ಕಾಂಕ್ರೀಟ್ ಗೂಡಿನಲ್ಲಿ ನೀರೇ ಇಲ್ಲದೆ ಜೀವ ತೇಯುತ್ತಿದೆ ವೃದ್ಧ ದಂಪತಿ! ಬಿಲ್ಡರ್ ಮಾಡಿದ ಕರ್ಮಕ್ಕೆ ಬಡ ಜೀವಗಳಿಗೆ ನೀರು ಕಡಿತದ ಶಿಕ್ಷೆ !    

17-06-21 05:40 pm       Mangalore Correspondent   ಕರಾವಳಿ

ಇಲ್ಲೊಂದು ವೃದ್ಧ ದಂಪತಿಯ ಕುಟುಂಬ ಅಪಾರ್ಟ್ಮೆಂಟ್ ಅಸೋಸಿಯೇಶನ್ ಮತ್ತು ಬಿಲ್ಡರ್ ಮಾಫಿಯಾದ ದುರುಳರ ನಡುವೆ ಸಿಕ್ಕಿಬಿದ್ದು ನೀರಿನ ಪೂರೈಕೆಯನ್ನೇ ಕಡಿದುಕೊಂಡು ಕಷ್ಟ ಪಡುತ್ತಿರುವ ಕರುಣಾಜನಕ ಕತೆ ಹೇಳ್ತೀವಿ ಕೇಳಿ...

ಮಂಗಳೂರು, ಜೂನ್ 16: ಸ್ವಂತ ಮನೆ ಕೊಳ್ಳುವುದು ಪ್ರತೀ ಕುಟುಂಬದ ಕನಸು. ಆದರೆ, ನಗರ ಮಧ್ಯದ ಕಾಂಕ್ರೀಟ್ ಗೂಡುಗಳಲ್ಲಿ ಹಿಂದೆ ಮುಂದೆ ನೋಡದೆ ಮನೆ ಕೊಳ್ಳಲು ಹೋದರೆ ಕುತ್ತಿಗೆ ಕೊಯ್ದುಕೊಳ್ಳುವ ಸ್ಥಿತಿ. ಯಾಕಂದ್ರೆ, ಬಿಲ್ಡರುಗಳು, ಅಪಾರ್ಟ್ಮೆಂಟ್ ಅಸೋಸಿಯೇಶನ್ನುಗಳು ಸಾಮಾನ್ಯರನ್ನು ಕುತ್ತಿಗೆ ಹಿಚುಕುವ ಕೆಲಸ ಮಾಡುತ್ತಿದೆಯೋ ಏನೋ ಅನ್ನುವಂತಿದೆ. ಒಮ್ಮೆ ಒಳಹೊಕ್ಕರೆ ಬಿಡಿಸಿಕೊಳ್ಳಲಾಗದ ರೀತಿಯ ಬಂಧನದಲ್ಲಿ ಸಿಲುಕಬೇಕಾಗುತ್ತದೆ. ಇತ್ತೀಚೆಗೆ ಹೆಡ್ ಲೈನ್ ಕರ್ನಾಟಕ, ಮಂಗಳೂರಿನ ಪ್ರತಿಷ್ಠಿತ ಅಪಾರ್ಟ್ಮೆಂಟ್ ಒಂದರಲ್ಲಿ ಕರೆಂಟ್ ಕಡಿತದ ಶಿಕ್ಷೆಗೊಳಗಾಗಿ ಬವಣೆ ಪಡುತ್ತಿರುವ ವೃದ್ಧ ಕುಟುಂಬವೊಂದರ ಬಗ್ಗೆ ವರದಿ ಮಾಡಿತ್ತು. ಇಲ್ಲೊಂದು ವೃದ್ಧ ದಂಪತಿಯ ಕುಟುಂಬ ಅಪಾರ್ಟ್ಮೆಂಟ್ ಅಸೋಸಿಯೇಶನ್ ಮತ್ತು ಬಿಲ್ಡರ್ ಮಾಫಿಯಾದ ದುರುಳರ ನಡುವೆ ಸಿಕ್ಕಿಬಿದ್ದು ನೀರಿನ ಪೂರೈಕೆಯನ್ನೇ ಕಡಿದುಕೊಂಡು ಕಷ್ಟ ಪಡುತ್ತಿರುವ ಕರುಣಾಜನಕ ಕತೆ ಹೇಳ್ತೀವಿ ಕೇಳಿ.

