ವ್ಯಕ್ತಿಯ ದೇಹಕ್ಕೆ ಅಂಟಿಕೊಳ್ಳುತ್ತಿದೆ ಸ್ಟೀಲ್ ವಸ್ತುಗಳು ! ಅಚ್ಚರಿ ಮೂಡಿಸಿದೆ ಚಮತ್ಕಾರ 

14-06-21 09:40 pm       Udupi Correspondent   ಕರಾವಳಿ

ಕೊರೊನಾ ಲಸಿಕೆ ಪಡೆದ ವ್ಯಕ್ತಿಯೊಬ್ಬರ ದೇಹದಲ್ಲಿ ಲೋಹದ ವಸ್ತುಗಳು ಅಂಟಿಕೊಳ್ಳುತ್ತಿರುವ ಬೆಳವಣಿಗೆ ಕಂಡುಬಂದಿದ್ದು ಬಹಳಷ್ಟು ಅಚ್ಚರಿಗೆ ಕಾರಣವಾಗಿದೆ.

ಉಡುಪಿ, ಜೂ.14: ಕೊರೊನಾ ಲಸಿಕೆ ಪಡೆದ ವ್ಯಕ್ತಿಯೊಬ್ಬರ ದೇಹದಲ್ಲಿ ಲೋಹದ ವಸ್ತುಗಳು ಅಂಟಿಕೊಳ್ಳುತ್ತಿರುವ ಬೆಳವಣಿಗೆ ಕಂಡುಬಂದಿದ್ದು ಬಹಳಷ್ಟು ಅಚ್ಚರಿಗೆ ಕಾರಣವಾಗಿದೆ. ವ್ಯಕ್ತಿಯ ದೇಹದಲ್ಲಿ ಸ್ಟೀಲ್ ಚಮಚ, ಸವುಟು, ನಾಣ್ಯ ಇತ್ಯಾದಿ ವಸ್ತುಗಳು ಅಯಸ್ಕಾಂತದ ರೀತಿ ಅಂಟಿಕೊಳ್ಳುತ್ತಿವೆ. 

ಕೊರೋನಾ ಲಸಿಕೆ ಪಡೆದವರ ದೇಹದಲ್ಲಿ ವಿದ್ಯುತ್ ಹಾಗೂ ಅಯಸ್ಕಾಂತದ ಗುಣಗಳಿರುವ ಕುರಿತ ವಿಡಿಯೋಗಳು ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅಂತಹ ವಿಡಿಯೋವೊಂದನ್ನು ನೋಡಿದ ಉಡುಪಿ ಪಿಪಿಸಿ ಕಾಲೇಜು ಸಮೀಪದ ತೆಂಕಪೇಟೆ ನಿವಾಸಿ ರಾಮ್ ದಾಸ್ ಶೇಟ್ (52), ತನ್ನ ದೇಹದಲ್ಲೂ ಅಂತಹ ಸಮಸ್ಯೆ ಇದೆಯೇ ಎಂದು ಪರೀಕ್ಷಿಸಿದರು. ಆಗ ಈ ಅಚ್ಚರಿ ಕಂಡುಬಂದಿದೆ. 

