ಲಸಿಕೆ ಹೆಸರಲ್ಲಿ ರಾಜಕೀಯ ಮಾಡೋದು ಬಿಡಿ, ಜನರಿಗೆ ಲಸಿಕೆ ಕೊಡಿಸಿ ; ಬಿಜೆಪಿ ಶಾಸಕರಿಗೆ ಯು.ಟಿ.ಖಾದರ್ ಸಲಹೆ 

03-06-21 08:16 pm       Mangaluru Correspondent   ಕರಾವಳಿ

ಲಸಿಕೆಯ ಬಗ್ಗೆ ನಾನು ತಪ್ಪು ಅಭಿಪ್ರಾಯ ಬರುವಂತೆ ಹೇಳಿಕೆ ನೀಡಿರುವುದನ್ನು ಇವರು ಸಾಬೀತುಪಡಿಸಿದಲ್ಲಿ ರಾಜಕೀಯವನ್ನೇ ಬಿಟ್ಟು ಹೋಗುತ್ತೇನೆ

ಮಂಗಳೂರು, ಜೂನ್ 3: ಸರಕಾರದ ಪ್ರತಿನಿಧಿಗಳು ಲಸಿಕೆ ಬಗ್ಗೆ ಮಾತನಾಡುವುದು ಬಿಟ್ಟು ರಾಜಕೀಯ ಮಾತನಾಡುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ನನ್ನ ವಿನಂತಿಯೇನೆಂದರೆ ಲಸಿಕೆಯ ಬಗ್ಗೆ ರಾಜಕೀಯ ಮಾಡುವುದು ನಿಲ್ಲಿಸಿ. ಲಸಿಕೆ ಏನಾಯ್ತು ಎನ್ನುವ ಬಗ್ಗೆ ಮಾತನಾಡಿ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ. 

ಈ ಬಗ್ಗೆ ಸುದ್ದಿಗೋಷ್ಠಿ ಕರೆದು ಮಾತನಾಡಿದ ಖಾದರ್, ಲಸಿಕೆಯ ಬಗ್ಗೆ ರಾಜಕೀಯ ಮಾತನಾಡಿ ಕಾಂಗ್ರೆಸ್​ನವರು ದಾರಿ ತಪ್ಪಿಸುತ್ತಿದ್ದಾರೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ಲಸಿಕೆಯ ಬಗ್ಗೆ ನಾನು ತಪ್ಪು ಅಭಿಪ್ರಾಯ ಬರುವಂತೆ ಹೇಳಿಕೆ ನೀಡಿರುವುದನ್ನು ಇವರು ಸಾಬೀತುಪಡಿಸಿದಲ್ಲಿ ರಾಜಕೀಯವನ್ನೇ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದರು. ಜನರ ದಿಕ್ಕು ತಪ್ಪಿಸಲು ಬಿಜೆಪಿಯವರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಾಮಾನ್ಯ ಜನರಿಗೆ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಖಾಸಗಿಯವರಿಗೆ ಲಸಿಕೆ ದೊರಕುತ್ತಿದ್ದರೆ, ಸರ್ಕಾರದವರಿಗೆ ಲಸಿಕೆ ದೊರಕುತ್ತಿಲ್ಲ‌. ಇದಕ್ಕಿಂತ ಮತ್ತೊಂದು ದುರಂತ ಇದೆಯೇ ಎಂದು ಪ್ರಶ್ನೆ ಮಾಡಿದ ಖಾದರ್, ದೇಶದಲ್ಲಿ ದಿವಸಕ್ಕೆ ಎಷ್ಟು ಲಸಿಕೆ ತಯಾರಾಗುತ್ತಿದೆ. ಈ ಲಸಿಕೆಯಲ್ಲಿ ಯಾರಿಗೆ ಎಷ್ಟು ಸರಬರಾಜು ಆಗುತ್ತದೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಲಿ ಎಂದು ಹೇಳಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೌಲಭ್ಯ ರದ್ದು ಮಾಡುವ ಸರ್ಕಾರಗಳಾಗಿದ್ದು, ಹಿಂದೆ ಕಾಂಗ್ರೆಸ್ ಸರಕಾರ ಕೊಟ್ಟಿದ್ದನ್ನು ಇವರು ರದ್ದು ಮಾಡುತ್ತಲೇ ಇದ್ದಾರೆ. ನಾವು ಏನೇನು ಬಡ ಜನರಿಗೆ ಕೊಟ್ಟಿದ್ದೆವೋ, ಅವೆಲ್ಲವನ್ನೂ ಬಿಜೆಪಿ ಸರಕಾರ ನಿಲ್ಲಿಸಿದೆ. ಇವರಿಗೆ ಸಾಮಾನ್ಯ ಜನರ ಬಗ್ಗೆ ಕಾಳಜಿಯೇ ಇಲ್ಲ. ಇದೀಗ ವಿದ್ಯಾರ್ಥಿಗಳ ಶಿಕ್ಷಣದ ವಿಚಾರದಲ್ಲೂ ಗೊಂದಲ ಮೂಡಿಸುತ್ತಿದ್ದಾರೆ. ಶಿಕ್ಷಣದ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾದ ನಿಲುವು ಇಲ್ಲ. ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಾ ಇಲ್ಲವೋ ಎಂಬುದನ್ನು ರಾಜ್ಯ ಸರಕಾರಕ್ಕೆ ನಿರ್ಧರಿಸಲು ಆಗುತ್ತಿಲ್ಲ. 

ರಾಜ್ಯ ಸರ್ಕಾರ ಶಿಕ್ಷಕರನ್ನು ಭಿಕ್ಷುಕರನ್ನಾಗಿ ಮಾಡುತ್ತಿದೆ. ಖಾಸಗಿ ಶಾಲೆ ಶಿಕ್ಷಕರು ಸಂಬಳ ಇಲ್ಲದೆ ಪರದಾಡುತ್ತಿದ್ದು ಅವರಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಭಾರತ ಐಟಿ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದಿದ್ದು ಕೊರೊನಾ ನೆಪದಲ್ಲಿ ಪರೀಕ್ಷೆಯನ್ನೇ ರದ್ದು ಮಾಡುವ ಬದಲು ತಾಂತ್ರಿಕ ವಿಧಾನವನ್ನು ಅನುಸರಿಸಬಹುದು. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಹೇಳಿದರು.

Former minister and MLA U T Khader on Thursday June 3 said that he will retire from politics if it is proved that he has misled public over Covid vaccines. Addressing a press meet here at the circuit house, Khader said, "The government is involved in doing politics instead of speaking on science and logic behind the vaccine.