ಬಿಜೆಪಿ ಶಾಸಕರಿಂದ ಲಸಿಕೆ ಹೆಸರಲ್ಲಿ ಮಾಫಿಯಾ ; ಐವಾನ್ ಡಿಸೋಜ ಆರೋಪ

29-05-21 09:23 pm       Mangaluru Correspondent   ಕರಾವಳಿ

ಮಂಗಳೂರಿನಲ್ಲಿ ಕೊರೊನಾ ವ್ಯಾಕ್ಸಿನ್ ಹೆಸರಲ್ಲಿ ಮಾಫಿಯಾ ನಡೆಸಲಾಗುತ್ತಿದೆ. ಬಿಜೆಪಿ ಶಾಸಕರು, ಸಂಸದರು ಲಸಿಕೆಯ ಹೆಸರಲ್ಲಿ ಮಾಫಿಯಾ ನಡೆಸುತ್ತಿದ್ದಾರೆ.

ಮಂಗಳೂರು, ಮೇ 29: ಮಂಗಳೂರಿನಲ್ಲಿ ಕೊರೊನಾ ವ್ಯಾಕ್ಸಿನ್ ಹೆಸರಲ್ಲಿ ಮಾಫಿಯಾ ನಡೆಸಲಾಗುತ್ತಿದೆ. ಬಿಜೆಪಿ ಶಾಸಕರು, ಸಂಸದರು ಲಸಿಕೆಯ ಹೆಸರಲ್ಲಿ ಮಾಫಿಯಾ ನಡೆಸುತ್ತಿದ್ದಾರೆ. ಆರೋಗ್ಯ ಕೇಂದ್ರಕ್ಕೆ ನೂರು ಲಸಿಕೆ ಬಂದಲ್ಲಿ ಅದರಲ್ಲಿ 70 ಸಾರ್ವಜನಿಕರಿಗೆ ಮತ್ತು ಉಳಿದ 30 ಬಿಜೆಪಿಯವರಿಗೆ ಮೀಸಲಿಡಲಾಗುತ್ತಿದೆ. ಇದರಿಂದ ಪರೋಕ್ಷವಾಗಿ ಮಾಫಿಯಾಕ್ಕೆ ಕಾರಣವಾಗುತ್ತಿದೆ ಎಂದು ಮಾಜಿ ಎಂಎಲ್ಸಿ, ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಐವಾನ್ ಡಿಸೋಜ, ಆರೋಗ್ಯ ಕೇಂದ್ರದಲ್ಲಿ ಪ್ರತಿ ಬಾರಿ 500ಕ್ಕೂ ಹೆಚ್ಚು ಜನರು ಲಸಿಕೆಗಾಗಿ ಸೇರುತ್ತಿದ್ದಾರೆ. ಆದರೆ, ನೂರು ಲಸಿಕೆ ಲಭ್ಯವಿದ್ದರೂ 70 ಕೂಪನ್ ಮಾತ್ರ ಸಾರ್ವಜನಿಕರಿಗೆ ವಿತರಿಸಲಾಗುತ್ತದೆ. ಇನ್ನುಳಿದ 30 ಕೂಪನನ್ನು ಬಿಜೆಪಿ ಶಾಸಕರು ಮತ್ತು ಬಿಜೆಪಿಯ ಮುಖಂಡರ ಬೆಂಬಲಿಗರಿಗಾಗಿ ಉಳಿಸಲಾಗುತ್ತದೆ. 70 ಮಂದಿಗೆ ಲಸಿಕೆ ನೀಡುವ ಪ್ರಕ್ರಿಯೆ ಮುಗಿದೊಡನೆ ಬಿಜೆಪಿ ಪುಢಾರಿಗಳು ತಮ್ಮ ಬೆಂಬಲಿಗರು, ತಮ್ಮ ಕುಟುಂಬಸ್ಥರನ್ನು ತಂದು ಲಸಿಕೆ ಹಾಕಿಸುತ್ತಿದ್ದಾರೆ. ವಾಮಂಜೂರಿನಲ್ಲಿ ಈ ರೀತಿ ಪಡೆದ ಕೂಪನನ್ನು 200 ರೂ.ಗೆ ಮಾರುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.