‘ವಿಡಿಯೋದಲ್ಲಿರುವಂತೆ ನಾನು ಕೂಡ ನನ್ನ ದೇಹದ ಮುಖ, ಎದೆ, ಹಣೆ, ಕೈಯ ರಟ್ಟೆಯಲ್ಲಿ 10-15 ನಾಣ್ಯಗಳನ್ನು ಇಟ್ಟುಕೊಂಡೆ. ಆಗ ಅವುಗಳು ಕೆಳಗೆ ಬೀಳದೆ ಅಂಟಿಕೊಂಡಿದ್ದವು. ಅದೇ ರೀತಿ 8-10 ಚಮಚಗಳನ್ನು ಕೂಡ ಇಟ್ಟು ನೋಡಿದೆ. ಅದು ಕೂಡ ಅಂಟಿಕೊಳ್ಳುತ್ತಿರುವುದು ಕಂಡುಬಂತು. ಆ ವಿಡಿಯೋದಲ್ಲಿ ಲಸಿಕೆ ಪಡೆದುಕೊಂಡವರ ದೇಹದಲ್ಲಿ ಈ ರೀತಿ ಆಗುತ್ತಿದೆ ಎಂದು ಹೇಳಲಾಗಿದೆ. ನಾನು ಕೂಡ ಲಸಿಕೆ ತೆಗೆದುಕೊಂಡಿರುವುದರಿಂದ ಈ ಪ್ರಯತ್ನ ಮಾಡಿದೆ’ ಎನ್ನುತ್ತಾರೆ ಚಿನ್ನದ ಕೆಲಸಗಾರ ರಾಮದಾಸ್ ಶೇಟ್.

ಈ ರೀತಿಯ ಬೆಳವಣಿಗೆ ನೋಡಿ ಮನೆ ಮಂದಿಗೆಲ್ಲ ಅಚ್ಚರಿಯಾಗಿದೆ. ಈ ಬಗ್ಗೆ ನೆರೆಮನೆಯ ವ್ಯಕ್ತಿಗೆ ತಿಳಿಸಿದ್ದು ಅವರು ಕೂಡ ನೋಡಿ ಆಶ್ಚರ್ಯ ಪಟ್ಟು ವೈದ್ಯರಲ್ಲಿ ಪರೀಕ್ಷಿಸಲು ತಿಳಿಸಿದ್ದಾಗಿ ರಾಮದಾಸ್ ತಿಳಿಸಿದ್ದಾರೆ.

ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ರಾಮ್ ದಾಸ್ ಶೇಟ್ ಗೆ ಇಸಿಜಿ, ರಕ್ತ ಪರೀಕ್ಷೆ ಮಾಡಿಸಲಾಗಿದ್ದು, ಹೆಚ್ಚಿನ ರಕ್ತ ಪರೀಕ್ಷೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮಾಡುವಂತೆ ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಲಸಿಕೆಯಿಂದ ಅಯಸ್ಕಾಂತೀಯ ಲಕ್ಷ್ಮಣ ಬರಲ್ಲ 

ಕೊರೊನಾ ಲಸಿಕೆ ಪಡೆದುಕೊಳ್ಳುವುದರಿಂದ ಯಾವುದೇ ಕಾರಣಕ್ಕೂ ಮನುಷ್ಯನ ದೇಹದಲ್ಲಿ ಅಯಸ್ಕಾಂತೀಯ ಲಕ್ಷ್ಮಣಗಳು ಅಥವಾ ಆ ರೀತಿಯ ಶಕ್ತಿ ಕಂಡು ಬರುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಅವರ ಹಣೆ, ಭುಜ, ಬೆನ್ನು, ಹೊಟ್ಟೆ, ಮೊಣಕೈ ಭಾಗದಲ್ಲಿ ಅಯಸ್ಕಾಂತೀಯ ಲಕ್ಷ್ಮಣಗಳು ಕಂಡುಬಂದಿದೆ. ಅವರಿಗೆ ಬಿಪಿ, ಶುಗರ್ ಇದೆ ಎಂದರು.

ಎ.28ರಂದು ಇವರು ಮೊದಲ ಡೋಸ್ ಪಡೆದುಕೊಂಡಿದ್ದು ಕೊರೋನಾ ಲಸಿಕೆ ಪಡೆದಿದ್ದ ಬೇರೆ ಯಾರಿಗೂ ಅಂತಹ ಲಕ್ಷ್ಮಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Man in Udupi gets Magnetic Power after he took vaccine against COVID-19. Earlier, a video clip showing some metal objects such as coins and spoons sticking and hanging onto his body went viral on social media. The Udupi district administration on Monday asked 50-year-old Ramdas Shet to undergo a medical test.