ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡಲ್ಲೂ ಸಡಿಲಿಕೆ ; ಅಗತ್ಯ ಸಾಮಗ್ರಿ ನೆಪದಲ್ಲಿ ಫ್ರೀ ಬಿಟ್ಟ ಜಿಲ್ಲಾಡಳಿತ ! 

01-07-21 10:58 pm       Richard, Mangaluru Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಕಡಿಮೆಯಾದ ಹಿನ್ನೆಲೆಯಲ್ಲಿ ದಿಢೀರ್ ಆಗಿ ಲಾಕ್ಡೌನಲ್ಲೂ ಸಡಿಲಿಕೆ ಮಾಡಲಾಗಿದೆ.

ಮಂಗಳೂರು, ಜುಲೈ 1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಕಡಿಮೆಯಾದ ಹಿನ್ನೆಲೆಯಲ್ಲಿ ದಿಢೀರ್ ಆಗಿ ಲಾಕ್ಡೌನಲ್ಲೂ ಸಡಿಲಿಕೆ ಮಾಡಲಾಗಿದೆ. ವಿಶೇಷ ಅಂದ್ರೆ, ರಾಜ್ಯ ಸರಕಾರ ವಿಧಿಸಿದ್ದ ವೀಕೆಂಡ್ ಅವಧಿಯಲ್ಲೂ ಅಗತ್ಯ ಸಾಮಗ್ರಿ ಪಡೆಯುವುದಕ್ಕೆ ಜಿಲ್ಲಾಡಳಿತ ಅವಕಾಶ ಕೊಟ್ಟಿದೆ. 

ಇದರಂತೆ, ಜುಲೈ 2ರಂದು ಬೆಳಗ್ಗಿನಿಂದ ಸಂಜೆ 5 ರ ವರೆಗೆ ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಇದರ ಜೊತೆಗೆ, ಬಸ್ ಸಂಚಾರಕ್ಕೂ ಸಂಜೆಯ ವರೆಗೆ ಅನುಮತಿ ನೀಡಲಾಗಿದೆ. 

ಇದೇ ವೇಳೆ, ವೀಕೆಂಡ್ ಕರ್ಫ್ಯೂ ವಿಧಿಸಿರುವ ಶನಿವಾರ ಮತ್ತು ಭಾನುವಾರವೂ ಅಗತ್ಯ ಸಾಮಗ್ರಿ ಪಡೆಯುವುದಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಆದರೆ, ಅಗತ್ಯ ಸಾಮಗ್ರಿ ಶಾಪ್ ಹೊರತುಪಡಿಸಿ ಇತರೇ ಎಲ್ಲ ರೀತಿಯ ವಹಿವಾಟುಗಳ ನಿಷೇಧ ಎಂದಿನಂತೆ ಇರಲಿದೆ ಎಂದಿದ್ದಾರೆ. ಆಮೂಲಕ ಇತರೇ ದಿನಗಳಂತೆ ಮಧ್ಯಾಹ್ನ ವರೆಗೆ ಖಾಸಗಿ ವಾಹನಗಳ ಸಂಚಾರಕ್ಕೂ ಪರೋಕ್ಷ ಅನುಮತಿ ನೀಡಿದ್ದಾರೆ. 

ಎರಡು ದಿನಕ್ಕೆ ಮೀನು, ಮಾಂಸ, ತರಕಾರಿ, ಗ್ರೋಸರಿ ಅಂಗಡಿಗಳಿಗೆ ಅವಕಾಶ ನೀಡುವ ಮೂಲಕ ಪರೋಕ್ಷವಾಗಿ ವೀಕೆಂಡ್ ಲಾಕ್ಡೌನ್ ಉದ್ದೇಶವನ್ನೇ ಗಾಳಿಗೆ ತೂರಿದ್ದಾರೆ. ಈವರೆಗೂ ಇತರೇ ದಿನಗಳಂದು ಅಗತ್ಯ ಸಾಮಗ್ರಿ ಕೊಳ್ಳಲು ಮಾತ್ರ ಅವಕಾಶ ನೀಡಿದ್ದರೂ ಎಲ್ಲ ರೀತಿಯ ವಾಹನಗಳು ಓಡಾಡುತ್ತಿದ್ದವು. ಸಡಿಲಿಕೆ ನೆಪದಲ್ಲಿ ಜನರ ಓಡಾಟ ಎಂದಿಗಿಂತ ಹೆಚ್ಚೇ ಇದ್ದುದನ್ನು ಎಲ್ಲರೂ ಗಮನಿಸಿದ್ದರು.  