ನಗರದ ಪಾಂಡೇಶ್ವರದಲ್ಲಿ ರಸ್ತೆ ಬದಿಯಲ್ಲೇ ಇರುವ ಕೆಟು ಹ್ಯಾಬಿಟೇಟ್ ಎನ್ನುವ ಹೆಸರಿನ ಅಪಾರ್ಟ್ಮೆಂಟಿನಲ್ಲಿ ಕಳೆದ ಆರು ವರ್ಷಗಳಿಂದ ವಾಸವಿರುವ ರಾಧಾಕೃಷ್ಣ ಕಾಮತ್ ಮತ್ತು ಶ್ಯಾಮಲಾ ಕಾಮತ್ ದಂಪತಿ ಕಳೆದ ಮೂರು ವರ್ಷಗಳಿಂದ ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಹೌದು.. ಅಪಾರ್ಟ್ಮೆಂಟ್ ಅಸೋಸಿಯೇಶನ್ ಮತ್ತು ಬಿಲ್ಡರ್ ಜೊತೆಗಿನ ಜಟಾಪಟಿಯಲ್ಲಿ ವೃದ್ಧ ದಂಪತಿಯ ಕುಟುಂಬಕ್ಕೆ ನೀರನ್ನು ನಿರಾಕರಿಸಿ, ಅವರ ಬದುಕಿನ ಹಕ್ಕನ್ನೇ ಕಸಿಯಲಾಗಿದೆ.

ಅಪಾರ್ಟ್ಮೆಂಟಿನ ಮೊದಲ ಮಹಡಿಯಲ್ಲಿರುವ ಶ್ಯಾಮಲಾ ಕಾಮತ್ ಮತ್ತು ರಾಧಾಕೃಷ್ಣ ಕಾಮತ್ ದಂಪತಿ ಇಬ್ಬರೂ ಬ್ಯಾಂಕ್ ಮ್ಯಾನೇಜರ್ ಆಗಿ ನಿವೃತ್ತಿಯಾದವರು. ಇಬ್ಬರು ಕೂಡ 70 ಮತ್ತು 65ರ ಆಸುಪಾಸಿನ ವೃದ್ಧರು. ಮೇಲಾಗಿ ಅವರ ಒಬ್ಬ ಪುತ್ರಿ ಅಂಗವಿಕಲೆಯಾಗಿದ್ದು, ಲೋಕದ ಪರಿವೆ ಇಲ್ಲದೆ ಮನೆಯಲ್ಲೇ ಇದ್ದಾರೆ. ಇನ್ನೊಬ್ಬ ಪುತ್ರಿ ಬಾಣಂತಿಯಾಗಿದ್ದು, ಮಗುವಿನ ಪೋಷಣೆಗಾಗಿ ಹೆತ್ತವರ ಜೊತೆಗಿದ್ದಾರೆ. ಮನೆಯಲ್ಲಿ ಇಂಥ ಕರುಣಾಜನಕ ಸ್ಥಿತಿಯಿದ್ದರೂ, ಬಿಲ್ಡಿಂಗ್ ಅಸೋಸಿಯೇಶನ್ ಮೂರು ವರ್ಷಗಳಿಂದ ನೀರನ್ನೇ ಕಡಿತಗೊಳಿಸಿ ವೃದ್ಧ ದಂಪತಿಗೆ ಮಾನಸಿಕ ಕಿರುಕುಳ ನೀಡುತ್ತಿದೆ. ಇಷ್ಟಕ್ಕೂ ಇವರ ದುಸ್ಥಿತಿಗೆ ಕಾರಣ ಆಗಿದ್ದು ಅಪಾರ್ಟ್ಮೆಂಟಿನ ದುರವಸ್ಥೆ !  

ಉಕ್ಕುತ್ತಿದ್ದ ಟಾಯ್ಲೆಟ್ ಕೊಳಚೆ ನೀರು !  

ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಪೈಪ್ ಲೈನ್ ವ್ಯವಸ್ಥೆಯನ್ನೇ ಸರಿಯಾಗಿ ಮಾಡಿಲ್ಲ. ಕಟ್ಟಡದ ನೆಲ ಅಂತಸ್ತಿನಲ್ಲಿ ಪಾರ್ಕಿಂಗ್ ಇರಬೇಕಾದ ಜಾಗದಲ್ಲಿ ಕಮರ್ಶಿಯಲ್ ಕಾಂಪ್ಲೆಕ್ಸ್ ಮಾಡಲಾಗಿದೆ. ಅಡಿ ಭಾಗದಲ್ಲಿ ಅಥವಾ ಒಂದು ಮೂಲೆಯಲ್ಲಿ ಇರಬೇಕಿದ್ದ ಕಟ್ಟಡದ ಪೈಪ್ ಲೈನನ್ನು ಮೊದಲ ಮಹಡಿಯಲ್ಲಿ ಮನೆಗಳ ಸಂದಿನಲ್ಲಿ ಮಾಡಿರುವುದು ಅವ್ಯವಸ್ಥೆಗೆ ಕಾರಣವಾಗಿದೆ. ಕಟ್ಟಡದ ಇಂಜಿನಿಯರಿಂಗ್ ಲೋಪದಿಂದಾಗಿ ಪೈಪ್ ಲೈನಲ್ಲಿ ಹರಿಯುವ ಕೊಳಚೆ ನೀರು ಶ್ಯಾಮಲಾ ಕಾಮತ್ ಮನೆಯೊಳಗೆ ಸೇರುತ್ತಿದ್ದು, ಅಲ್ಲಿ ಜೀವನವೇ ಕಷ್ಟ ಎನ್ನುವಂತಾಗಿದೆ. ರಾಧಾಕೃಷ್ಣ ಕಾಮತ್ ದಂಪತಿ ಮನೆಯನ್ನು 2010ರಲ್ಲಿ ಖರೀದಿಸಿದ್ದರೂ, ಈ ರೀತಿಯ ಅವ್ಯವಸ್ಥೆ ಇರುವ ಬಗ್ಗೆ ದಂಪತಿಯ ಗಮನಕ್ಕೆ ಬಂದಿದ್ದು 2015ರಲ್ಲಿ. ಬೇರೆ ಬೇರೆ ಕಡೆ ವೃತ್ತಿ ಮುಗಿಸಿ ನಿವೃತ್ತಿಯ ಬಳಿಕ ತಮ್ಮದೇ ಮನೆಯಲ್ಲಿ ಇರುವುದಕ್ಕಾಗಿ ದಂಪತಿ ಬಂದಿದ್ದರು. ಆದರೆ, ಮನೆಯಲ್ಲಿ ನೋಡಿದರೆ ಟಾಯ್ಲೆಟ್ ಒಳಗಿಂದ ಕೊಳಚೆ ನೀರು ಹೊರ ಚಿಮ್ಮುತ್ತಿತ್ತು. ಹೊಸ ಮನೆಯಲ್ಲಿ ಇರೋಣ ಎಂದುಕೊಂಡು ಬಂದಿದ್ದರೆ, ಕೆಲವೊಮ್ಮೆ ಮನೆಯ ಒಳಗೆಲ್ಲಾ ಕೊಳಚೆ ನೀರು ಬರುತ್ತಿತ್ತು.

