ಆಸ್ಪತ್ರೆ ಸಿಬಂದಿಯಿದ್ದ ಬಸ್ ಫುಲ್ ರಶ್ ; ಲಾಕ್ಡೌನ್ ರೂಲ್ ಗಾಳಿಗೆ, ಪ್ರಶ್ನಿಸಿದ ಅಧಿಕಾರಿಗಳಿಗೇ ಆವಾಜ್ ! ದೊಡ್ಡವರಿಗಿಲ್ವೇ ಫೈನ್, ವಾಹನ ಸೀಜ್ ಕರಾಮತ್ತು ?

12-05-21 07:12 pm       Mangalore Correspondent   ಕರಾವಳಿ

ಲಾಕ್ಡೌನ್ ನಿಯಮವನ್ನು ಗಾಳಿಗೆ ತೂರಿ ಬಸ್ಸಿನಲ್ಲಿ ಕುರಿಮಂದೆಯ ರೀತಿ ತುಂಬಿಕೊಂಡು ತೆರಳುತ್ತಿದ್ದ ಆಸ್ಪತ್ರೆ ಸಿಬಂದಿಯ ವಾಹನಗಳನ್ನು ಅಡ್ಡಗಟ್ಟಿದ ಪೊಲೀಸರು ಮತ್ತು ಕೋವಿಡ್ ಮಾರ್ಶಲ್ ಗಳಿಗೆ ಆವಾಜ್ ಮಾತ್ರ ಎದುರಾಗಿತ್ತು.

ಮಂಗಳೂರು, ಮೇ 12: ಲಾಕ್ಡೌನ್ ಮತ್ತು ಕೋವಿಡ್ ನಿಯಮಗಳು ಜನಸಾಮಾನ್ಯರಿಗೆ ಮಾತ್ರ ಅಲ್ಲ. ಕಾನೂನು ಪಾಲಕ ಪೊಲೀಸರು ಹಾಗೂ ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್ ಆಗಿರುವ ಆರೋಗ್ಯ ಸಂಸ್ಥೆಗಳ ಸಿಬಂದಿಗೂ ಅನ್ವಯ. ಆದರೆ, ಲಾಕ್ಡೌನ್ ನಿಯಮವನ್ನು ಗಾಳಿಗೆ ತೂರಿ ಬಸ್ಸಿನಲ್ಲಿ ಕುರಿಮಂದೆಯ ರೀತಿ ತುಂಬಿಕೊಂಡು ತೆರಳುತ್ತಿದ್ದ ಆಸ್ಪತ್ರೆ ಸಿಬಂದಿಯ ವಾಹನಗಳನ್ನು ಅಡ್ಡಗಟ್ಟಿದ ಪೊಲೀಸರು ಮತ್ತು ಕೋವಿಡ್ ಮಾರ್ಶಲ್ ಗಳಿಗೆ ಆವಾಜ್ ಮಾತ್ರ ಎದುರಾಗಿತ್ತು.

ನಗರದ ಕೆಎಂಸಿ ಆಸ್ಪತ್ರೆ, ಯೇನಪೋಯ, ವೆನ್ಲಾಕ್ ಆಸ್ಪತ್ರೆಯ ಸಿಬಂದಿಯಿದ್ದ ಬಸ್ಸನ್ನು ಪಂಪ್ವೆಲ್ ನಲ್ಲಿ ಪೊಲೀಸರು ಅಡ್ಡಹಾಕಿದ್ದರು. ಸಂಜೆ ಹೊತ್ತಿಗೆ ಸಿಬಂದಿಯನ್ನು ತುಂಬಿಕೊಂಡು ತೆರಳುತ್ತಿದ್ದ ಎರಡು ವ್ಯಾನ್ ಮತ್ತು ಒಂದು ಬಸ್ಸನ್ನು ಪೊಲೀಸರು ನಿಲ್ಲಿಸಿದ್ದರು. ಮೂರು ವಾಹನಗಳಲ್ಲಿಯೂ ಸಿಬಂದಿಯನ್ನು ಕುರಿ ಮಂದೆಯ ರೀತಿ ತುಂಬಿಕೊಂಡಿದ್ದರು. ಯಾರು ಕೂಡ ಮಾಸ್ಕ್ ಹಾಕಿರಲಿಲ್ಲ. ನಡುವೆ ಅಂತರವೂ ಇರಲಿಲ್ಲ. ಸಿಟ್ಟಿಂಗ್ ಫುಲ್ ಆಗಿ ಸಿಬಂದಿ ನಿಂತುಕೊಂಡೇ ಪ್ರಯಾಣಿಸುತ್ತಿದ್ದರು. ಕೆಎಂಸಿ ಕಾಲೇಜಿನ ಬಸ್ಸಿನ ಡ್ರೈವರ್ ಸೀಟು ಬಳಿಯ ಬಾನೆಟ್ ಮೇಲೂ ಒಬ್ಬ ಮಹಿಳಾ ಸಿಬಂದಿ ಕುಳಿತಿದ್ದರು.

