ಗುಡ್ಡ ಕುಸಿದು ಅಪಾಯಕ್ಕೆ ಸಿಲುಕಿದ್ದ ಕಾರ್ಮಿಕ ; ಸತತ ಕಾರ್ಯಾಚರಣೆ ಬಳಿಕ ಸಾವಿನ ದವಡೆಯಿಂದ ಪಾರು 

20-06-21 10:43 pm       Mangaluru Correspondent   ಕರಾವಳಿ

ತಡೆಗೋಡೆ ಕಾಮಗಾರಿ ನಡೆಸುತ್ತಿದ್ದಾಗ ಗುಡ್ಡ ಕುಸಿದು ಕಾರ್ಮಿಕನೊಬ್ಬ ಮಣ್ಣಿನಡಿಗೆ ಬಿದ್ದರೂ ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಅಪಾಯದಿಂದ ಪಾರಾಗಿ ಬಂದ ಘಟನೆ ಕುಪ್ಪೆಪದವು ಬಳಿಯ ಮಾರ್ಗದಂಗಡಿ ಬಳಿ ನಡೆದಿದೆ. 

ಮಂಗಳೂರು, ಜೂನ್ 20: ತಡೆಗೋಡೆ ಕಾಮಗಾರಿ ನಡೆಸುತ್ತಿದ್ದಾಗ ಗುಡ್ಡ ಕುಸಿದು ಕಾರ್ಮಿಕನೊಬ್ಬ ಮಣ್ಣಿನಡಿಗೆ ಬಿದ್ದರೂ ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಅಪಾಯದಿಂದ ಪಾರಾಗಿ ಬಂದ ಘಟನೆ ಕುಪ್ಪೆಪದವು ಬಳಿಯ ಮಾರ್ಗದಂಗಡಿ ಬಳಿ ನಡೆದಿದೆ. 

ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯನ್ನು ರಾಜೇಶ್ ಪೂಜಾರಿ (28) ಎಂದು ಗುರುತಿಸಲಾಗಿದೆ. ಮಾರ್ಗದಂಗಡಿ ಬಳಿಯ ನೊನಾಲು- ಕುಕ್ಕಟ್ಟೆ ರಸ್ತೆಯಲ್ಲಿ ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾಗ, ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮಣ್ಣು ಕುಸಿದು ಬಿದ್ದಿದೆ. ಏಕಾಏಕಿ ಮೇಲಿಂದ ಮಣ್ಣು ಕುಸಿದು ಕಾರ್ಮಿಕರ ಮೇಲೆ ಬಿದ್ದಿತ್ತು. 

ಈ ವೇಳೆ ತಡೆಗೋಡೆ ಮತ್ತು ಗುಡ್ಡದ ನಡುವೆ ಆಳ ಹೊಂಡದಲ್ಲಿ ರಾಜೇಶ್ ಸಿಲುಕಿದ್ದು ತಲೆಯ ಭಾಗ ಮಾತ್ರ ಹೊರಗೆ ಉಳಿದುಕೊಂಡಿತ್ತು. ಘಟನೆಯ ಬಗ್ಗೆ ತಿಳಿದು ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿದ್ದಾರೆ. ಬಳಿಕ ಜೆಸಿಬಿ ತಂದು ನಿಧಾನಕ್ಕೆ ಮಣ್ಣು ತೆರವು ಮಾಡುವ ಕಾರ್ಯ ನಡೆಸಿದ್ದು ಸತತ ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ರಾಜೇಶ್ ನನ್ನು ಮೇಲಕ್ಕೆತ್ತಲಾಗಿದೆ. ಬಳಿಕ ಕುಪ್ಪೆಪದವಿನ ಖಾಸಗಿ ಆಸ್ಪತೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

ರಾಜೇಶ್ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಿವಾಸಿಯಾಗಿದ್ದು ಕೆಲಸಕ್ಕಾಗಿ ಕುಕ್ಕಟ್ಟೆಗೆ ಬಂದಿದ್ದರು. ಮಳೆ ಇದ್ದುದರಿಂದ ಇಕ್ಕಟ್ಟಾದ ಸ್ಥಳದಲ್ಲಿ ರಕ್ಷಣಾ ಕೆಲಸ ಕಷ್ಟವಾಗಿತ್ತು. ಸ್ಥಳೀಯರ ಸಕಾಲಿಕ ಪ್ರಯತ್ನದಿಂದ ಕಾರ್ಮಿಕ ಬಚಾವ್ ಆಗಿದ್ದಾನೆ.

A labourer was buried after a landslide during the demolition of a compound in Kuppepadav, rescued.