ಪೊಲೀಸರ ಲಾಠಿಗೆ ಪ್ರತಿತಂತ್ರ ; ಬೆನ್ನಿಗೆ ತಗಡು ಶೀಟ್ ಕಟ್ಟಿಕೊಂಡು ಪೇಟೆಗೆ ಹೊರಟ ಯುವಕ !

11-05-21 05:20 pm       Udupi Correspondent   ಕರಾವಳಿ

ಕುಂಭಾಸಿಯ ಯುವಕನೊಬ್ಬ ಪೊಲೀಸರ ಲಾಠಿರುಚಿಯನ್ನು ಅಣಕಿಸುವುದಕ್ಕಾಗಿಯೇ ಹೊಸ ತಂತ್ರಕ್ಕೆ ಮೊರೆಹೋಗಿರುವ ಫೋಟೋ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಕುಂದಾಪುರ, ಮೇ 11: ಲಾಕ್ಡೌನ್ ಇರುವುದರಿಂದ ಗ್ರೋಸರಿ ತರುವುದಕ್ಕೂ ವಾಹನ ಬಳಸುವಂತಿಲ್ಲ ಎಂದು ರಾಜ್ಯ ಸರಕಾರ ನಿಯಮ ಹೇರಿರುವುದರಿಂದ ಹೆಚ್ಚಿನ ಕಡೆ ಪೊಲೀಸರು ಲಾಠಿ ಬೀಸಿದ್ದು ಪರ- ವಿರೋಧ ಟೀಕೆಗೂ ಕಾರಣವಾಗಿದೆ. ಇದೇ ವೇಳೆ, ಇಲ್ಲಿನ ಕುಂಭಾಸಿಯ ಯುವಕನೊಬ್ಬ ಪೊಲೀಸರ ಲಾಠಿರುಚಿಯನ್ನು ಅಣಕಿಸುವುದಕ್ಕಾಗಿಯೇ ಹೊಸ ತಂತ್ರಕ್ಕೆ ಮೊರೆಹೋಗಿರುವ ಫೋಟೋ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಕುಂಭಾಸಿಯ ವಿನೇಂದ್ರ ಆಚಾರ್ಯ ಎಂಬವರು ಸೈಕಲ್ ನಲ್ಲಿ ಪೇಟೆಗೆ ಹೊರಟಿದ್ದು ತಲೆಗೆ ಹೆಲ್ಮೆಟ್ ಮತ್ತು ಬೆನ್ನಿಗೆ ತಗಡು ಶೀಟನ್ನು ಕಟ್ಟಿಕೊಂಡಿದ್ದಾರೆ. ಬೆನ್ನಿಗೆ ಪೆಟ್ಟು ಬಿದ್ದರೂ ತಗಡು ಶೀಟ್ ಇದೆಯೆಂಬ ರೀತಿ ಬಿಂಬಿಸಿ, ಸೈಕಲಿನಲ್ಲಿ ಹೊರಟಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಲಾಠಿಗೆ ಪ್ರತಿತಂತ್ರ ಎನ್ನುವ ರೀತಿ ಬಿಂಬಿತವಾಗುತ್ತಿದೆ.

ಬೆಳಗ್ಗೆ ಹತ್ತು ಗಂಟೆ ವರೆಗೆ ಅಗತ್ಯ ಸಾಮಗ್ರಿ ಖರೀದಿಸಲು ಅವಕಾಶ ನೀಡಿದ್ದು ಆದರೆ ನಡೆದುಕೊಂಡೇ ಮನೆ ಪರಿಸರದ ಅಂಗಡಿಗಳಿಂದ ಖರೀದಿ ನಡೆಸಬೇಕು. ಯಾವುದೇ ಕಾರಣಕ್ಕೂ ವಾಹನಗಳಲ್ಲಿ ದೂರಕ್ಕೆ ಪ್ರಯಾಣ ಮಾಡಬಾರದು. ಅಗತ್ಯ ವಸ್ತು ಖರೀದಿಗೆಂದು ಮಾರುಕಟ್ಟೆ ಇನ್ನಿತರ ಪ್ರದೇಶಕ್ಕೆ ಹೋಗಬಾರದೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಆದರೆ, ಈ ನಿಯಮವನ್ನು ಬಹುತೇಕ ಕಡೆ ಜನರು ಮುರಿಯುತ್ತಿದ್ದಾರೆ. ಪೊಲೀಸರು ಅಡ್ಡಗಟ್ಟಿದರೂ ಒಳದಾರಿಗಳಿಂದ ಅಂಗಡಿಗಳಿಗೆ ತೆರಳುತ್ತಿದ್ದಾರೆ. ಈ ವೇಳೆ, ಕೆಲವು ಕಡೆ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸುವ ಘಟನೆ ನಡೆದಿದೆ.

ಪೊಲೀಸರ ಲಾಠಿ ಬೀಸುವ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ವಯಸ್ಸಾದವರು ತಮ್ಮ ಸ್ಕೂಟರ್ ಬಳಸದೆ ಗ್ರೋಸರಿ ತರುವುದು ಹೇಗೆಂಬ ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಕೆಲವು ಕಡೆ ವಯಸ್ಸಾದವರು, ಅಸಹಾಯಕರಿಗೆ ಮಾತ್ರ ವಾಹನ ಬಳಕೆಗೆ ಅವಕಾಶ ನೀಡಲಾಗಿದೆ. ಹೀಗಿದ್ದರೂ, ಜನರು ಅಂಗಡಿ ಮುಂದೆ ಸೇರುವುದು, ಮುಗಿ ಬೀಳುವುದು ಕಾಮನ್ ಆಗಿದೆ. ಇಂಥ ಸಂದರ್ಭದಲ್ಲೇ ಯುವಕನೊಬ್ಬ ಬೆನ್ನಿಗೆ ಕಬ್ಬಿಣದ ಶೀಟ್ ಕಟ್ಟಿಕೊಂಡು ಸೈಕಲಿನಲ್ಲಿ ಪೇಟೆಗೆ ಹೊರಟು ಸುದ್ದಿಯಾಗಿದ್ದಾನೆ.