ಲಾಕ್ಡೌನಲ್ಲಿ ವಾಹನ ಜಪ್ತಿಯಾದಲ್ಲಿ ಐದು ಲಕ್ಷ ಫೈನ್ ; ಜಪ್ತಿಗೆ ಅವಕಾಶ ಕೊಡದಿರಿ !

22-05-21 07:56 pm       Mangaluru Correspondent   ಕರಾವಳಿ

ವಾಹನಗಳು ವಿನಾಕಾರಣ ರಸ್ತೆಗೆ ಬಂದರೆ ಮುಟ್ಟುಗೋಲು ಹಾಕಲಾಗುವುದು ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು, ಮೇ 22: ಲಾಕ್ಡೌನ್ ಮತ್ತೆ ವಿಸ್ತರಣೆಯಾಗುತ್ತಿದ್ದಂತೆ ಪೊಲೀಸರು ಫೀಲ್ಡಿಗೆ ಇಳಿದಿದ್ದಾರೆ. ಬೆಳಗ್ಗೆ ಹತ್ತು ಗಂಟೆ ವರೆಗೆ ದಿನಸಿ ಸಾಮಗ್ರಿ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ಆನಂತರ ವಾಹನಗಳು ವಿನಾಕಾರಣ ರಸ್ತೆಗೆ ಬಂದರೆ ಮುಟ್ಟುಗೋಲು ಹಾಕಲಾಗುವುದು ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಲಾಕ್ಡೌನ್ ವಿಸ್ತರಣೆಯ ಜೊತೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ರಾಜ್ಯ ಸರಕಾರ ಸೂಚನೆ ನೀಡಿರುವುದರಿಂದ ವಿನಾಕಾರಣ ಓಡಾಡುವುದನ್ನು ತಪ್ಪಿಸಲು ಕಠಿಣ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಈ ಬಗ್ಗೆ ನಮ್ಮ ಸಿಬಂದಿಗೆ ಸ್ಪಷ್ಟ ಸೂಚನೆ ನೀಡಲಾಗಿದ್ದು, ಲಾಕ್ಡೌನ್ ಉಲ್ಲಂಘಿಸಿ ರಸ್ತೆಗಿಳಿಯುವ ವಾಹನಗಳನ್ನು ಮುಲಾಜಿಲ್ಲದೆ ಸೀಜ್ ಮಾಡಲು ಸೂಚಿಸಿದ್ದೇನೆ. ಸಾಧಾರಣವಾಗಿ 98 ಶೇಕಡಾ ಮಂದಿ ನಿಯಮ ಪಾಲನೆ ಮಾಡುತ್ತಾರೆ. ಆದರೆ, ಎರಡು ಪರ್ಸೆಂಟ್ ಜನ ಕಾನೂನು ಉಲ್ಲಂಘಿಸಿ, ರಸ್ತೆಗೆ ಬರುತ್ತಿದ್ದು ಅಂಥವರಿಗೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ.

ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ವಾಹನ ಸೀಜ್ ಮತ್ತು ಎಫ್ಐಆರ್ ದಾಖಲಾದರೆ ಸ್ಟೇಶನಲ್ಲಿ ದಂಡ ಕಟ್ಟಲು ಸಾಧ್ಯವಾಗಲ್ಲ. ನ್ಯಾಯಾಲಯದಲ್ಲೇ ದಂಡ ಕಟ್ಟಬೇಕಾಗುತ್ತದೆ. ಈಗಾಗ್ಲೇ ಕೋರ್ಟ್ ಕಲಾಪಕ್ಕೆ ತೆರೆಬಿದ್ದಿದ್ದು ತೀರಾ ಅಗತ್ಯದ ಕೇಸುಗಳನ್ನಷ್ಟೇ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತದೆ. ಹೀಗಾಗಿ ಸೀಜ್ ಆಗುವ ವಾಹನಗಳು ಸ್ಟೇಶನ್ನಲ್ಲಿ ಅಥವಾ ಬೇರಾವುದೇ ಕಡೆಯಲ್ಲಿ ಮೂರ್ನಾಲ್ಕು ತಿಂಗಳು ಅಥವಾ ವರ್ಷ ಪೂರ್ತಿ ಇರಿಸಬೇಕಾಗುತ್ತದೆ. ವಾಹನಗಳನ್ನು ಮಳೆ, ಗಾಳಿಗೆ ಹಾಗೇ ಇಟ್ಟರೆ ಹಾಳಾಗುವುದು ಸಹಜ. ಹೈ ಎಂಡ್ ಕಾರುಗಳನ್ನ ಮಳೆಗೆ ಇರಿಸಿದರೆ, ಮತ್ತೆ ಸರಿಪಡಿಸಲು ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ಅಲ್ಲದೆ, ಕೋರ್ಟಿನಲ್ಲಿ ವಾಹನ ಬಿಡಿಸಿಕೊಳ್ಳುವುದಿದ್ದರೂ ಲಕ್ಷಾಂತರ ರೂಪಾಯಿ ಕಟ್ಟಬೇಕಾಗುತ್ತದೆ.

