ಸಾಯಿಪರಿವಾರ್ ಕಳಕಳಿ ; ಒಂಟಿ ವೃದ್ಧೆಯ ಮುರುಕಲು ಮನೆ ನವೀಕರಿಸಿದ ದುಬೈ ಉದ್ಯೋಗಿ !

21-05-21 12:26 pm       Mangalore Correspondent   ಕರಾವಳಿ

ವೃದ್ಧೆಯೊಬ್ಬರು ವಾಸವಿದ್ದ ಮನೆಯೊಂದು ಹಂಚಿನ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡು ಮಳೆಗೆ ಇಡೀ ಮನೆಯೇ ಕುಸಿದು ಬೀಳುವ ಹಂತಕ್ಕೆ ತಲುಪಿದ್ದು ಪ್ರವೀಣ್ ಶೆಟ್ಟಿ ಪಿಲಾರ್ ಅವರು ಮನೆಯನ್ನ ನವೀಕರಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. 

ಉಳ್ಳಾಲ, ಮೇ 21: ಅವಿವಾಹಿತ ಒಂಟಿ ವೃದ್ಧೆಯೊಬ್ಬರು ವಾಸವಿದ್ದ ಮನೆಯೊಂದು ಹಂಚಿನ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡು ಮಳೆಗೆ ಇಡೀ ಮನೆಯೇ ಕುಸಿದು ಬೀಳುವ ಹಂತಕ್ಕೆ ತಲುಪಿತ್ತು. ಈ ಬಗ್ಗೆ ವಿಷಯ ಅರಿತ ಮಸ್ಕತ್ ನಲ್ಲಿ ಉದ್ಯೋಗಿಯಾಗಿರುವ ಪ್ರವೀಣ್ ಶೆಟ್ಟಿ ಪಿಲಾರ್ ಮೇಗಿನಮನೆ ಅವರು ಮನೆಯ ಮೇಲ್ಛಾವಣಿ ಸೇರಿದಂತೆ ಸಂಪೂರ್ಣ ಮನೆಯನ್ನ ನವೀಕರಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. 

ತಲಪಾಡಿ ಜನತಾ ಕಾಲನಿಯ ಒಂಟಿ ನಿವಾಸಿ ಪಾರ್ಶ್ವ ವಾಯು ಪೀಡಿತೆ ಪುಷ್ಪಾ ಅವರ ಮನೆ ಸಂಪೂರ್ಣ ಶಿಥಿಲಗೊಂಡಿತ್ತು. ಅವರಿಗೆ ಮಳೆಗಾಲದಲ್ಲಿ ಮನೆಯೊಳಗೆ ಇರುವುದು ಅಸಾಧ್ಯ ಎನ್ನುವ ಸ್ಥಿತಿ ಉಂಟಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ತೊಕ್ಕೊಟ್ಟಿನ ಸಾಯಿ ಪರಿವಾರ್ ಟ್ರಸ್ಟಿನ ಪ್ರಮುಖರು ಸಮಾಜ ಸೇವಕರಾದ ಮಸ್ಕತ್ ಉದ್ಯೋಗಿ ಪ್ರವೀಣ್ ಶೆಟ್ಟಿ ಪಿಲಾರು ಮೇಗಿನ ಮನೆ ಅವರಲ್ಲಿ ಸಹಾಯ ನೀಡುವಂತೆ ಕೇಳಿಕೊಂಡಿದ್ದರು. ತಕ್ಷಣ ಸ್ಪಂದಿಸಿದ ಪ್ರವೀಣ್ ಅವರು ಸುಮಾರು 25,000 ರೂ. ವೆಚ್ಚದಲ್ಲಿ ಶಿಥಿಲಗೊಂಡಿದ್ದ ಪುಷ್ಪಾ ಅವರ ಮನೆಯ ಹಂಚಿನ ಮೇಲ್ಛಾವಣಿ ದುರಸ್ಥಿಗೊಳಿಸಿ, ಮನೆಯ ಗೋಡೆಗೆ ಬಣ್ಣ ಬಳಿದು ನವೀಕರಣಗೊಳಿಸಿದ್ದಾರೆ.  

ಪ್ರವೀಣ್ ಶೆಟ್ಟಿ ಅವರು ವಿದೇಶದಲ್ಲಿ ಉನ್ನತ ದರ್ಜೆಯ ಉದ್ಯೋಗದಲ್ಲಿದ್ದರೂ ಸಹ ತನ್ನ ಹುಟ್ಟೂರಿನ ಜನರ ಬಗ್ಗೆ ಅಪಾರ ಕಾಳಜಿ ವಹಿಸಿದ್ದು ಅನೇಕ ಅಶಕ್ತರಿಗೆ ವೈಯಕ್ತಿಕ ನೆರವಿನ ಹಸ್ತ ನೀಡುತ್ತಾ ಬಂದಿದ್ದಾರೆ.