ಇದರಿಂದ ಬೇಸತ್ತ ರಾಧಾಕೃಷ್ಣ ಕಾಮತ್, ಈ ಬಗ್ಗೆ ಬಿಲ್ಡರ್ ಆಗಿರುವ ಕೆ.ಎಂ.ಅಬ್ದುಲ್ ಬಶೀರ್ ಜೊತೆಗೆ ಆಕ್ಷೇಪ ತೆಗೆದಿದ್ದರು. ಬಿಲ್ಡರ್, ಅದನ್ನು ಸರಿ ಮಾಡಿಕೊಡುತ್ತೇನೆಂದು ಹೇಳಿದರೂ ಮಾಡಿಕೊಟ್ಟಿರಲಿಲ್ಲ. ಆನಂತರ ಫ್ಲಾಟ್ ಅಸೋಸಿಯೇಶನ್ ಪ್ರತಿನಿಧಿಗಳಲ್ಲಿ ಹೇಳಿಕೊಂಡರೂ ಅವರು ಕೂಡ ಸ್ಪಂದಿಸದೆ ದಂಪತಿಯನ್ನು ಕಷ್ಟಕ್ಕೆ ದೂಡಿದ್ದರು. ಇದೇ ವಿಚಾರ ಬಳಿಕ ಜಟಾಪಟಿಗೆ ಕಾರಣವಾಗಿ, ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ರಾಧಾಕೃಷ್ಣ ಕಾಮತ್ ಮಂಗಳೂರಿನ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಅಲ್ಲದೆ, ಫ್ಲಾಟ್ ಅಸೋಸಿಯೇಶನ್ನಿಗೆ ನೀಡುತ್ತಿದ್ದ ತಿಂಗಳ ನಿರ್ವಹಣಾ ವೆಚ್ಚವನ್ನು ಕೊಡುವುದನ್ನೂ ನಿಲ್ಲಿಸಿದ್ದರು. ಆನಂತರ, 2018ರ ಅಕ್ಟೋಬರಿನಲ್ಲಿ ದೂರು ಅರ್ಜಿ ಕೋರ್ಟಿನಲ್ಲಿ ವಿಚಾರಣೆಯಲ್ಲಿ ಇರುವಾಗಲೇ ವಕೀಲ ದಯಾನಂದ ರೈ ಎಂಬವರು ಫ್ಲಾಟ್ ಅಸೋಸಿಯೇಶನ್ ಪರವಾಗಿ ಲಾಯರ್ ನೋಟೀಸ್ ಕಳಿಸಿದ್ದು, ನೀವು ಪ್ರತಿ ತಿಂಗಳ ಫ್ಲಾಟ್ ನಿರ್ವಹಣಾ ವೆಚ್ಚ ಪಾವತಿಸದಿದ್ದಲ್ಲಿ ಮೂಲಸೌಕರ್ಯ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಅವ್ಯವಸ್ಥೆ ಪ್ರಶ್ನೆ ಮಾಡಿದ್ದಕ್ಕೆ ನೀರು ಕಡಿತ

ನಮಗಾಗುತ್ತಿರುವ ತೊಂದರೆಯನ್ನು ಸರಿಪಡಿಸದೇ ಇದ್ದರೆ, ತಿಂಗಳ ನಿರ್ವಹಣಾ ವೆಚ್ಚ ಕೊಡಲು ಸಾಧ್ಯವಿಲ್ಲವೆಂದು ರಾಧಾಕೃಷ್ಣ ಕಾಮತ್ ತಿಳಿಸಿದ್ದಾರೆ. ಅಲ್ಲದೆ, ಹೇಗೂ ವಿಚಾರ ಕೋರ್ಟಿನಲ್ಲಿದ್ದು, ಇನ್ನು ಸದ್ಯದಲ್ಲೇ ತೀರ್ಪು ಬರಲಿದೆ, ನೋಡೋಣ ಎಂದರೂ ಫ್ಲಾಟ್ ಅಸೋಸಿಯೇಶನ್ ಪ್ರತಿನಿಧಿಗಳು ದಂಪತಿಯ ಮನೆಗೆ ನೀರಿನ ಪೂರೈಕೆಯನ್ನು ಕಡಿತಗೊಳಿಸಿ ಹೀನಾಯವಾಗಿ ನಡೆದುಕೊಂಡಿದ್ದಾರೆ. ಒಂದು ಟಾಯ್ಲೆಟಿಗೆ ಮಾತ್ರ ನೀರಿನ ಪೂರೈಕೆಯನ್ನು ಉಳಿಸಿದ್ದಾರೆ. ಪ್ರತಿಷ್ಠಿತ ಕಾರ್ಪೊರೇಶನ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದ ರಾಧಾಕೃಷ್ಣ ಕಾಮತ್ ಮತ್ತು ಶ್ಯಾಮಲಾ ಕಾಮತ್ ಜೀವನದುದ್ದಕ್ಕೂ ದುಡಿದು ಕೂಡಿಟ್ಟ ಹಣದಲ್ಲಿ ಖರೀದಿಸಿದ್ದ 50 ಲಕ್ಷದ ಫ್ಲಾಟಿನಲ್ಲಿ ಕಳೆದ ಮೂರು ವರ್ಷಗಳಿಂದಲೂ ಜೀತದ ರೀತಿ ಜೀವನ ನಡೆಸುತ್ತಿದ್ದಾರೆ.

