲು ಹೋದ ವೇಳೆ ಜನರು ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದರು. ಬಂಗೇರ ಅವರು ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತಿನ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಕೂಡಲೇ ಅನಗತ್ಯವಾಗಿ ಹಾಕಲಾಗಿರುವ ಬೇಲಿಗಳನ್ಬು ತೆರವು ಮಾಡುವಂತೆ ಸೂಚಿಸಿದ್ದರು.

ಸೀಲ್ಡೌನ್ ಮಾಡಿ ಮೂರು ದಿನಗಳ ಬಳಿಕ ಬಂಗೇರರು ಕರೆ ಮಾಡಿದ ಮೇಲೆ ಪಟ್ಟಣ ಪಂಚಾಯತಿನ ಅಧಿಕಾರಿಗಳು ಸುದೆಮುಗೇರುವಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜನರು ಕೇವಲ ಆರು ಮನೆಗಳಲ್ಲಿ ರೋಗಿಗಳಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಿದ್ದರೂ ಇಡೀ ಊರನ್ನು ದಿಗ್ಬಂಧನದಲ್ಲಿ ಇರಿಸಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. ಇದಾದ ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಕೂಡಲೇ ರಸ್ತೆಗೆ ಅಡ್ಡಲಾಗಿ ಹಾಕಿದ್ದ ತಡೆಬೇಲಿಯನ್ನು ತೆರವುಗೊಳಿಸಿದರು.

ರೋಗ ಕಾಣಿಸಿಕೊಂಡ ಆರು ಮನೆಗಳನ್ನು ಸೀಲ್ ಡೌನ್ ಮಾಡಿ ಇನ್ನು ಯಾರಿಗಾದರೂ ರೋಗ ಕಾಣಿಸಿಕೊಂಡರೆ ಆ ಮನೆಗಳನ್ನೂ ಸೀಲ್ಡೌನ್ ಮಾಡುವುದಾಗಿ ತಿಳಿಸಿದ್ದಾರೆ. ಸೀಲ್ಡೌನ್ ಆಗಿರುವ ಮನೆಗಳಿಗೆ ಆಹಾರ ಸಾಮಗ್ರಿಗಳನ್ನು ತಾವೇ ಒದಗಿಸುವುದಾಗಿ ಸ್ಥಳೀಯ ಜನರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.