ಚಂಡಮಾರುತ ಎಫೆಕ್ಟ್ ; ಕರಾವಳಿಯಾದ್ಯಂತ ಭಾರೀ ಮಳೆ, ಬೇಸಗೆಯಲ್ಲೇ ಮಳೆಗಾಲ !

15-05-21 03:29 pm       Mangaluru Correspondent   ಕರಾವಳಿ

ತೌಕ್ತೆ ಚಂಡಮಾರುತದ ಪರಿಣಾಮ ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದೆ. ನಿನ್ನೆ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು, ಕರಾವಳಿ ಭಾಗದಲ್ಲಿ ಹಲವು ವರ್ಷಗಳ ಬಳಿಕ ಬೇಸಗೆಯಲ್ಲೇ ಮಳೆಗಾಲದ ವಾತಾವರಣ ನಿರ್ಮಾಣವಾಗಿದೆ.

ಮಂಗಳೂರು, ಮೇ 15: ತೌಕ್ತೆ ಚಂಡಮಾರುತದ ಪರಿಣಾಮ ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದೆ. ನಿನ್ನೆ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು, ಕರಾವಳಿ ಭಾಗದಲ್ಲಿ ಹಲವು ವರ್ಷಗಳ ಬಳಿಕ ಬೇಸಗೆಯಲ್ಲೇ ಮಳೆಗಾಲದ ವಾತಾವರಣ ನಿರ್ಮಾಣವಾಗಿದೆ.

ಸಮುದ್ರ ತೀರ ಪ್ರದೇಶದಲ್ಲಿ ಅಲೆಗಳು ಅಬ್ಬರಿಸುತ್ತಿದ್ದು, ಮತ್ತೆ ತೀರ ನಿವಾಸಿಗಳು ಆತಂಕ ಎದುರಿಸುತ್ತಿದ್ದಾರೆ. ಉಳ್ಳಾಲದ ಸೋಮೇಶ್ವರ, ಉಚ್ಚಿಲಗಳಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಗಾಳಿಯ ಹೊಡೆತಕ್ಕೆ ಸಮುದ್ರದ ಅಲೆಗಳು ರಕ್ಕಸ ಗಾತ್ರದಲ್ಲಿ ಬಂದು ತೀರಕ್ಕೆ ಅಪ್ಪಳಿಸುತ್ತಿವೆ.

ಕೇರಳದ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹೀಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಸುರಿಯುವ ಮಳೆಯ ರೀತಿ ಏಕಪ್ರಕಾರದಲ್ಲಿ ಗಾಳಿ, ಮಳೆ ಹೊಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಭಾರೀ ಮಳೆ ಸುರಿಯುತ್ತಿದೆ. ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮೂಡುಬಿದ್ರೆ ಹೀಗೆ ಎಲ್ಲ ಕಡೆಯೂ ನಿರಂತರ ಮಳೆಯಾಗುತ್ತಿದ್ದು, ಬೇಸಗೆಯ ಬೇಗೆಯಿಂದ ಬೇಯುತ್ತಿದ್ದ ಜನರಿಗೆ ದಿಢೀರ್ ಮಳೆ ತಂಪಿನ ಸಿಂಚನ ಮಾಡಿದೆ. ಮೇ ತಿಂಗಳಲ್ಲಿ ಈ ಪರಿ ಮಳೆಯಾಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.

ಮಂಗಳೂರು ನಗರದಲ್ಲಿ ದಿಢೀರ್ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದೆ. ಒಂದೆಡೆ ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದಾಗಿ ಅರ್ಧಂಬರ್ಧ ಕೆಲಸ ನಡೆದಿದ್ದು, ಚರಂಡಿಗಳನ್ನು ಅಗೆದು ಹಾಕಿರುವಲ್ಲಿ ನೀರು ರಸ್ತೆಯಲ್ಲೇ ಹರಿಯುತ್ತಿದೆ. ರಥಬೀದಿಯಲ್ಲಿ ಇತ್ತೀಚೆಗೆ ಕಾಂಕ್ರೀಟ್ ಆಗಿದ್ದ ರಸ್ತೆಯಲ್ಲಿ ನೀರು ನಿಂತು ಅಧಿಕಾರಿಗಳನ್ನು ಅಣಕಿಸುತ್ತಿದೆ.

ಇನ್ನೂ ಎರಡು ದಿನ ಮಳೆ ಸಾಧ್ಯತೆ

ಹವಾಮಾನ ಇಲಾಖೆ ಪ್ರಕಾರ, ಲಕ್ಷದ್ವೀಪದ ಬಳಿ ಕಾಣಿಸಿಕೊಂಡಿರುವ ತೌಕ್ತೆ ಎನ್ನುವ ಚಂಡಮಾರುತದ ಪರಿಣಾಮ ಮೇ 17ರ ವರೆಗೂ ಕರಾವಳಿಯಲ್ಲಿ ಮಳೆಯಾಗಲಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಕಡಲಿನಲ್ಲಿರುವ ಬೋಟ್ ಗಳು ಕೂಡಲೇ ದಡ ಸೇರುವಂತೆ ಎರಡು ದಿನಗಳ ಮೊದಲೇ ಎಚ್ಚರಿಕೆ ನೀಡಿತ್ತು.  

Video:

Cyclone Tauktae impact several areas flooded and houses damaged in Mangalore city and Dakshina Kannada. The India Meteorological Department (IMD) had said on Friday that the depression in the Arabian Sea is likely to intensify into a “very severe cyclonic storm” on May 17 and cross the Gujarat coast a day later.