ನೀರು ಕಡಿತ ಮಾಡಿದ್ರೂ ಅಧಿಕಾರಿಗಳಿಗಿಲ್ಲ ಗೊಡವೆ

ಮೂರು ವರ್ಷಗಳಿಂದಲೂ ದಿನಕ್ಕೆ 70 ಲೀಟರ್ ನಂತೆ ಕುಡಿಯುವ ನೀರನ್ನು ದಿನ ಬಳಕೆಗಾಗಿ ಹೊರಗಿನಿಂದ ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಬಟ್ಟೆ ಮತ್ತು ಪಾತ್ರೆ ತೊಳೆಯಲು ಟಾಯ್ಲೆಟ್ ಗೆ ಪೈಪ್ ಹಾಕಿ, ಒಂದು ಕೊಠಡಿಯಿಂದ ಇನ್ನೊಂದು ಕೊಠಡಿಗೆ ನೀರಿನ ಪೂರೈಕೆ ಮಾಡುತ್ತಿದ್ದಾರೆ. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಗೂ ದೂರು ನೀಡಿದ್ದು, ನಾವು ನಿಮ್ಮ ಅಪಾರ್ಟ್ಮೆಂಟಿಗೆ ನೀರಿನ ಸಪ್ಲೈ ಕೊಟ್ಟಿದ್ದೇವೆ. ಅದರಿಂದ ನೀವು ತೆಗೆದುಕೊಳ್ಳಲು ಪೂರ್ಣ ಅಧಿಕಾರವಿದೆ ಎಂದು ಹೇಳುವ ಮೂಲಕ ಅಧಿಕಾರಿಗಳು ಕೂಡ ನುಣುಚಿಕೊಂಡಿದ್ದಾರೆ.

ಕೋರ್ಟ್ ಆದೇಶವನ್ನೇ ಉಲ್ಲಂಘಿಸಿದ ಬಿಲ್ಡರ್

ಈ ಬಗ್ಗೆ ಅಪಾರ್ಟ್ಮೆಂಟ್ ಕಟ್ಟಡದ ಎದುರಲ್ಲೇ ಇರುವ ಪಾಂಡೇಶ್ವರ ಠಾಣೆಗೂ ದಂಪತಿ ದೂರು ನೀಡಿದ್ದರು. ಆದರೆ, ಅದು ನಿಮ್ಮ ಸಿವಿಲ್ ಇಶ್ಯು. ನಾವೇನು ಮಾಡೋಕಾಗಲ್ಲ. ಕೋರ್ಟ್ ಏನಾದ್ರೂ ಆದೇಶ ಕೊಟ್ಟರೆ ಪಾಲನೆ ಮಾಡುತ್ತೇವೆ ಎಂದು ಹೇಳಿ ತಪ್ಪಿಸಿಕೊಂಡಿದ್ದಾರೆ. ಈ ಮಧ್ಯೆ, 2019ರಲ್ಲಿ ರಾಧಾಕೃಷ್ಣ ಕಾಮತ್ ಪರವಾಗಿ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದ್ದು, ಪೈಪ್ ಲೈನ್ ಸರಿಪಡಿಸುವುದು ಸೇರಿದಂತೆ ಆರು ಅಂಶಗಳನ್ನು ಮುಂದಿಟ್ಟು ಬಿಲ್ಡರ್ ಕೆ.ಎಂ. ಅಬ್ದುಲ್ ಬಶೀರ್ ಗೆ ಆದೇಶ ಮಾಡಿತ್ತು. ಆದರೆ, ಕೋರ್ಟ್ ಆದೇಶವನ್ನು ಪಾಲಿಸದೆ ಬಿಲ್ಡರ್ ಉದ್ಧಟತನ ಮೆರೆದಿದ್ದು, ಈ ಬಗ್ಗೆ ರಾಧಾಕೃಷ್ಣ ಕಾಮತ್ ಮತ್ತೆ ಕೋರ್ಟ್ ಗಮನಕ್ಕೆ ತಂದಿದ್ದರು. ಕೋರ್ಟ್ ಕಳೆದ 2021ರ ಎಪ್ರಿಲ್ ತಿಂಗಳಲ್ಲಿ ಬಿಲ್ಡರ್ ಅಬ್ದುಲ್ ಬಶೀರ್ ಬಂಧನಕ್ಕೂ ವಾರಂಟ್ ಜಾರಿ ಮಾಡಿತ್ತು. ಕೊನೆಗೆ, ಕೋರ್ಟಿಗೆ ಹಾಜರಾಗಿದ್ದ ಅಬ್ದುಲ್ ಬಶೀರ್, ಜೂನ್ 9ರ ಒಳಗೆ ಎಲ್ಲವನ್ನೂ ಸರಿಪಡಿಸುವುದಾಗಿ ಕೋರ್ಟಿಗೆ ಲಿಖಿತ ಹೇಳಿಕೆ ಕೊಟ್ಟು ಹೊಸ ಗಡುವು ನೀಡಿದ್ದರು. ಆದರೆ, ಬಿಲ್ಡರ್ ನೀಡಿದ್ದ ಗಡುವು ಕೂಡ ಮುಗಿದಿದ್ದು, ದಂಪತಿ ಗೃಹ ಬಂಧನದ ಶಿಕ್ಷೆಯಲ್ಲೇ ಇದ್ದಾರೆ.