ಕಳೆದ ಮೂರು ದಿನಗಳಿಂದ ಇದೇ ರೀತಿ ಸಿಬಂದಿಯನ್ನು ತುಂಬಿಕೊಂಡು ತೆರಳುತ್ತಿದ್ದುದಕ್ಕೆ ಪೊಲೀಸರು ನಿಲ್ಲಿಸಿ ವಾರ್ನ್ ಮಾಡಿದ್ದರು. ನೀವು ಕೋವಿಡ್ ವಾರಿಯರ್ ಆಗಿರುವುದಲ್ಲದೆ, ಆಸ್ಪತ್ರೆಯಲ್ಲಿ ಕೆಲಸ ಮಾಡೋರು.. ಹೀಗೆ ಲಾಕ್ಡೌನ್ ನಿಯಮವನ್ನೇ ಮುರಿದ್ಕೊಂಡು ಪ್ರಯಾಣ ಮಾಡಿದರೆ ಹೇಗೆ..?  ನಿಮ್ಮಲ್ಲಿ ಕೊರೊನಾ ಇಲ್ಲವೆಂದು ಹೇಗೆ ಹೇಳ್ತೀರಿ ಎಂದು ಪೊಲೀಸರು ಪ್ರಶ್ನೆ ಮಾಡಿದ್ದರು. ಆದರೆ, ಮೆಡಿಕಲ್ ಕಾಲೇಜಿನವರು ಪ್ರಭಾವಿಗಳಾಗಿದ್ದರಿಂದ ಪೊಲೀಸರ ಮಾತನ್ನು ಕ್ಯಾರ್ ಮಾಡಿರಲಿಲ್ಲ.

ಈ ಬಗ್ಗೆ ಪೊಲೀಸರು ಮೇಲಧಿಕಾರಿಗಳಿಗೂ ಮಾಹಿತಿ ನೀಡಿದ್ದರು. ಮಹಾನಗರ ಪಾಲಿಕೆಯ ಅಧಿಕಾರಿಗಳಿಗೂ ಸುದ್ದಿ ಮುಟ್ಟಿಸಿ, ಇಂದು ಸಂಜೆ ಪಂಪ್ವೆಲ್ ಗೆ ಕರೆಸಿದ್ದರು. ಅದರಂತೆ, ಹೆಲ್ತ್ ಇನ್ಸ್ ಪೆಕ್ಟರ್ ಸೇರಿ ಮಹಾನಗರ ಪಾಲಿಕೆಯ ಅಧಿಕಾರಿ ವರ್ಗ, ಕೋವಿಡ್ ಮಾರ್ಶಲ್ ಗಳು ರೆಡಿಯಾಗಿ ನಿಂತಿದ್ದರು. ಮೆಡಿಕಲ್ ಕಾಲೇಜು, ವೆನ್ಲಾಕ್ ಸಿಬಂದಿಯಿದ್ದ ಬಸ್, ವ್ಯಾನ್ ಗಳು ಬಂದವು. ಕೆಎಂಸಿಗೆ ಸೇರಿದ ಒಂದು ಬಸ್ ಮತ್ತೊಂದು ವ್ಯಾನ್ ಇತ್ತು. ಪೊಲೀಸರು ನಿಲ್ಲಿಸುತ್ತಿದ್ದಂತೆ, ಪಾಲಿಕೆಯ ಅಧಿಕಾರಿಗಳು ಆಸ್ಪತ್ರೆ ಸಿಬಂದಿಯನ್ನು ತರಾಟೆಗೆತ್ತಿಕೊಂಡರು.

