ಧರ್ಮಸ್ಥಳ ಕ್ಷೇತ್ರ, ಹೆಗ್ಗಡೆ ಕುಟುಂಬಸ್ಥರ ಬಗ್ಗೆ ಅಪಪ್ರಚಾರ ; ಸೋಮನಾಥ ನಾಯಕ್ ಗೆ ಮೂರು ತಿಂಗಳು ಜೈಲು ಶಿಕ್ಷೆ

17-06-21 01:36 pm       Mangalore Correspondent   ಕರಾವಳಿ

ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡಿದ ಕೆ. ಸೋಮನಾಥ ನಾಯಕ್‌ ವಿರುದ್ಧ ಮೂರು ತಿಂಗಳ ಜೈಲು ಶಿಕ್ಷೆ ಆದೇಶವನ್ನು ಬೆಳ್ತಂಗಡಿ ನ್ಯಾಯಾಲಯ ಪುನರುಚ್ಚರಿಸಿದೆ.

ಬೆಳ್ತಂಗಡಿ, ಜೂ.17: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡಿದ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ ವಿರುದ್ಧ ಮೂರು ತಿಂಗಳ ಜೈಲು ಶಿಕ್ಷೆ ಆದೇಶವನ್ನು ಬೆಳ್ತಂಗಡಿ ನ್ಯಾಯಾಲಯ ಪುನರುಚ್ಚರಿಸಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಕ್ಷೇತ್ರದಿಂದ ದಾಖಲಿಸಲ್ಪಟ್ಟ ಮೂಲ ದಾವೆ ನಂಬರ್‌ 226/2013ರಲ್ಲಿ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ ಮತ್ತು ಇತರರ ವಿರುದ್ಧ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬಸ್ಥರು ಹಾಗೂ ಸಂಸ್ಥೆಗಳ ಗೌರವಕ್ಕೆ ಹಾನಿಯಾಗುವ ಹೇಳಿಕೆ ಅಥವಾ ಆರೋಪ ಮಾಡದಂತೆ ಬೆಳ್ತಂಗಡಿ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಪ್ರತಿಬಂಧಕಾಜ್ಞೆ ಜಾರಿಗೊಳಿಸಿತ್ತು. ಈ ಆದೇಶ ಪದೇ ಪದೆ ಉಲ್ಲಂಘನೆಯಾಗುತ್ತಿದ್ದ ಕಾರಣ ಮತ್ತೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್‌ ಹಿಂದೆ ಎರಡು ಬಾರಿ ಸೋಮನಾಥ ನಾಯಕ್‌ಗೆ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಇದರ ವಿರುದ್ಧ ಸೋಮನಾಥ ನಾಯಕ್‌ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಪ್ರಕರಣದ ಹೆಚ್ಚುವರಿ ತನಿಖೆಗೆ ಮೂಲ ಕೋರ್ಟ್‌ಗೆ ಅರ್ಜಿ ರವಾನಿಸಲ್ಪಟ್ಟಿತ್ತು.

ಈ ಸಂಬಂಧ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಜೂ.8ರಂದು ಅಂತಿಮ ಆದೇಶ ಹೊರಡಿಸಿ, ಹಿಂದಿನ ತೀರ್ಪನ್ನೇ ಪುನರುಚ್ಚರಿಸಿದ್ದಾರೆ. ಮೂರು ತಿಂಗಳ ಜೈಲು ಶಿಕ್ಷೆ ಅಲ್ಲದೆ ಸೋಮನಾಥ ನಾಯಕ್ ಗೆ ಸೇರಿದ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿ ಶ್ರೀ ಕ್ಷೇತ್ರಕ್ಕೆ 4.50 ಲಕ್ಷ ರು. ಪರಿಹಾರ ನೀಡಬೇಕು. ಪ್ರಕರಣದಲ್ಲಿ ಕೋರ್ಟ್‌ ಅವಧಿ ದುರುಪಯೋಗಪಡಿಸಿ ಮತ್ತೆ ಶ್ರೀ ಕ್ಷೇತ್ರಕ್ಕೆ ಉಪಟಳ ನೀಡಿದ್ದಕ್ಕೆ ಹೆಚ್ಚುವರಿ ಪರಿಹಾರವಾಗಿ 2,000 ರು. ನೀಡುವಂತೆಯೂ ಆದೇಶಿಸಿದೆ ಎಂದು ಎ.ವಿ. ಶೆಟ್ಟಿ ಧರ್ಮಸ್ಥಳದ ಪರವಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Belthanagady Nagarika Trust President Somanath sentenced to months in jail for damaging  Dharmasthala Hedges's family name.