ಜಾಲತಾಣದಲ್ಲಿ ಅನುರಣಿಸಿದ ತುಳುವರ ಟ್ವೀಟ್ ಅಭಿಯಾನ ; ಶಾಸಕರು, ಸಂಸದರ ವಿರುದ್ಧ ತೀವ್ರ ತರಾಟೆ

13-06-21 09:26 pm       Mangaluru Correspondent   ಕರಾವಳಿ

ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿಸಲು ಮತ್ತು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ತುಳುವರು ಟ್ವಿಟರ್ ಅಭಿಯಾನ ಕೈಗೊಂಡಿದ್ದಾರೆ. #Tuluofficial ಹೆಸರಲ್ಲಿ ಲಕ್ಷಾಂತರ ಜನರು ರಾಜ್ಯದ ಜನಪ್ರತಿನಿಧಿಗಳನ್ನು ಹೆಸರಿಸಿ ಹಕ್ಕೊತ್ತಾಯ ಮಾಡಿದ್ದಾರೆ. 

ಮಂಗಳೂರು, ಜೂನ್ 13: ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿಸಲು ಮತ್ತು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ತುಳುವರು ಟ್ವಿಟರ್ ಅಭಿಯಾನ ಕೈಗೊಂಡಿದ್ದಾರೆ. #Tuluofficial ಹೆಸರಲ್ಲಿ ಲಕ್ಷಾಂತರ ಜನರು ರಾಜ್ಯದ ಜನಪ್ರತಿನಿಧಿಗಳನ್ನು ಹೆಸರಿಸಿ ಹಕ್ಕೊತ್ತಾಯ ಮಾಡಿದ್ದಾರೆ. 

ಅಭಿಯಾನ ಶುರುವಾದ ಮೂರೇ ದಿನಗಳಲ್ಲಿ ಲಕ್ಷಾಂತರ ಜನರು ರೀ ಟ್ವೀಟ್ ಮಾಡಲು ಆರಂಭಿಸಿದ್ದು ಜಾಲತಾಣದಲ್ಲಿ ಟ್ರೆಂಡ್ ಆಗಿದೆ.‌ ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು , ಅಡಳಿತ ಪಕ್ಷದ ಅಧ್ಯಕ್ಷ ತುಳುವನೇ ಆಗಿದ್ದರೂ, ತುಳುವಿಗೆ ಸ್ಥಾನ ಕೊಡಿಸದ ವಿಚಾರದಲ್ಲಿ ಸಂಸದ ನಳಿನ್ ಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.‌ 

ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೇರಿ ಕರಾವಳಿಯ ಎರಡು ಜಿಲ್ಲೆಗಳ ಶಾಸಕರನ್ನು ಭಾರೀ ಸಂಖ್ಯೆಯಲ್ಲಿ ಜನ ಪ್ರಶ್ನೆ ಮಾಡಿದ್ದಾರೆ. ಇದರಿಂದ ಎಚ್ಚತ್ತಿರುವ ಸಂಸದ ನಳಿನ್ ಕುಮಾರ್ ಕೂಡ ಅಭಿಯಾನಕ್ಕೆ ಕೈಜೋಡಿಸಿ ರೀ ಟ್ವೀಟ್ ನಲ್ಲಿ ಭಾಗವಹಿಸಿದ್ದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. 

ನಾವು ಇವರನ್ನೇ ಪ್ರಶ್ನೆ ಮಾಡಿ ಕೇಳುತ್ತಿದ್ದರೆ ಈ ಮನುಷ್ಯ ಸ್ವತಃ ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರೆ ನಾವು ಯಾರನ್ನು ಕೇಳೋದು. ವಾಸ್ಕೋಡಿ ಗಾಮನನ್ನೇ ಎಂದು ಮಾರ್ಮಿಕ ಪ್ರಶ್ನೆ ಮುಂದಿಟ್ಟು ಜಾಲತಾಣದಲ್ಲಿ ಮರ್ಯಾದೆ ತೆಗೆದಿದ್ದಾರೆ. ನಿಮ್ಮ ಈ ರೀತಿಯ ನಿರ್ಲಕ್ಷ್ಯಕ್ಕೆ ನೀವು ಮುಂದಿನ ಚುನಾವಣೆಯಲ್ಲಿ ಬೆಲೆ ತೆರುತ್ತೀರಿ ಎಂದು ಕೆಲವರು ನೇರವಾಗಿ ಕಿಡಿಕಾರಿದ್ದಾರೆ.‌ ಪ್ರಶ್ನೆ , ತರಾಟೆಗಳ ಸುರಿಮಳೆಯಿಂದ ಇರಿಸುಮುರಿಸಿಗೆ ಒಳಗಾಗಿರುವ ಸಂಸದ ನಳಿನ್ ಕುಮಾರ್, ತುಳು ಭಾಷೆಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಸರಕಾರದ ಜೊತೆ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ. ಕೆಲವೊಂದು ತಾಂತ್ರಿಕ ದೋಷಗಳಿದ್ದು ನಮ್ಮ ಅವಧಿಯಲ್ಲೇ ತುಳು ಭಾಷೆಗೆ ರಾಜ್ಯದ ಅಧಿಕೃತ ಸ್ಥಾನಮಾನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. 