ಹಾಗಿದ್ದರೂ, ವೀಕೆಂಡ್ ಕರ್ಫ್ಯೂ ವಿಧಿಸಿ ವಾರದ ಕೊನೆಯ ರಜಾ ದಿನಗಳಂದು ಜನರ ಓಡಾಟಕ್ಕೆ ಬ್ರೇಕ್ ಹಾಕುವ ರಾಜ್ಯ ಸರಕಾರದ ಉದ್ದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಎಳ್ಳುನೀರು ಬಿಟ್ಟಂತಾಗಿದೆ, ಜಿಲ್ಲಾಡಳಿತದ ಈ ನೀತಿ. ಅಗತ್ಯ ಸಾಮಗ್ರಿ ಪಡೆಯುವ ನಿಟ್ಟಿನಲ್ಲಿ ಜನರು ಸಾಮಾನ್ಯ ದಿನಗಳ ರೀತಿಯಲ್ಲೇ ಓಡಾಡುತ್ತಾರೆ. ಇದಕ್ಕೆ ಬ್ರೇಕ್ ಹಾಕಲು ಪೊಲೀಸರಿಗೂ ಸಾಧ್ಯವಾಗಲ್ಲ. 

ಜುಲೈ ಐದಕ್ಕೆ ಎರಡು ದಿನ ಇರುವಾಗ ಪಾಸಿಟಿವ್ ರೇಟ್ ಕಡಿಮೆಯಾಯ್ತು ಎನ್ನುವ ನೆಪದಲ್ಲಿ ಈ ರೀತಿಯ ಎಡವಟ್ಟು ಮಾಡಿ ಜನರನ್ನು ಗೊಂದಲಕ್ಕೀಡು ಮಾಡುವ ಅಗತ್ಯ ಇರಲಿಲ್ಲ. ಒಂದು ದಿನಕ್ಕೆ ದಿನಪೂರ್ತಿ ಅವಕಾಶ ಕೊಟ್ಟು ಮತ್ತೆರಡು ದಿನ ಬ್ರೇಕ್ ಹಾಕಿ, ಅದರಲ್ಲಿ ಒಂದಷ್ಟು ರಿಯಾಯಿತಿ ನೀಡಿ ಜನರಲ್ಲಿ ಗೊಂದಲಕ್ಕೆ ತಳ್ಳುವ ಅಗತ್ಯವೂ ಇರಲಿಲ್ಲ. 

ಹೇಗೂ ಶುಕ್ರವಾರ ಅಥವಾ ಶನಿವಾರ ಜುಲೈ 5ರ ನಂತರದ ಲಾಕ್ಡೌನ್ ಸಡಿಲಿಕೆ ಬಗ್ಗೆ ರಾಜ್ಯ ಸರಕಾರದಿಂದಲೇ ಆದೇಶ ಹೊರಬೀಳುತ್ತದೆ. ಅದರಲ್ಲಿ ಬಹುತೇಕ ವೀಕೆಂಡ್ ಲಾಕ್ಡೌನ್ ಅನ್ನು ಒಂದು ದಿನಕ್ಕೆ ಸೀಮಿತಗೊಳಿಸುವ ಜೊತೆಗೆ ಇನ್ನಷ್ಟು ರಿಯಾಯ್ತಿ ಘೋಷಣೆ ಮಾಡುವ ಸಾಧ್ಯತೆಯಿದೆ. ಅದರ ನಡುವೆ, ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತಗೊಳಿಸಿ ಎಡವಟ್ಟಿನ ಆದೇಶ ಹೊರಡಿಸಿ ಜಿಲ್ಲಾಡಳಿತ ನಗೆಪಾಟಲಿಗೀಡಾಗಿದೆ.

Mangalore More relaxation in lockdown weekend curfew allowed from 6 am to 2 pm. During the weekend curfew, people will be allowed to purchase essential commodities like milk, fruits, vegetables. Even the shops selling meat and fish will be open. Under the new guidelines hotels, restaurants, canteens, bars and clubs can remain open from 6 am to 5 pm. Up to 50% of customers can sit and consume food in them. Consumption of liquor is not permitted and pubs will continue to remain closed.