ಉಡುಪಿಯಲ್ಲಿ ಜುಲೈ ಒಂದರಿಂದ ಖಾಸಗಿ ಬಸ್ ಆರಂಭಿಸಲು ನಿರ್ಣಯ

25-06-21 02:02 pm       Udupi Correspondent   ಕರಾವಳಿ

ಉಡುಪಿ ಜಿಲ್ಲಾಡಳಿತ ಖುದ್ದಾಗಿ ಖಾಸಗಿ ಬಸ್ ಮಾಲಕರನ್ನು ಕರೆದು ಮಾತುಕತೆ ನಡೆಸಿದ್ದು ಜುಲೈ 1 ರಿಂದ ಬಸ್ ಆರಂಭಿಸಲು ನಿರ್ಧರಿಸಲಾಗಿದೆ.‌ 

ಉಡುಪಿ, ಜೂನ್ 25 : ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ, ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಆರಂಭಿಸಿಲ್ಲ. ಅನ್ ಲಾಕ್ ಆದರೂ ಬಸ್ ಸಂಚಾರ ಆರಂಭಿಸದ ಹಿನ್ನೆಲೆಯಲ್ಲಿ ನಿತ್ಯದ ಕಾರ್ಯಗಳಿಗೆ ತೆರಳುವ ಜನ ಸಾಮಾನ್ಯರು ಕಷ್ಟ ಪಡುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಖುದ್ದಾಗಿ ಖಾಸಗಿ ಬಸ್ ಮಾಲಕರನ್ನು ಕರೆದು ಮಾತುಕತೆ ನಡೆಸಿದ್ದು ಜುಲೈ 1 ರಿಂದ ಬಸ್ ಆರಂಭಿಸಲು ನಿರ್ಧರಿಸಲಾಗಿದೆ.‌ 

ಉಡುಪಿ ಶಾಸಕ ಕೆ. ರಘುಪತಿ ಭಟ್ ಬಸ್ ಸಂಚಾರದ ವಿಚಾರದಲ್ಲಿ ಇಂದು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಖಾಸಗಿ ಬಸ್ ಮಾಲಕರ ಸಂಘದ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಿದರು.

 

ಸಭೆಯಲ್ಲಿ ಕೋವಿಡ್ ನಿಯಮಾವಳಿಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜುಲೈ 1 ರಿಂದ ಜಿಲ್ಲೆಯಲ್ಲಿ ಬಸ್ ಆರಂಭಿಸಲು ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ ಜಗದೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಜೆ.ಪಿ ಗಂಗಾಧರ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ, ಉಡುಪಿ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಪದಾಧಿಕಾರಿಗಳಾದ ಸದಾನಂದ ಚಾತ್ರ, ಪ್ರಸಾದ್ ಬಲ್ಲಾಳ್, ಶಿವರಾಮ ಶೆಟ್ಟಿ, ಸಂದೀಪ್ ಮುಂತಾದವರು ಉಪಸ್ಥಿತರಿದ್ದರು.

Private bus service to commence from July 1st in Udupi. The decision was taken after the Bus Association meeting with DC.