ಕೋಟೆಕಾರು : ವೀಕೆಂಡ್ ಕರ್ಫ್ಯೂ ಕೇರ್ ಇಲ್ಲದೆ ಭರ್ಜರಿ ವ್ಯಾಪಾರ ! ಪಾರ್ಸೆಲ್ ನೆಪದಲ್ಲಿ ಹೆದ್ದಾರಿಯಲ್ಲೇ ಟಿಕ್ಕದ ಸವಿ !

28-06-21 12:55 pm       Mangalore Correspondent   ಕರಾವಳಿ

ಹೆದ್ದಾರಿಯ ಅಂಚಿನಲ್ಲಿರುವ ಟಿಕ್ಕಾ ಪಾಯಿಂಟ್ ಫಾಸ್ಟ್ ಫುಡ್ ಸೆಂಟರ್ ವೀಕೆಂಡಲ್ಲಿ ಯಾವತ್ತೂ ಭರ್ಜರಿ ವ್ಯಾಪಾರಕ್ಕೆ ಪ್ರಸಿದ್ಧಿ. ಈ ಬಾರಿ ಲಾಕ್ಡೌನ್ ಇದ್ದರೂ ಅದನ್ನು ಲೆಕ್ಕಿಸದೆ ವ್ಯಾಪಾರ ನಡೆಸಲಾಗಿದೆ.

ಉಳ್ಳಾಲ, ಜೂ.28: ರಾಷ್ಟ್ರೀಯ ಹೆದ್ದಾರಿ ಕೋಟೆಕಾರು ಬೀರಿಯಲ್ಲಿರುವ ಟಿಕ್ಕ ಪಾಯಿಂಟ್ ಎಂಬ ಫಾಸ್ಟ್ ಫುಡ್ ಸೆಂಟರಿಗೆ ಮಾತ್ರ ಇಂದು ವೀಕೆಂಡ್ ಲಾಕ್ಡೌನ್ ಇರಲಿಲ್ಲ. ಲಾಕ್ಡೌನಲ್ಲಿ ಹೊಟೇಲ್ ಒಳಗೆ ಕುಳಿತು ತಿನ್ನಲು ಅವಕಾಶ ಇರದಿದ್ದರೂ, ಭಾನುವಾರ ಸಂಜೆಯಿಂದಲೇ ಟಿಕ್ಕಾ ಪಾಯಿಂಟ್ ನಲ್ಲಿ ಭರ್ಜರಿ ವ್ಯಾಪಾರ ನಡೆದಿದೆ.‌

ಹೆದ್ದಾರಿಯ ಅಂಚಿನಲ್ಲಿರುವ ಟಿಕ್ಕಾ ಪಾಯಿಂಟ್ ಫಾಸ್ಟ್ ಫುಡ್ ಸೆಂಟರ್ ವೀಕೆಂಡಲ್ಲಿ ಯಾವತ್ತೂ ಭರ್ಜರಿ ವ್ಯಾಪಾರಕ್ಕೆ ಪ್ರಸಿದ್ಧಿ. ಈ ಬಾರಿ ಲಾಕ್ಡೌನ್ ಇದ್ದರೂ ಅದನ್ನು ಲೆಕ್ಕಿಸದೆ ವ್ಯಾಪಾರ ನಡೆಸಲಾಗಿದೆ. ಕಳೆದ ಎರಡು ತಿಂಗಳ ಲಾಕ್ಡೌನಲ್ಲಿಯೂ ಪಾರ್ಸೆಲ್ ನೆಪದಲ್ಲಿ ಈ ಫಾಸ್ಟ್ ಫುಡ್ ಮಳಿಗೆ ಇದೇ ರೀತಿ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸಿದೆ ಎಂದು ಸ್ಥಳೀಯರು ಹೇಳುತ್ತಾರೆ. 