ಜಗತ್ತಿನಲ್ಲಿ ಅಂದಾಜು ಎರಡು ಕೋಟಿಗೂ ಹೆಚ್ಚು ಮಂದಿ ತುಳು ಭಾಷೆ ಮಾತನಾಡುವವರು ಇದ್ದಾರೆ ಎಂಬ ಅಂದಾಜು ಇದೆ. ಈ ಬಗ್ಗೆ ಕಳೆದ ಬಾರಿ ತುಳು ಅಕಾಡೆಮಿಯಿಂದ ರಾಜ್ಯ ಸರಕಾರಕ್ಕೆ ಮನವಿ ನೀಡಿದ ಸಂದರ್ಭದಲ್ಲಿಯೂ ಉಲ್ಲೇಖ ಮಾಡಲಾಗಿತ್ತು. ಆದರೆ, ರಾಜ್ಯ ಸರಕಾರದ ಕಡೆಯಿಂದ ಯಾವುದೇ ಪ್ರಗತಿ ಆಗಿರಲಿಲ್ಲ. ಕೇಂದ್ರ ಸರಕಾರ ಯಾವುದೇ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಬೇಕಿದ್ದರೆ ಅದರ ಪ್ರಮುಖ ಮಾನದಂಡ ರಾಜ್ಯದ ಅಧಿಕೃತ ಭಾಷೆ ಆಗಿರಬೇಕು ಎನ್ನುವುದು. ಆದರೆ, ತುಳು ಭಾಷೆಯಲ್ಲಿ ಸಮೃದ್ಧ ಸಾಹಿತ್ಯ, ಜನಪದ ಪರಂಪರೆ ಇರುವುದರ ಜೊತೆಗೆ ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ  ಸಾಮಾನ್ಯ ಜನರ ಆಡು ಭಾಷೆಯಾಗಿದ್ದರೂ ಕರ್ನಾಟಕ ಸರಕಾರ ತುಳುವನ್ನು ಅಧಿಕೃತ ಭಾಷೆಯೆಂದು ಘೋಷಣೆ ಮಾಡದಿರಲು ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣವಾಗಿದೆ. 

ಎರಡು ವರ್ಷಗಳ ಹಿಂದೆ ಕಾಸರಗೋಡು ಸಂಸದ ಕೆ.ಎಂ‌. ಉಣ್ಣಿತ್ತಾನ್ ಸ್ವತಃ ಮಲೆಯಾಳಿಯಾಗಿದ್ದರೂ ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸಬೇಕೆಂದು ಸಂಸತ್ತಿನಲ್ಲಿ ಒತ್ತಾಯ ಮಂಡಿಸಿದ್ದರು.‌ ಆದರೆ, ಸ್ವತಃ ತುಳು ಮಾತೃಭಾಷೆಯವರೇ ಆಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿಯ ಸಂಸದರಾದ ನಳಿನ್ ಕುಮಾರ್ ಹಾಗೂ ಶೋಭಾ ಕರಂದ್ಲಾಜೆ ಈ ಕುರಿತು ಯಾವುದೇ ರೀತಿಯ ಪ್ರಯತ್ನ ಮಾಡದಿರುವುದು ತುಳುವರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಟ್ವೀಟ್ ಅಭಿಯಾನದಲ್ಲಿ ಶಾಸಕರು ಮತ್ತು ಸಂಸದರನ್ನು ಮುಂದಿಟ್ಟು ಕಿಡಿಕಾರುತ್ತಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಸಿಎಂ ಆಗಿದ್ದರೂ ತುಳುವರಿಗೆ ಯಾವುದೇ ಕೊಡುಗೆ ನೀಡಿಲ್ಲ. ಈಗ ಕೇಂದ್ರ ಸಚಿವನಾಗಿದ್ದರೂ ತುಳು ಭಾಷೆಗೆ ಸ್ಥಾನಮಾನ ನೀಡಲು ವಿಫಲರಾಗಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. 

Demanding official language status to Tulu language, various Tulu organisations in Mangalore have initiated Twitter campaign, which received an overwhelming response. With the hashtag #TuluOfficialinKA_KL, the campaign commenced on Sunday morning from 6 am till midnight. Hundreds of tweets slammed MP and Minsters of for not doing any work in making the Tulu language an official language status.