ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಹಿಂತಿರುಗುತ್ತಿದ್ದ ಬೋಟಿಗೆ ಮತ್ತೆ ಅಪಾಯ ; ಕೋಸ್ಟ್ ಗಾರ್ಡ್ ರಕ್ಷಣೆ

27-05-21 03:47 pm       Mangalore Correspondent   ಕರಾವಳಿ

ಇಂಜಿನ್ ಕೆಟ್ಟು ಅರಬ್ಬೀ ಸಮುದ್ರ ಮಧ್ಯೆ ಅಪಾಯಕ್ಕೀಡಾಗಿದ್ದ ತಮಿಳುನಾಡು ಮೂಲದ ಹತ್ತು ಮಂದಿ ಮೀನುಗಾರರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ.

ಮಂಗಳೂರು, ಮೇ 27: ಅರಬ್ಬೀ ಸಮುದ್ರ ಮಧ್ಯೆ ಇಂಜಿನ್ ಕೆಟ್ಟು ಅಪಾಯಕ್ಕೀಡಾಗಿದ್ದ ತಮಿಳುನಾಡು ಮೂಲದ ಹತ್ತು ಮಂದಿ ಮೀನುಗಾರರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ.

ಮಂಗಳೂರು ಬಂದರಿನಿಂದ 20 ನಾಟಿಕಲ್ ಮೈಲು ದೂರದಲ್ಲಿ ಇಂಜಿನ್ ಕೆಟ್ಟು ಹೋಗಿ, ಬೋಟ್ ಅಪಾಯಕ್ಕೀಡಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಇಂಡಿಯನ್ ಕೋಸ್ಟ್ ಗಾರ್ಡ್ ಪಡೆಯು ಐಸಿಜಿಎಸ್ ರಾಜದೂತ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು ಮೀನುಗಾರರನ್ನು ಮಂಗಳೂರಿನ ಹಳೆ ಬಂದರಿಗೆ ಕರೆತಂದಿದೆ.  

ತಮಿಳುನಾಡು ಮೂಲದ ಲಾರ್ಡ್ ಆಫ್ ಓಶಿಯನ್ ಹೆಸರಿನ ಬೋಟ್ ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಇತ್ತೀಚೆಗೆ ತೌಕ್ತೆ ಚಂಡಮಾರುತ ಎದುರಾಗಿತ್ತು. ಚಂಡಮಾರುತದಿಂದ ತಪ್ಪಿಸಿಕೊಳ್ಳಲು ಬೋಟ್ ಮೇ 14ರಂದು ಗುಜರಾತ್ ಕರಾವಳಿಯ ಪೋರ್ ಬಂದರಿಗೆ ತೆರಳಿತ್ತು. ಮೇ 19ರ ವರೆಗೂ ಪೋರ್ ಬಂದರಿನಲ್ಲಿದ್ದ ಬೋಟ್ ಬಳಿಕ ಸಮುದ್ರ ಮೂಲಕ ಮತ್ತೆ ತಮಿಳುನಾಡಿನತ್ತ ಪಯಣ ಬೆಳೆಸಿತ್ತು.

ಈ ವೇಳೆ, ಮಂಗಳೂರಿನಿಂದ 20 ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಸಾಗುತ್ತಿದ್ದಾಗ ಬೋಟಿನ ಇಂಜಿನ್ ಕೆಟ್ಟು ಹೋಗಿದ್ದು ಕೋಸ್ಟ್ ಗಾರ್ಡ್ ಪಡೆಗೆ ಮಾಹಿತಿ ನೀಡಲಾಗಿತ್ತು. ಇಂಜಿನ್ ಚಾಲೂ ಆಗದ್ದರಿಂದ ಬೋಟನ್ನು ತಕ್ಷಣಕ್ಕೆ ರಿಪೇರಿ ಮಾಡುವುದಕ್ಕಾಗಿ ಕೋಸ್ಟ್ ಗಾರ್ಡ್ ಪಡೆಯವರು ಮಂಗಳೂರಿನ ಹಳೆ ಬಂದರಿನ ಅಲ್ ಬದ್ರಿಯಾ ಸಂಸ್ಥೆಗೆ ತಿಳಿಸಿದ್ದರು. ಬಳಿಕ ಐಸಿಜಿಎಸ್ ರಾಜದೂತ್ ಮತ್ತು ಅಲ್ ಬದ್ರಿಯಾ ಸಂಸ್ಥೆಯ ಸಿಬಂದಿ ಸೇರಿ ಇಂಜಿನ್ ಕೆಟ್ಟಿದ್ದ ಬೋಟನ್ನು ಮಂಗಳೂರಿನ ಹಳೆ ಬಂದರಿಗೆ ಎಳೆದು ತಂದಿದ್ದಾರೆ. ಅದರಲ್ಲಿದ್ದ ಹತ್ತು ಮಂದಿ ಮೀನುಗಾರರನ್ನು ರಕ್ಷಣೆ ಮಾಡಿ, ತಾತ್ಕಾಲಿಕ ಆಶ್ರಯ ನೀಡಲಾಗಿದೆ.

Video: 

The Indian Coast Gaurd, Mangalore has rescued 10 Tamilnadu Fishermen Stranded in the Arabian Sea 20 Nautical Miles off the coast of New Mangalore in DK.