ಈ ವಾರದ ವೀಕೆಂಡ್ ಲಾಕ್ಡೌನಲ್ಲಿ ಪೊಲೀಸರು ಕೆಲಸಕ್ಕೆ ತೆರಳುವ ಬಡಪಾಯಿ ದ್ವಿಚಕ್ರ ವಾಹನ ಸವಾರರ ವಾಹನಗಳನ್ನ ಜಪ್ತಿಗೊಳಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಸಣ್ಣ ಪುಟ್ಟ ಅಂಗಡಿ ಮುಂಗಟ್ಟುಗಳನ್ನೂ ಬಂದ್ ಮಾಡಿಸಿ ವೀಕೆಂಡ್ ಲಾಕ್ಡೌನನ್ನ ಕಟ್ಟುನಿಟ್ಟಾಗಿ ನಿಭಾಯಿಸಿದ್ದಾರೆ. ಆದರೆ ಉಳ್ಳಾಲ ಪೊಲೀಸರು ಮಾತ್ರ ಹೆದ್ದಾರಿ ಬದಿಯಲ್ಲೇ ಇರುವ ಲಾಕ್ಡೌನ್ ನಿಯಮವನ್ನ ಲೆಕ್ಕಿಸದೆ ಕಾರ್ಯಾಚರಿಸುತ್ತಿರುವ ಟಿಕ್ಕಾ ಪಾಯಿಂಟನ್ನು ಮಾತ್ರ ಬಂದ್ ಮಾಡಿಸಿಲ್ಲ. 

ಟಿಕ್ಕದಲ್ಲಿ ಪಾಲು ಪಡೆದರೇ ಅಧಿಕಾರಿಗಳು ? 

ಟಿಕ್ಕಾ ಪಾಯಿಂಟ್ ಲಾಕ್ಡೌನ್ ಸಮಯದಲ್ಲಿ ನಿಯಮ ಮೀರಿ ನಡು ರಾತ್ರಿಯವರೆಗೂ ವಹಿವಾಟು ನಡೆಸಿದೆ. ಪಾರ್ಸೆಲ್ ಮಾತ್ರ ಎಂಬ ಅವಕಾಶವನ್ನು ಬಳಸ್ಕೊಂಡು ವೀಕೆಂಡ್ ಲಾಕ್ಡೌನಲ್ಲೂ ಹೊಟೇಲ್ ತೆರೆದಿಟ್ಟು ಮೇಲಿನ ಅಂತಸ್ತಿನಲ್ಲಿ ಗ್ರಾಹಕರಿಗೆ ಟೇಬಲ್ ಹಾಸಿ ಆಹಾರ ಸಪ್ಲೈ ಮಾಡುತ್ತಿದೆ. ಸ್ಥಳೀಯ ಕೋಟೆಕಾರು ಪಟ್ಟಣ ಪಂಚಾಯತ್ ಅಧಿಕಾರಿಗಳು ಮತ್ತು ಉಳ್ಳಾಲದ ಪೊಲೀಸರು ಈ ಬಗ್ಗೆ ತಿಳಿದಿದ್ದರೂ ಮೌನವಾಗಿ ಸಮ್ಮತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಒಳಭಾಗದಲ್ಲಿಯೂ ಯಾವುದೇ ಮಾಸ್ಕ್ ಆಗಲೀ, ಅಂತರವನ್ನಾಗಲೀ ಇಟ್ಟುಕೊಳ್ಳದೆ ವ್ಯಾಪಾರ ನಡೆಸಲಾಗುತ್ತಿದೆ. 

ಕ್ರಮ ಕೈಗೊಳ್ಳುತ್ತೇನೆಂದ ನಗರ ಡಿಸಿಪಿ 

ವೀಕೆಂಡ್ ಲಾಕ್ಡೌನಲ್ಲೂ ನಿಯಮ ಮೀರಿ ವ್ಯಾಪಾರ ನಡೆಸುತ್ತಿರುವ ಟಿಕ್ಕ ಪಾಯಿಂಟ್ ಬಗ್ಗೆ ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್ ಅವರಿಗೆ ಮಾಹಿತಿ ನೀಡಿದ್ದು ಅಕ್ರಮವಾಗಿ ನಡೆಸಲಾಗುತ್ತಿದ್ದರೆ ಕೇಸು ದಾಖಲಿಸುವುದಾಗಿ ಹೇಳಿದ್ದಾರೆ.

Ullal Kotekar Tikka Point Restaurant violates covid guidelines hotel open for dinner. The covid guidelines state that hotels are only opened for delivery.