ಪಿಲಿಕುಳದಲ್ಲಿ ಸದ್ದಿಲ್ಲದೆ  ಸಂತಾನ ; ಹುಲಿ, ಕಾಳಿಂಗ, ಧೋಳ್, ಉಷ್ಟ್ರಪಕ್ಷಿ ಜನನ ! 

05-06-21 11:02 pm       Mangaluru Correspondent   ಕರಾವಳಿ

ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ‌.‌ 10 ವರ್ಷ ಪ್ರಾಯದ ರಾಣಿ ಹೆಸರಿನ ಹುಲಿ 3 ಮರಿಗಳಿಗೆ ಜನ್ಮ ನೀಡಿದ್ದು ಆರೋಗ್ಯವಾಗಿದೆ. 

ಮಂಗಳೂರು, ಜೂ.5: ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ‌.‌ 10 ವರ್ಷ ಪ್ರಾಯದ ರಾಣಿ ಹೆಸರಿನ ಹುಲಿ 3 ಮರಿಗಳಿಗೆ ಜನ್ಮ ನೀಡಿದ್ದು ಆರೋಗ್ಯವಾಗಿದೆ. 

ಮರಿಗಳು ಆರೋಗ್ಯದಿಂದಿದ್ದು, 16 ದಿನಗಳಲ್ಲಿ ಕಣ್ಣು ತೆರೆಯಲಿವೆ ಎಂದು ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಾಣಿ ಹುಲಿಯು 2019ರಲ್ಲಿ ರೇವಾ, ಸುಧಾ, ಜಯರಾಮ, ಸಂಜಯ ಹಾಗೂ ವಿಜಯ ಎಂಬ ಐದು ಮರಿಗಳಿಗೆ ಜನ್ಮ ನೀಡಿತ್ತು. ಅವುಗಳು ಬೆಳೆದಿದ್ದು, ಇವುಗಳಿಗೆ ಪ್ರತ್ಯೇಕವಾದ ವಾಸದ ಮನೆಯನ್ನು ನಿರ್ಮಿಸಲಾಗಿದೆ. ಅಬುಧಾಬಿಯ ರಾಮದಾಸ ಕಾಮತ್ ದಂಪತಿ 15 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಲು ಸಹಕರಿಸಿದ್ದಾರೆ. ರಾಣಿಯನ್ನು ಈ ಹಿಂದೆ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಬನ್ನೇರುಘಟ್ಟ ಮೃಗಾಲಯದಿಂದ ತರಲಾಗಿತ್ತು. ಅದರ ಬದಲಿಗೆ ಗಂಡು ಹುಲಿಯನ್ನು ಇಲ್ಲಿಂದ ನೀಡಲಾಗಿತ್ತು. ಇದೀಗ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 13ಕ್ಕೆ ಏರಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣ ಮೃಗಾಲಯದಿಂದ ತರಿಸಿಕೊಂಡ ಅಳಿವಿನಂಚಿನ ಕಾಡು ಶ್ವಾನಗಳ ವರ್ಗಕ್ಕೆ ಸೇರಿದ ‘ದೋಳ್’ ನಾಯಿ ಇತ್ತೀಚೆಗೆ ಏಳು ಮರಿಗಳಿಗೆ ಜನ್ಮ ನೀಡಿದೆ. ಇದು ಈ ಹಿಂದೆ ಐದು ಮರಿಗಳಿಗೆ ಜನ್ಮ ನೀಡಿತ್ತು. ಇನ್ನೊಂದು ದೋಳ್ 10 ಮರಿಗಳಿಗೆ ಜನ್ಮ ನೀಡಿತ್ತು. ಇದರೊಂದಿಗೆ ಪಿಲಿಕುಳದಲ್ಲಿ ದೋಳ್ ಕಾಡು ಶ್ವಾನಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ರಿಯಾ ಪಕ್ಷಿಯ ಜನನ 