ಮತ್ತೆ ಬಂಧನ ಭೀತಿಯಲ್ಲಿ ಕಟ್ಟಡದ ಬಿಲ್ಡರ್

ಈ ನಡುವೆ, ನೀರು ಕಡಿತಗೊಳಿಸಿದ್ದರ ವಿಚಾರದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಅಪಾರ್ಟ್ಮೆಂಟ್ ಪರಿಶೀಲನೆಗೆ ಬಂದಿದ್ದ ವೇಳೆ ಕಟ್ಟಡದ ಅವ್ಯವಸ್ಥೆ ಮತ್ತು ಪಾರ್ಕಿಂಗ್ ಏರಿಯಾದಲ್ಲಿ ನಿಯಮ ಉಲ್ಲಂಘಿಸಿ ಕಮರ್ಶಿಯಲ್ ಕಾಂಪ್ಲೆಕ್ಸ್ ನಿರ್ಮಿಸಿದ್ದನ್ನು ಗಮನಿಸಿದ್ದಾರೆ. ಬಳಿಕ ಅದರ ಬಗ್ಗೆಯೂ ಮಹಾನಗರ ಪಾಲಿಕೆಯಿಂದ ದೂರು ದಾಖಲಿಸಿದ್ದಾರೆ. ಅಲ್ಲದೆ, ಪಾಲಿಕೆಯ ಕಮಿಷನರ್ ಮೂರು ತಿಂಗಳ ಹಿಂದೆ ಅಕ್ರಮವಾಗಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಿಸಿದ್ದನ್ನು ತೆರವು ಮಾಡುವಂತೆ ಆದೇಶವನ್ನೂ ಮಾಡಿದ್ದರು. ಆದರೆ ಕಮಿಷನರ್ ಆದೇಶವನ್ನು ಬಿಲ್ಡರ್ ಅಬ್ದುಲ್ ಬಶೀರ್ ಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದು, ಅದು ವಿಚಾರಣೆ ಹಂತದಲ್ಲಿದೆ. ಅದರಲ್ಲಿಯೂ ರಾಧಾಕೃಷ್ಣ ಕಾಮತ್ ಪಾಲಿಕೆ ಕಮಿಷನರ್ ಪರವಾಗಿ ಅಪೀಲ್ ಮಾಡಿದ್ದು, ಬಿಲ್ಡರ್ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.   

Video:

Read: ಮೂರು ವರ್ಷಗಳಿಂದ ಕರೆಂಟ್ ಇಲ್ಲದೆ ಕತ್ತಲವಾಸ ; ಬದುಕುವ ಹಕ್ಕನ್ನೇ ಕಸಿದುಬಿಟ್ಟ ಅಪಾರ್ಟ್ಮೆಂಟ್ ಅಸೋಸಿಯೇಷನ್ !! ವೃದ್ಧ ದಂಪತಿಯ ಕೂಗು ಕೇಳಿಸದೇ ಪೊಲೀಸರೇ ?

Elderly Couple Ramakrishna Kamath and Shamala Kamath lives without water in falt (Apartment) at Pandeshwar in Mangalore for the past three years with a Physically Ill Daughter. The couple is suffering Mental Torture from the Builder as well as falt association. The couple book 100 litres of Bisleri water every day to make their living.