ಇಲ್ಲಿನ ಮಕ್ಕಳಿಗೆ ಆನ್ಲೈನ್ ಕ್ಲಾಸೇ ಶಿಕ್ಷೆ ! ನೆಟ್ವರ್ಕ್ ಇಲ್ಲದೆ ಹತ್ತೂರು ಅಲೆಯಬೇಕು! ಐದು ಕಿಮೀ ದೂರದ ಬೆಟ್ಟ ಏರಲೇಬೇಕು !

24-06-21 02:36 pm       Udupi Correspondent   ಕರಾವಳಿ

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮದ ನಕ್ಸಲ್ ಪೀಡಿತ ಪ್ರದೇಶಗಳಾದ ಹಂಜ, ಕಾರೀಮನೆ, ಎಡ್ಮಲೆ ಪರಿಸರದ ಮಕ್ಕಳು ಆನ್ಲೈನ್ ಕ್ಲಾಸ್ ಪಡೆಯಲು ನೆಟ್ವರ್ಕ್ ಸಿಗುವುದಕ್ಕಾಗಿ ಹತ್ತೂರು ಅಲೆಯಬೇಕು.

ಉಡುಪಿ, ಜೂನ್ 24: ಕೊರೊನಾ ಲಾಕ್ಡೌನ್ ಮುಗಿಯುತ್ತಿದ್ದಂತೆ ಶಾಲೆ, ಕಾಲೇಜಿನ ಆನ್ಲೈನ್ ಕ್ಲಾಸ್ ತೆರೆದುಕೊಂಡಿದೆ. ಎಲ್ಲ ಕಡೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರು ಕಳಿಸಿಕೊಡುವ ಆನ್ಲೈನ್ ಪಾಠಗಳನ್ನು ಅವಲಂಬಿತ ಆಗುತ್ತಿದ್ದಾರೆ.‌ ಆದರೆ, ಆನ್ಲೈನ್ ಕ್ಲಾಸ್ ಪಡೆಯಲು ನೆಟ್ವರ್ಕ್ ಇಲ್ಲದ ಹಳ್ಳಿ ಕಡೆಯ ನಿವಾಸಿಗಳು ಮಾತ್ರ ಹೈರಾಣಾಗಿದ್ದಾರೆ. 

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮದ ನಕ್ಸಲ್ ಪೀಡಿತ ಪ್ರದೇಶಗಳಾದ ಹಂಜ, ಕಾರೀಮನೆ, ಎಡ್ಮಲೆ ಪರಿಸರದ ಮಕ್ಕಳು ನೆಟ್ವರ್ಕ್ ಸಿಗುವುದಕ್ಕಾಗಿ ಹತ್ತೂರು ಅಲೆಯಬೇಕು. ಈ ಭಾಗದ ಹಲವು ಕಡೆ ಯಾವುದೇ ಮೊಬೈಲ್ ನೆಟ್ವರ್ಕ್ ಸೌಲಭ್ಯ ಇಲ್ಲ. ಇಲ್ಲಿ ಸುಮಾರು 54 ಮನೆಗಳಿದ್ದು, 450 ರಿಂದ 500 ಜನರು ವಾಸವಿದ್ದಾರೆ. 

ಒಂದನೇ ತರಗತಿಯಿಂದ  ಐಟಿಐ, ಪದವಿ, ಸ್ನಾತಕೋತ್ತರ ಸೇರಿ 32 ವಿದ್ಯಾರ್ಥಿಗಳು ವಿವಿಧ ಶಾಲೆ, ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮನೆ ಪರಿಸರದಲ್ಲಿ ನೆಟ್ವರ್ಕ್ ಸಿಗದ ಕಾರಣ, ವಿದ್ಯಾರ್ಥಿಗಳು 5 ಕಿಲೋಮೀಟರ್ ದೂರಕ್ಕೆ ನಡೆಯಬೇಕು. ಅಲ್ಲಿನ ಕಾಡಿನ ಮಧ್ಯದ ಎತ್ತರದ ಬೆಟ್ಟವೇರಿ ನೆಟ್ವರ್ಕ್ ಸಿಗುತ್ತಾ ಎಂದು ಪರಿಶೀಲಿಸಿ, ಆನ್ಲೈನ್ ಕ್ಲಾಸ್‌ನಲ್ಲಿ ತೊಡಗಿಸಿಕೊಳ್ಳಬೇಕು. 