ಉಷ್ಟ್ರ ಪಕ್ಷಿಯ ವರ್ಗಕ್ಕೆ ಸೇರಿದ ಬಿಳಿ ರಿಯಾ ಮೊಟ್ಟೆಗಳನ್ನಿಟ್ಟಿದ್ದು ಅವುಗಳಿಗೆ ಕಾವು ಕೊಡಲಾಗುತ್ತಿದೆ. ಅದರಲ್ಲಿ ಈಗಾಗಲೇ ಒಂದು ಬಿಳಿ ರಿಯಾ ಮೊಟ್ಟೆಯೊಡೆದು ಹೊರಬಂದಿದೆ. ಎರಡು ಬಿಳಿ ಮತ್ತು ಎರಡು ಕಂದು ರಿಯಾಗಳನ್ನು ಪ್ರಾಣಿ ವಿನಿಮಯದಡಿ ಕೇರಳದ ತಿರುವನಂತಪುರದಿಂದ ತರಲಾಗಿತ್ತು. 

ಅಪರೂಪದ ರೆಟಿಕ್ಯುಲೇಟೆಡ್ ಹೆಬ್ಬಾವು ಸುಮಾರು 20 ಮೊಟ್ಟೆಗಳನ್ನಿಟ್ಟು ಕಾವು ನೀಡುತ್ತಿದೆ. ಇದೇ ಹೆಬ್ಬಾವು ಕಳೆದ ಸಾಲಿನಲ್ಲಿ 17 ಮರಿಗಳಿಗೆ ಜನ್ಮ ನೀಡಿತ್ತು. ಈ ಹೆಬ್ಬಾವು ನಿಕೊಬಾರ್‌ನಲ್ಲಿ ಕಾಣ ಸಿಗುತ್ತಿದ್ದು ಅಳಿವಿನಂಚಿನಲ್ಲಿದೆ ಎನ್ನಲಾಗುತ್ತಿದೆ. 

ಇದೇ ವೇಳೆ, ಪಿಲಿಕುಳ ಮೃಗಾಲಯದಲ್ಲಿ ಕಾಳಿಂಗ ಸಂತಾನಭಿವೃದ್ಧಿಯನ್ನೂ ಮಾಡಿದೆ. ದೇಶದಲ್ಲೇ ಹೆಸರು ಮಾಡಿದ್ದ ‘ನಾಗಮಣಿ’ ಕಾಳಿಂಗವು ಆರು ಮೊಟ್ಟೆಗಳನ್ನಿಟ್ಟಿದ್ದು ಕೃತಕ ಕಾವು ಕೊಡಲಾಗುತ್ತಿದೆ. ಪಿಲಿಕುಳದಲ್ಲಿ ಒಟ್ಟು 19 ಕಾಳಿಂಗ ಸರ್ಪಗಳಿವೆ.

ಕೊರೊನಾ ಅನ್‌ಲಾಕ್ ಬಳಿಕ ಚೆನ್ನೈನ ವಂಡಲೂರು ಮೃಗಾಲಯದಿಂದ ಬಿಳಿ ಹುಲಿಯನ್ನು ತರಿಸಲಾಗುವುದು. ಪ್ರಾಣಿ ವಿನಿಮಯದಲ್ಲಿ ನಂದನಕಾನನ್, ಸೂರತ್ ಮತ್ತು ಹೈದರಾಬಾದ್ ಮೃಗಾಲಯದಿಂದ ಕೆಲವು ಪ್ರಾಣಿ ಪಕ್ಷಿಗಳನ್ನು ತರುವ ಬಗ್ಗೆ ಕಾರ್ಯಕ್ರಮ ಇದೆ ಎಂದು ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.

Mangaluru Animals flourish in covid times. While Tiger 'Rani' gave birth to 3 cubs, a dhole littered seven pups at Pilikula Zoo recently. A rhea chick was hatched in an incubator