ಕೋವಿಡ್ ಸೋಂಕಿಗೆ ಮಂಗಳೂರಿನಲ್ಲಿ ಪೊಲೀಸ್ ಪೇದೆ ಬಲಿ

14-05-21 02:22 pm       Mangalore Correspondent   ಕರಾವಳಿ

ಮಂಗಳೂರಿನಲ್ಲಿ ಸಿಎಆರ್ ವಿಭಾಗದಲ್ಲಿ ಸೇವೆಯಲ್ಲಿದ್ದ ಬೆಳಗಾವಿ ಮೂಲದ ಸಿದ್ದಪ್ಪ ಶಿಂಗೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಮಂಗಳೂರು, ಮೇ 14: ಮಂಗಳೂರಿನಲ್ಲಿ ಪೊಲೀಸ್ ಸಿಬಂದಿಯೊಬ್ಬರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಸಿಎಆರ್ ವಿಭಾಗದಲ್ಲಿ ಸೇವೆಯಲ್ಲಿದ್ದ ಬೆಳಗಾವಿ ಮೂಲದ ಸಿದ್ದಪ್ಪ ಶಿಂಗೆ(50) ಮೃತಪಟ್ಟಿರುವ ಪೇದೆ.

ಕೋವಿಡ್ ಎರಡೂ ಲಸಿಕೆಯನ್ನು ಪಡೆದಿದ್ದ ಸಿದ್ದಪ್ಪ ಶಿಂಗೆ ಅವರನ್ನು ಮೇ 5ರಂದು ನಗರದ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರಂಭದಲ್ಲೇ ಆಕ್ಸಿಜನ್ ಕೊಟ್ಟು ಚಿಕಿತ್ಸೆ ನೀಡಲಾಗಿತ್ತು. ಆದರೆ, ದೇಹಸ್ಥಿತಿ ಬದಲಾವಣೆ ಆಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಇವರು ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರ್ನಾಳ್ ಎಂಬ ಊರಿನ ನಿವಾಸಿ. ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಬಳಿಕ 2016ರಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಮಂಗಳೂರಿನಲ್ಲಿ ಸಿಎಆರ್ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಿದ್ದಪ್ಪ ಅವರಿಗೆ ಬೇರಾವುದೇ ಕಾಯಿಲೆಗಳು ಇರಲಿಲ್ಲ. ಹಾಗಿದ್ದರೂ ಸಾವಿನ ಸಂದರ್ಭದಲ್ಲಿ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಮೊದಲ ಬಾರಿಗೆ ಪೊಲೀಸ್ ಪೇದೆಯೊಬ್ಬರು ಸಾವು ಕಂಡಿದ್ದಾರೆ.

ಮಂಗಳೂರಿನಲ್ಲಿ 62 ಮಂದಿಗೆ ಪಾಸಿಟಿವ್

ಮಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆಗೆ 62 ಮಂದಿ ಪೊಲೀಸರು ಪಾಸಿಟಿವ್ ಆಗಿದ್ದು, ಅದರಲ್ಲಿ 16 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು ಅವರು ಚೇತರಿಕೆ ಕಾಣುತ್ತಿದ್ದಾರೆ ಎಂದು ನಗರ ಡಿಸಿಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ. 

In a tragic incident, a Police constable of the Central Armed Reserve died of Covid 19 after the second dose of covid vaccine. The deceased has been identified as Sidsappa Shinge from Hukkeri. This is the first death reported from Police Department in Mangalore.