ಮತ್ತೊಮ್ಮೆ ಅಮಾನವೀಯ ಕೃತ್ಯ ! ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದು ಸಿಕ್ಕಿಬಿದ್ದ ಕೀಚಕ !

22-05-21 08:22 pm       Mangaluru Correspondent   ಕರಾವಳಿ

ಮಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದೆ.

ಮಂಗಳೂರು, ಮೇ 22: ಮಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದೆ.

ನಗರದ ಪದವಿನಂಗಡಿಯ ಮೇರಿಹಿಲ್ ಹೆಲಿಪ್ಯಾಡ್ ಬಳಿ ಘಟನೆ ನಡೆದಿದ್ದು, ತಂದೆ- ಮಗ ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದಿದ್ದಾರೆ. ಇಂದು ಮಧ್ಯಾಹ್ನ ಹೊತ್ತಿಗೆ ಘಟನೆ ನಡೆದಿದ್ದು, ಇದರ ವಿಡಿಯೋ ಸ್ಥಳೀಯ ಅಪಾರ್ಟ್ ಮೆಂಟ್ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಕೂಡಲೇ ಸ್ಥಳೀಯರೊಬ್ಬರು ಕಾವೂರು ಠಾಣೆಗೆ ಕರೆ ಮಾಡಿ ತಿಳಿಸಿದ್ದರು. ಆದರೆ, ಕಾವೂರು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ.

ಆಬಳಿಕ ವಿಷಯ ಎನಿಮಲ್ ಕೇರ್ ಟ್ರಸ್ಟ್ ಸದಸ್ಯರು ಮತ್ತು ಸಾಮಾಜಿಕ ಕಾರ್ಯಕರ್ತ ಸುಹಾನ್ ಆಳ್ವ ಅವರಿಗೆ ಗೊತ್ತಾಗಿದ್ದು, ಅಪಾರ್ಟ್ ಮೆಂಟಿನ ಸಿಸಿಟಿವಿಯ ವಿಡಿಯೋವನ್ನು ಸಂಗ್ರಹಿಸಿ ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ, ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ಅವರಿಗೆ ತಿಳಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ. ನಾಯಿಯ ಕಾಲಿನಲ್ಲಿ ರಕ್ತ ಬರುತ್ತಿದ್ದುದನ್ನು ಪತ್ತೆ ಮಾಡಿ, ರಸ್ತೆಯಲ್ಲಿ ಹೆಜ್ಜೆ ಗುರುತಿನ ರಕ್ತದ ಕಲೆಗಳಿದ್ದುದನ್ನು ವಿಡಿಯೋ ಮಾಡಿ ಜಾಲತಾಣದಲ್ಲಿ ಹಾಕಿದ್ದರು.

ಡಿಸಿಪಿ ಸೂಚನೆಯಂತೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸಂಜೆ ವೇಳೆಗೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ನಾಯಿಯನ್ನು ಎಳ್ಕೊಂಡು ಹೋಗಿ ಪ್ರಾಣಿ ಹಿಂಸೆಗೈದ ವಿಚಾರದಲ್ಲಿ ಮತ್ತು ಲಾಕ್ಡೌನ್ ಸಮಯದಲ್ಲಿ ವಾಹನ ಬಳಸಿದ್ದಕ್ಕಾಗಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಗುಲ್ಬರ್ಗ ಮೂಲದ ನಗರದ ಕೊಂಚಾಡಿಯಲ್ಲಿ ವಾಸವಿದ್ದ ಈರಯ್ಯ ಬಸಯ್ಯ ಹಿರೇಮಠ (45) ಎಂದು ಗುರುತಿಸಲಾಗಿದೆ.

ಈರಯ್ಯ ಕೊಂಚಾಡಿಯಲ್ಲಿ ವೈದ್ಯರೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದು, ನಾಯಿ ಚಪ್ಪಲಿಯನ್ನು ಕಚ್ಚಿ ತುಂಡು ಮಾಡಿದ್ದಕ್ಕಾಗಿ ದೂರ ಬಿಟ್ಟು ಬರುವಂತೆ ಮಾಲೀಕರ ಸೂಚನೆಯಂತೆ ಬೈಕಿನಲ್ಲಿ ಹೊರಟಿದ್ದರು. ಈ ವೇಳೆ, ಸಹಾಯಕ್ಕಾಗಿ ತನ್ನ ಮಗನನ್ನು ಬಳಸಿಕೊಂಡಿದ್ದರು. ಕಾವೂರು ಇನ್ ಸ್ಪೆಕ್ಟರ್ ರಾಘವ ಪಡೀಲ್ ನೇತೃತ್ವದಲ್ಲಿ ಕೇಸು ದಾಖಲಾದ ಕೆಲ ಹೊತ್ತಲ್ಲೇ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

ಇತ್ತೀಚೆಗೆ ಸುರತ್ಕಲ್ ನಲ್ಲಿ ಇದೇ ರೀತಿಯ ಘಟನೆ ನಡೆದು ಅದರ ವಿಡಿಯೋ ವೈರಲ್ ಆದಬಳಿಕ ಪೊಲೀಸರು ಆರೋಪಿಗಳನ್ನು ಸೆರೆಹಿಡಿದಿದ್ದರು. ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

In another shameful and cruel incident, a Dog tied to a Bike and dragged in Maryhill in Mangalore has been reported in Mangalore. The video of this has been recorded on the CCTV camera of a nearby Falt. Social Worker Suhan Alwa reported the incident to DCP Hariram Shankar and brought the incident to light.