ಯಾರು ಲಸಿಕೆ ಪಡೆಯಬೇಕು, ಯಾರು ಪಡೆಯಬಾರದು ಎಂಬುದನ್ನು ಬಿಜೆಪಿಯವರು ನಿರ್ಧರಿಸುತ್ತಿದ್ದಾರೆ. ಇದು ಲಸಿಕೆ ಹೆಸರಲ್ಲಿ ಮಾಫಿಯಾಕ್ಕೆ ಎಡೆ ಮಾಡಿಕೊಡುತ್ತಿದೆ. ಮೊದಲ ಡೋಸ್ ಮತ್ತು ಎರಡನೇ ಡೋಸ್ ಪಡೆಯುವ ಅವಧಿಯನ್ನೂ ಬಿಜೆಪಿಯವರೇ ನಿರ್ಧರಿಸುತ್ತಿದ್ದಾರೆ. ಪ್ರಧಾನಿ ಮತ್ತು ರಾಜ್ಯ ಸರಕಾರ ಎಲ್ಲ ಜನರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ಹೇಳಿದ್ದರೆ, ಬಿಜೆಪಿ ಶಾಸಕರು ಮತ್ತು ಸಂಸದರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವಂತೆ ಶಿಫಾರಸು ಮಾಡುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ 900 ರಿಂದ 2 ಸಾವಿರ ರೂ. ದರ ಇದ್ದರೂ, ಬಿಜೆಪಿಯವರು ಯಾಕೆ ಖಾಸಗಿಯಲ್ಲಿ ಲಸಿಕೆ ಪಡೆಯಲು ಪ್ರೋತ್ಸಾಹ ನೀಡುತ್ತಾರೆ ಎಂದು ಪ್ರಶ್ನೆ ಮಾಡಿದರು.

ಕಳೆದ ಐದಾರು ತಿಂಗಳಿಂದ ಲಸಿಕೆ ನೀಡಲಾಗುತ್ತಿದ್ದರೂ, ದೇಶದಲ್ಲಿ ಈವರೆಗೆ ಕೇವಲ ಹತ್ತು ಶೇಕಡಾ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಇದು ಆಳುವ ಸರಕಾರದ ವೈಫಲ್ಯವೇ ಅಥವಾ ಬೇಜವಾಬ್ದಾರಿಯೇ ಎಂದು ಪ್ರಶ್ನೆ ಮಾಡಿದ ಐವಾನ್ ಡಿಸೋಜ, ಈ ಮಧ್ಯೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವ ಸರ್ವಿಸ್ ಚಾರ್ಜನ್ನು 100ರಿಂದ 200 ರೂ.ಗೆ ಹೆಚ್ಚಿಸಲಾಗಿದೆ. ಇದೇ ವೇಳೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಸುಲಭದಲ್ಲಿ ಸಿಗುತ್ತಿದ್ದರೆ, ಸರಕಾರಿ ಆಸ್ಪತ್ರೆಗಳಲ್ಲಿ ಯಾಕೆ ಸಿಗುತ್ತಿಲ್ಲ. ಇದರರ್ಥ ಬಿಜೆಪಿಯವರು ಲಸಿಕೆ ಹೆಸರಲ್ಲಿ ವ್ಯಾಪಾರದಲ್ಲಿ ತೊಡಗಿದ್ದಾರೆ ಅನಿಸುತ್ತಿದೆ. ಬಿಜೆಪಿಯವರು ಇದಕ್ಕೇ ಫಿಟ್, ಸಾಮಾನ್ಯ ಜನರಿಗೆ ನೆರವಾಗಲು ನಾಲಾಯಕ್ಕು ಎಂದು ಹೇಳಿದರು.

ಬಿಜೆಪಿಯವರ ಲಸಿಕಾ ಮಾಫಿಯಾವನ್ನು ವಿರೋಧಿಸಿ ಮೇ 31ರ ಸೋಮವಾರ ಬಿಜೈ ಸ್ಕೂಲ್ ಬಳಿ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಐವಾನ್ ಡಿಸೋಜ ಹೇಳಿದರು. ಇದಲ್ಲದೆ, ಈಗಿನ ಲಾಕ್ಡೌನ್ ನಿರ್ಬಂಧದಿಂದಾಗಿ ಹಲವಾರು ಸಣ್ಣ ಮಟ್ಟಿನ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಇದಕ್ಕಾಗಿ ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ಎಲ್ಲ ರೀತಿಯ ಶಾಪ್, ಅಂಗಡಿಗಳನ್ನು ತೆರೆಯಲು ಅವಕಾಶ ನೀಡಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸುವುದಾಗಿ ಹೇಳಿದರು. 

Former MLC Ivan D’Souza alleged that out of 100 vaccine doses, 70 are for the public and 30 for BJP supporters and also that BJP is running a vaccine mafia.