ಎಪಿಡಮಿಕ್ ಆಕ್ಟಿನಡಿ ಕೇಸು ದಾಖಲಾದರೆ, ವ್ಯಕ್ತಿಗೆ ಏಳು ವರ್ಷ ಜೈಲು ಶಿಕ್ಷೆ ಅಥವಾ 5 ಲಕ್ಷದ ವರೆಗೆ ದಂಡ ಹಾಕಲು ಅವಕಾಶವಿದೆ. ಇದರಿಂದಾಗಿ ಜನ ವಿನಾಕಾರಣ ತಮ್ಮ ವಾಹನಗಳನ್ನು ಕಳಕೊಳ್ಳುವ ಕೆಲಸಕ್ಕೆ ಮುಂದಾಗಬೇಡಿ. ಆಮೇಲೆ ಪೊಲೀಸರನ್ನು ದೂರುವ ಕೆಲಸ ಮಾಡಬೇಡಿ. ಸರಕಾರದ ಮಾರ್ಗಸೂಚಿ ಏನಿದೆ ಅದರ ಪ್ರಕಾರ ನಡೆದುಕೊಳ್ಳಿ. ಅಗತ್ಯ ಇಲ್ಲದೆ, ವಾಹನಗಳಲ್ಲಿ ರಸ್ತೆಗೆ ಬಂದು ಪೊಲೀಸರಿಗೆ ಸಿಕ್ಕಿಬಿದ್ದರೆ ಕಷ್ಟವಾಗುತ್ತದೆ. ಈಗಾಗ್ಲೇ ಮಂಗಳೂರಿನಲ್ಲಿ 9 ಸಾವಿರ ವಾಹನಗಳನ್ನು ಸೀಜ್ ಮಾಡಿದ್ದೇವೆ. ಮಾಸ್ಕ್ ಹಾಕದಿರುವ ಬಗ್ಗೆ 9 ಸಾವಿರ ಮಂದಿಗೆ ಕೇಸು ಹಾಕಿದ್ದೇವೆ. ಎಂಡಿಎಂಎ ಮತ್ತು ಎಪಿಡಮಿಕ್ ಆಕ್ಟಿನಡಿ 850ಕ್ಕೂ ಹೆಚ್ಚು ಕೇಸು ಹಾಕಿದ್ದೇವೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ. 

ಇದೇ ವೇಳೆ, ಟ್ರಾಫಿಕ್ ಎಎಸ್ಐ ಡೊಂಬಯ್ಯ ತಮಗಾದ ನೋವಿನ ಬಗ್ಗೆ ಮಾಹಿತಿ ಹಂಚಿಕೊಂಡರು. ಈಗಿನ ಕೊರೊನಾ ಎರಡನೇ ಅಲೆ ಎಷ್ಟು ಪ್ರಭಾವಿಯಾಗಿದೆ ಅಂದ್ರೆ, ಯುವಕರನ್ನೇ ಆಹುತಿ ತೆಗೆದುಕೊಳ್ಳುತ್ತಿದೆ. ತನ್ನ ಅಣ್ಣನ ಮಗನೂ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ. ಹೀಗಾಗಿ ಲಾಕ್ಡೌನ್ ಸೂಚನೆಯನ್ನು ಜನರು ಯಥಾವತ್ ಪಾಲನೆ ಮಾಡಬೇಕು. ದೈಹಿಕವಾಗಿ ಸದೃಢರಾಗಿದ್ದರೂ ಕೇರ್ ಲೆಸ್ ಮಾಡಿದರೆ ಪ್ರಾಣವೇ ತೆರಬೇಕಾಗುತ್ತದೆ ಎಂದು ಡೊಂಬಯ್ಯ ಹೇಳಿದರು. 

Video:

Mangalore Seized vehicles to be released only on court order with fine of 5 lakhs or 7 years jail term said Police Commissioner Shahsi Kumar IPS. The city police are cracking down on unauthorized movement of vehicles during the lockdown hours amidst a surge in the number of COVID-19 positive cases.