ಇದಕ್ಕಾಗಿ ಗುಡ್ಡದ ಮೇಲೆ ಮಕ್ಕಳ ಪೋಷಕರು ಸೇರಿ ಟೆಂಟ್ ನಿರ್ಮಿಸಿದ್ದು, ಕಾಡಿನ ಮಧ್ಯದಲ್ಲಿ ಇರುವ ಈ  ಟೆಂಟ್‌ನಲ್ಲಿ ಕುಳಿತು ವಿದ್ಯಾರ್ಥಿಗಳು ಪಾಠ ಆಲಿಸಬೇಕಾದ ಸ್ಥಿತಿ ಇದೆ. ಒಂದೆಡೆ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಚಿಕ್ಕ ಚಿಕ್ಕ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ರೀತಿ ಬೆಟ್ಟಕ್ಕೆ ಕರೆದೊಯ್ದು ಚಿಕ್ಕ ಟೆಂಟ್‌ನಲ್ಲಿ ಪಾಠ ಕೇಳಿಸಬೇಕಾದ ಸ್ಥಿತಿ ಪೋಷಕರದ್ದು. 

ಇದಲ್ಲದೆ, ಈ ಭಾಗದಲ್ಲಿ ಹಲವು ಮಂದಿ ಶಿಕ್ಷಕರು, ಉಪನ್ಯಾಸಕರು ಕೂಡ ಇದ್ದಾರೆ. ಮನೆಯಲ್ಲಿ ನೆಟ್ವರ್ಕ್ ಇಲ್ಲದ ಕಾರಣ ಆನ್ಲೈನ್ ಕ್ಲಾಸ್ ಮಾಡುವುದಕ್ಕೂ ಸಾಧ್ಯವಾಗದೆ ಕಷ್ಟ ಪಡುತ್ತಿದ್ದಾರೆ. ಪಶ್ಚಿಮ ಘಟ್ಟಗಳ ತಪ್ಪಲು ಭಾಗ ಆಗಿರುವುದರಿಂದ ಭಾರೀ ಮಳೆ ಬೀಳುತ್ತಿದ್ದು ಮನೆಯಲ್ಲಿ ಕರೆಂಟ್ ಕೂಡ ಇರುವುದಿಲ್ಲ. ಇದರಿಂದಾಗಿ ಮೊಬೈಲ್ ಚಾರ್ಜ್ ಮಾಡಿಸುವುದಕ್ಕೂ ಸಾಧ್ಯವಾಗದೆ, ಕಷ್ಟ ಪಡುವ ಸ್ಥಿತಿ ಇದೆ ಎಂದು ಎಂಕಾಂ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ಅಳಲು ತೋಡಿಕೊಂಡಿದ್ದಾನೆ. 

ಪ್ರತಿ ದಿನ ಶಾಲೆ, ಕಾಲೇಜಿಗೆ ಹೋಗುವ ರೀತಿ ಐದಾರು ಕಿಮೀ ಪ್ರದೇಶದ ಜನರು ಹಂಜ ಎಂಬಲ್ಲಿನ ಬೆಟ್ಟದ ಮೇಲೇರಿ ನೆಟ್ವರ್ಕ್ ಪಡೆಯಲು ಹರಸಾಹಸ ನಡೆಸುತ್ತಿದ್ದಾರೆ. 

ಈ ಬಗ್ಗೆ ಸಮಸ್ಯೆ ನೀಗಿಸುವ ಸಲುವಾಗಿ ನಮ್ಮೂರಿಗೂ ನೆಟ್ವರ್ಕ್ ಭಾಗ್ಯ ಕಲ್ಪಿಸಿ ಅಂತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಸ್ಥರಿಗೆ ಇಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಎಂದು ಜನ ಅಲವತ್ತುಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬೇಡದ್ದಕ್ಕೆ ಬೇಕಾಬಿಟ್ಟಿ ಖರ್ಚು ಮಾಡುವ ಶಾಸಕರುಗಳಿಗೆ ಈ ರೀತಿಯ ಹಿಂದುಳಿದ ಪ್ರದೇಶಕ್ಕೆ ಮೊಬೈಲ್ ಟವರ್ ಕೊಡಿಸುವುದು ಅಷ್ಟು ಕಷ್ಟದ ಕೆಲಸವೇ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲದಾಗಿದೆ.

Video: 

Udupi kids have to go about 5 kms for their online classes due to Network issues. More than 32 students in remote places are suffering from network issues and have to climb mountain to attend their online class.