ಲಸಿಕೆ ಅಭಿಯಾನ ; ತಲಪಾಡಿಯಲ್ಲಿ ಪಂಚಾಯತ್ ಸದಸ್ಯರ ಕೈಗೆ ಜುಟ್ಟು ! ಸ್ವಜನ ಪಕ್ಷಪಾತ ಆರೋಪ

04-06-21 06:19 pm       Mangalore Correspondent   ಕರಾವಳಿ

ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲ್ಪಟ್ಟ ಉಚಿತ ಕೋವಿಡ್ ಲಸಿಕೆಗಳನ್ನು ಗ್ರಾಮ ಪಂಚಾಯತ್ ಸದಸ್ಯರ ಸುಪರ್ದಿಗೆ ವಹಿಸಿ ಎಡವಟ್ಟು ಮಾಡಿರುವ ಘಟನೆ ನಡೆದಿದೆ. 

ಉಳ್ಳಾಲ, ಜೂ.4: ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲ್ಪಟ್ಟ ಉಚಿತ ಕೋವಿಡ್ ಲಸಿಕೆಗಳನ್ನು ಗ್ರಾಮ ಪಂಚಾಯತ್ ಸದಸ್ಯರ ಸುಪರ್ದಿಗೆ ವಹಿಸಿ ಎಡವಟ್ಟು ಮಾಡಿರುವ ಘಟನೆ ನಡೆದಿದ್ದು ಇದರಿಂದ ಲಸಿಕೆ ವಿತರಣೆಯಲ್ಲಿ ಸ್ವಜನ ಪಕ್ಷಪಾತ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. 

ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಂದು 150 ಲಸಿಕೆ ಪೂರೈಕೆಯಾಗಿದ್ದು ಅದನ್ನ ಅಧಿಕಾರಿಗಳು ಸ್ಥಳೀಯ ನಾಲ್ಕು ಪಂಚಾಯತ್ ಗಳಿಗೆ ಹಂಚಿಕೆ ಮಾಡಿದ್ದಾರೆ. ತಲಪಾಡಿ, ಕೋಟೆಕಾರು ಪಟ್ಟಣ ಪಂಚಾಯತ್, ಸೋಮೇಶ್ವರ ಪುರಸಭೆಗೆ ತಲಾ 40 ಲಸಿಕೆಗಳನ್ನ ಹಂಚಿದ್ದು, ಕಿನ್ಯಾ ಗ್ರಾಮ ಪಂಚಾಯತ್ ಗೆ 30 ಲಸಿಕೆಗಳನ್ನು ನೀಡಲಾಗಿತ್ತು. ಆದರೆ, ಸ್ಥಳೀಯ ಪಂಚಾಯತ್ ಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಕುಟುಂಬಸ್ಥರೇ ಲಸಿಕೆ ಪಡೆದಿದ್ದಾರೆಂಬ ಆರೋಪ ಕೇಳಿಬಂದಿದೆ. ‌

ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೋಪಿ ಪ್ರಕಾಶ್ ಹೇಳುವ ಪ್ರಕಾರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವುದರಿಂದ ಈಗಾಗಲೇ ಸಮಸ್ಯೆ ಉಂಟಾಗಿದ್ದು, ಮಂಗಳೂರು ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ಸೂಚನೆಯಂತೆ ಸ್ಥಳೀಯಾಡಳಿತಗಳಿಗೆ ಲಸಿಕೆಗಳನ್ನ ಹಂಚಲಾಗಿದೆ ಎಂದು ಹೇಳಿದ್ದಾರೆ. ಆದರೆ, ಆಯಾ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಅರ್ಹ ಫಲಾನುಭವಿಗಳನ್ನ ಗುರುತಿಸಬೇಕೆಂದು ಆದೇಶ ನೀಡಲಾಗಿದೆ. 

ಆದರೆ ಆಶಾ ಕಾರ್ಯಕರ್ತೆಯರು ತಮ್ಮ ಕೆಲಸವನ್ನು ಗ್ರಾಮ‌ ಪಂಚಾಯತ್ ಸದಸ್ಯರ ಕೈಗೆ ಒಪ್ಪಿಸಿದ್ದು ಅವರು ತಮಗೆ ಬೇಕಾದವರಿಗೆ ಟೋಕನ್ ಗಳನ್ನು ನೀಡಿದ್ದಾರೆ. ತಲಪಾಡಿ ಗ್ರಾಮ ಪಂಚಾಯತ್ ನಲ್ಲಿ 40 ಲಸಿಕೆಗಳನ್ನು ನೀಡಲಾಗಿದ್ದು , ಟೋಕನ್ ಗಳನ್ನು ಪಿಡಿಓ ಕೇಶವ ಪೂಜಾರಿ ಅವರು 24 ಗ್ರಾಮ ಸದಸ್ಯರ ಕೈಗೆ ನೀಡಿರುವುದಾಗಿ ತಿಳಿದು ಬಂದಿದೆ. ಪಂಚಾಯತ್ ಸದಸ್ಯರು ಲಸಿಕೆಗಳ ಟೋಕನ್ ಗಳನ್ನು ತಮ್ಮ ಸಂಬಂಧಿ, ಹಿತೈಷಿಗಳಿಗೆ ನೀಡಿ ಸ್ವಜನ ಪಕ್ಷಪಾತ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಇಂದು ಸ್ಥಳೀಯ ಪಂಚಾಯತ್ ನಲ್ಲಿ ಲಸಿಕಾ ಅಭಿಯಾನ ಇತ್ತು ಎಂಬುದು ನಮ್ಮ ಗಮನಕ್ಕೇ ಬಂದಿಲ್ಲ. ಪಂಚಾಯತ್ ಸದಸ್ಯರು ನಮ್ಮ ಗಮನಕ್ಕೂ ತಂದಿಲ್ಲ ಎಂದು ತಲಪಾಡಿ ನಿವಾಸಿ, ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ಹೇಳಿದ್ದು ಆರೋಪಕ್ಕೆ ಪುಷ್ಟಿ ನೀಡಿದೆ.‌ 

ತಲಪಾಡಿ ಪಂಚಾಯತ್ ಪಿಡಿಓ ಬಳಿ ಈ ಬಗ್ಗೆ ಕೇಳಿದರೆ, 40 ಲಸಿಕೆಗಳು ಪಂಚಾಯತಿಗೆ ಬಂದಿದ್ದು ಫಲಾನುಭವಿಗಳ ಆಯ್ಕೆಯನ್ನು ಗ್ರಾಮ ಪಂಚಾಯತ್ ಸದಸ್ಯರಿಗೆ ಬಿಟ್ಟು ಕೊಟ್ಟಿರುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಸದಸ್ಯರ ಕೈಗೇ ಟೋಕನ್ ನೀಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ‌