ಸ್ವಲ್ಪ ಹೊತ್ತಿನಲ್ಲಿ ಕೆಎಂಸಿ ಆಸ್ಪತ್ರೆಯ ಪ್ರತಿನಿಧಿ ಒಬ್ಬರು ಬಂದು, ಹೆಲ್ತ್ ಇನ್ಸ್ ಪೆಕ್ಟರ್ ಮುಂದೆಯೇ ಆವಾಜ್ ಹಾಕಿದ್ರು. ನಾವು ಕೋವಿಡ್ ವಾರಿಯರ್ಸ್. ನಮ್ಗೂ ಗೊತ್ತು ಕಾನೂನು ಅಂತ ವಾದ ಶುರು ಮಾಡಿದ್ರು. ಆನಂತ್ರ ಡೀಸಿಗೆ ಫೋನ್ ಮಾಡಿ, ಸಮಜಾಯಿಷಿ ಹೇಳಲು ಶುರುಮಾಡಿದ. ಆದರೆ, ಇವರ ಯಾವುದೇ ಆವಾಜುತನಕ್ಕೆ ಬಗ್ಗದೆ ಖಡಕ್ಕಾಗಿ ನಿಂತ ಹೆಲ್ತ್ ಇನ್ಸ್ ಪೆಕ್ಟರ್ ಮಹಿಳಾ ಅಧಿಕಾರಿ, ಏನ್ರೀ ನೀವು.. ಜನಸಾಮಾನ್ಯ ಒಬ್ಬ ಹೀಗೆ ಮಾಡಿದ್ರೆ ಪೊಲೀಸರು ಕೇಸ್ ಹಾಕೋದಿಲ್ವಾ.. ಅವನನ್ನು ಜೈಲಿಗೆ ಹಾಕೋದಿಲ್ವಾ.. ನಿಮ್ಗೆ ಬೇರೆ ಕಾನೂನಿದ್ಯಾ.. ನೀವು ಯಾರೇ ಆಗಿರಬಹುದು. ಎಲ್ರೂ ಫೈನ್ ಕಟ್ಟಿಯೇ ಮುಂದಕ್ಕೆ ಹೋಗಿ ಅಂತ ವಾರ್ನ್ ಮಾಡಿದ್ರು.

ಕೆಎಂಸಿಯವರು ಹತ್ತು ಸಾವಿರ, ಯೇನಪೋಯ ಮತ್ತು ವೆನ್ಲಾಕ್ ಸಿಬಂದಿಯ ವಾಹನಕ್ಕೆ ತಲಾ 5 ಸಾವಿರ ದಂಡ ಹಾಕುವುದಾಗಿ ಅಧಿಕಾರಿ ಹೇಳಿದರು. ಇದೇ ವೇಳೆ, ಮತ್ತೊಬ್ಬ ಆಸ್ಪತ್ರೆ ಪ್ರತಿನಿಧಿ ಶಾಸಕ ವೇದವ್ಯಾಸ ಕಾಮತ್ ಗೆ ಫೋನ್ ಮಾಡಿ, ನಮ್ಮ ನೆರವಿಗೆ ಬರುವಂತೆ ಹೇಳ್ತಾ ಇದ್ದ. ಕೊನೆಗೆ, ಜಿಲ್ಲಾಧಿಕಾರಿಯೇ ಫೋನ್ ಮಾಡಿ, ಮಹಾನಗರ ಪಾಲಿಕೆಯ ಅಧಿಕಾರಿಯನ್ನು ಮನವೊಲಿಸಿದರು. ಇವತ್ತೊಂದು ದಿನ ಬಿಟ್ಟುಬಿಡಿ. ನಾಳೆ ಅವರನ್ನೆಲ್ಲ ಕಚೇರಿಗೆ ಕರೆದು ಮಾತಾಡ್ತೀವಿ. ಇನ್ನು ಈ ರೀತಿ ಕೋವಿಡ್ ನಿಯಮ ಉಲ್ಲಂಘಿಸುವುದಿಲ್ಲ ಎಂದು ಬರೆದುಕೊಡುವಂತೆ ಹೇಳಿ, ವಿಷ್ಯ ಕ್ಲೋಸ್ ಮಾಡಿದ್ರು.