ಪುಷ್ಪಾ ಅವರು ಅವಿವಾಹಿತರಾಗಿದ್ದು ಹಿಂದೆ ತನ್ನ ಅಕ್ಕನ ಜೊತೆ ಜನತಾ ಕಾಲನಿಯಲ್ಲಿ ವಾಸವಾಗಿದ್ದರು. ಅಕ್ಕನ ಅಗಲಿಕೆಯ ನಂತರ ಮನೆಯಲ್ಲಿ ಒಂಟಿ ನಿವಾಸಿಯಾಗಿದ್ದಾರೆ. ಪಾರ್ಶ್ವವಾಯು ಪೀಡಿತೆ ಪುಷ್ಪ ಅವರ ದಯನೀಯ ಸ್ಥಿತಿಯನ್ನ ಅರಿತ ಪ್ರವೀಣ್ ಅವರು ಮನೆಯನ್ನು ದುರಸ್ತಿ ಮಾಡುವುದರ ಮುಖೇನ ವಿಭಿನ್ನವಾದ ಸೇವೆಗೈದಿದ್ದಾರೆ.

ದುರಸ್ತಿ ಕಾರ್ಯದಲ್ಲಿ ತಲಪಾಡಿಯ ಸ್ಥಳೀಯ ಮಿತ್ರವೃಂದ ಗೇಮ್ಸ್ ಟೀಮಿನ ಉತ್ಸಾಹಿ ಹುಡುಗರು ಶ್ರಮದಾನಗೈದಿದ್ದಾರೆ. ಕಳೆದ ವರುಷ ಮತ್ತು ಈ ಸಲದ ಲಾಕ್ ಡೌನ್ ಸಂಧರ್ಭದಲ್ಲಿ ಅಶಕ್ತರು ಮತ್ತು ನಿರಾಶ್ರಿತರಿಗೆ ನಿರಂತರ ಅನ್ನದಾಸೋಹದ ಸೇವೆಗೈಯುತ್ತಿರುವ ತೊಕ್ಕೊಟ್ಟಿನ ಸಾಯಿ ಪರಿವಾರ್ ಟ್ರಸ್ಟಿನ ಪ್ರವೀಣ್ ಶೆಟ್ಟಿಯವರ ಸಹಕಾರದಿಂದ ಪುಷ್ಪಾ ಅವರ ಶಿಥಿಲಗೊಂಡಿದ್ದ ಮುರುಕಲು ಮನೆಯನ್ನ ನವೀಕರಿಸಿದ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

 

ಇಂದು ಪುಷ್ಪ ಅವರಿಗೆ ಸಾಯಿ ಪರಿವಾರ್ ಟ್ರಸ್ಟ್ ವತಿಯಿಂದ ಆಹಾರ ಕಿಟ್ಟನ್ನು ವಿತರಿಸಲಾಯಿತು. ಸಾಯಿ ಪರಿವಾರ್ ಟ್ರಸ್ಟ್ ಗೌರವ ಸಲಹೆಗಾರರಾದ ಚಂದ್ರಹಾಸ್ ಪಂಡಿತ್ ಹೌಸ್ , ಪ್ರಮುಖರಾದ ಪ್ರವೀಣ್ ಎಸ್. ಕುಂಪಲ, ಪುರುಷೋತ್ತಮ ಕಲ್ಲಾಪು , ಸತೀಶ್ ಚೆಂಬುಗುಡ್ಡೆ, ಗಣೇಶ್ ಅಂಚನ್ ,ಸೂರ್ಯ ಕುಂಪಲ, ಸತೀಶ್ ಭಟ್ನಗರ, ಹಿತೇಶ್ ಉಳ್ಳಾಲ ಬೈಲ್ , ತಲಪಾಡಿ ಮಿತ್ರ ವೃಂದ ಗೇಮ್ಸ್ ಟೀಮ್ ಪ್ರಮುಖರಾದ ಸಂತೋಷ್ ತಲಪಾಡಿ, ದಿನೇಶ್ ಶೆಟ್ಟಿ, ದೀಪಕ್ ಪೂಜಾರಿ, ಕೌಶಿಕ್ ಶೆಟ್ಟಿ, ಶಿವಪ್ರಸಾದ್, ರಂಜಿತ್ ಮೊದಲಾದವರು ಇದ್ದರು.

Mangalore-based Businessmen from Muscat Praveen Sheety renovate the house of old-aged women in Ullal whose house was in an urge of collapsing.