ಪಾಲಿಕೆಯ ಮಹಿಳಾ ಅಧಿಕಾರಿ, ಈಗಲೇ ಲೆಟರ್ ತಂದುಕೊಡುವಂತೆ ಹೇಳಿ ಆಸ್ಪತ್ರೆಯ ಪ್ರತಿನಿಧಿ ಒಬ್ಬನನ್ನು ಸ್ಥಳದಲ್ಲಿ ನಿಲ್ಲಿಸಿ ಸಿಬಂದಿಯ ಬಸ್ಸನ್ನು ಬಳಿಕ ಬಿಟ್ಟು ಕಳುಹಿಸಿದ್ರು. ನಾವು ಯಾರನ್ನು ಹಿಡಿದ್ರೂ ಯಾರಿಂದಲೋ ಫೋನ್ ಮಾಡಿಸ್ತಾರೆ. ಇನ್ ಫ್ಲುವೆನ್ಸ್ ಮಾಡಿಸಿ ಬಿಡಿಸಿಕೊಂಡು ಹೋಗುತ್ತಾರೆ ಎಂದು ಗೊಣಗುತ್ತಿದ್ದರು ಅಧಿಕಾರಿ. ಇದೇ ವೇಳೆ ಜೋಯೆಲ್ ಎಂಬವರು ಫ್ರೀಯಾಗಿ ಕೋವಿಡ್ ಮಾರ್ಶಲ್ ಆಗಿ ಕೆಲಸ ಮಾಡುತ್ತಿದ್ದವರಿದ್ದರು. ಅವರನ್ನು ಆಸ್ಪತ್ರೆ ಸಿಬಂದಿ ಆವಾಜ್ ಹಾಕ್ತಿದ್ದರು. ನಿಮ್ಗೇನು ಅಧಿಕಾರ ಇದೆ, ನಮ್ಮ ಬಸ್ಸನ್ನು ನಿಲ್ಲಿಸಲು ಎಂದು ಕೇಳುತ್ತಿದ್ದರು.

ಕದ್ರಿ ಇನ್ ಸ್ಪೆಕ್ಟರ್ ಸವಿತ್ರತೇಜ ಕೂಡ ಸ್ಥಳಕ್ಕೆ ಬಂದಿದ್ದರು. ಆಸ್ಪತ್ರೆಯವರು ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರಿಗೂ ದಂಡ ವಿಧಿಸಬಹುದಿತ್ತು. ವಾಹನ ಸೀಜ್ ಮಾಡಬಹುದಿತ್ತು. ಆದರೆ, ದೊಡ್ಡವರ ವಾಹನವೆಂದು ದೂರದಲ್ಲಿ ಮಗುಮ್ಮಾಗಿ ನಿಂತಿದ್ದರು. ಇದೇ ವೇಳೆ, ಬೇರೆ ವಾಹನಗಳಲ್ಲಿ ಬರುತ್ತಿದ್ದವರನ್ನು ಕೂಡ ಕೋವಿಡ್ ಮಾರ್ಶಲ್ ಗಳು ನಿಲ್ಲಿಸಿ ಸ್ಥಳದಲ್ಲೇ ಫೈನ್ ಹಾಕಿದ್ರು. ಮಾಸ್ಕ್ ಹಾಕದೇ ಓಡಾಡುತ್ತಿದ್ದವರಿಗೆ 50 ರೂ. ದಂಡ ವಿಧಿಸುತ್ತಿದ್ದರು. ಇನ್ ಶೂರೆನ್ಸ್, ಬ್ಯಾಂಕ್, ಆಸ್ಪತ್ರೆ ಸಿಬಂದಿ ಎಂದು ಬೈಕಿನಲ್ಲಿ ಹೋಗುತ್ತಿದ್ದವರು ಕೂಡ ಮುಖಕ್ಕೆ ಮಾಸ್ಕ್ ಹಾಕಿರದಿದ್ದರೆ, ದಂಡ ಕಟ್ಟಿಯೇ ಹೋಗಬೇಕು ಎನ್ನುತ್ತಿದ್ದರು.

Video:

The Health Department Inspector from MCC stopped private hospital buses and vans of KMC, Yenepoya, and Wenlock at Pumpwell in Mangalore that was seen over flooded with staff by violating the covid rules and lockdown norms. A huge fine was imposed but then through the intervention of big leaders in the city, they were left out without any fines. Kadri Police reached the spot.