ಮಾಡದ ತಪ್ಪಿಗೆ ಎರಡು ವರ್ಷ ಸೌದಿ ಜೈಲಿನಲ್ಲಿದ್ದ ಹರೀಶ ಬಂಗೇರ ಕೊನೆಗೂ ತಾಯ್ನಾಡಿಗೆ

18-08-21 11:23 am       Udupi Correspondent   ಕರಾವಳಿ

ಸೌದಿ ಅರೇಬಿಯಾದಲ್ಲಿ ಪೊಲೀಸರ ಬಂಧನಕ್ಕೀಡಾಗಿ ಜೈಲು ಪಾಲಾಗಿದ್ದ ಕುಂದಾಪುರದ ಬೀಜಾಡಿಯ ಹರೀಶ್‌ ಬಂಗೇರ ಕೊನೆಗೂ ಬಿಡುಗಡೆಯಾಗಿದ್ದು, ತಾಯ್ನಾಡಿಗೆ ಮರಳಿದ್ದಾರೆ. 

ಉಡುಪಿ, ಆಗಸ್ಟ್ 18: ನಕಲಿ ಫೇಸ್ ಬುಕ್ ಪೋಸ್ಟ್ ಕಾರಣದಿಂದ ಸೌದಿ ಅರೇಬಿಯಾದಲ್ಲಿ ಪೊಲೀಸರ ಬಂಧನಕ್ಕೀಡಾಗಿ ಜೈಲು ಪಾಲಾಗಿದ್ದ ಕುಂದಾಪುರದ ಬೀಜಾಡಿಯ ಹರೀಶ್‌ ಬಂಗೇರ ಕೊನೆಗೂ ಬಿಡುಗಡೆಯಾಗಿದ್ದು, ತಾಯ್ನಾಡಿಗೆ ಮರಳಿದ್ದಾರೆ. 

ಸೌದಿಯಿಂದ ನೇರವಾಗಿ ವಿಮಾನದಲ್ಲಿ ಬಂದ ಹರೀಶ್,  ಇಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಪತ್ನಿ , ಪುತ್ರಿ ಹಾಗೂ ಅವರ ಕುಟುಂಬಸ್ಥರು ಅವರನ್ನು ಬರಮಾಡಿಕೊಂಡಿದ್ದಾರೆ. 

ಹರೀಶ್ ಬಂಗೇರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದ ಕಿಡಿಗೇಡಿಗಳು ಸೌದಿಯ ದೊರೆ ಮತ್ತು ಮೆಕ್ಕಾದ ಬಗ್ಗೆ ಅವಹೇಳನಕಾರಿ ಪೋಸ್ವ್‌ ಹಾಕಿದ್ದರು. ಈ ಆರೋಪದ ಮೇಲೆ ಹರೀಶ್‌ ಬಂಗೇರ ಅವರನ್ನು 2019ರಲ್ಲಿ ಸೌದಿ ಪೊಲೀಸರು ಬಂಧಿಸಿದ್ದರು.

ಈ ಬಗ್ಗೆ ಹರೀಶ್‌ ಅವರ ಪತ್ನಿ ಸುಮನಾ ಉಡುಪಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಬಗ್ಗೆ ವಿಚಾರಣೆ ನಡೆಸಿದ ಉಡುಪಿ ಪೊಲೀಸರು ಮೂಡುಬಿದಿರೆಯ ಅಬ್ದುಲ್‌ ಹುಯೇಸ್‌ ಮತ್ತು ಅಬ್ದುಲ್‌ ತುವೇಸ್‌ ಎಂಬವರನ್ನು ಬಂಧಿಸಿದ್ದರು.
ಆರೋಪಿಗಳು ಹರೀಶ್‌ ಬಂಗೇರ ಹೆಸರಿನಲ್ಲಿ ನಕಲಿ ಖಾತೆ ತೆರೆದು, ಸೌದಿ ದೊರೆ ವಿರುದ್ಧ ಪೋಸ್ವ್‌ ಹಾಕಿ, ಅದರ ಸ್ಕ್ರೀನ್‌ ಶಾಟ್‌ ತೆಗೆದು ಅದನ್ನು ವೈರಲ್‌ ಮಾಡಿದ್ದರು. ಬಳಿಕ ನಕಲಿ ಫೇಸ್‌ ಬುಕ್ ಖಾತೆಯನ್ನೇ ಡಿಲೀಟ್‌ ಮಾಡಿ, ಅದರ ಆರೋಪವನ್ನು ಹರೀಶ್ ಬಂಗೇರ ತಲೆಗೆ ಕಟ್ಟಿದ್ದರು. ಸಹಜವಾಗೇ ವೈರಲ್ ಆದ ಪೋಸ್ಟ್ ಆಧರಿಸಿ ಪೊಲೀಸರು ಹರೀಶ್ ಬಂಗೇರ ಅವರನ್ನು ಬಂಧಿಸಿದ್ದರು. ‌

ಕಿಡಿಗೇಡಿಗಳ ಉದ್ದೇಶಪೂರ್ವಕವಾಗಿ ಈ ರೀತಿ ನಕಲಿ ಪೋಸ್ಟ್ ಮಾಡಿ ಹರೀಶ್ ಬಂಗೇರ ಅವರನ್ನು ಸಿಲುಕಿಸಿದ್ದರು. ಅದಕ್ಕೂ ಮೊದಲು ಹರೀಶ್ ಬಂಗೇರ ಮಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ಬಗ್ಗೆ ವಿಡಿಯೋ ಹಂಚಿಕೊಂಡಿದ್ದರು. ಕೆಲವು ದುಷ್ಕರ್ಮಿಗಳ ತಂಡ ಇದರ ಬಗ್ಗೆ ಹರೀಶ್ ಬಂಗೇರ ವಿರುದ್ಧ ಜೀವ ಬೆದರಿಕೆ ಹಾಕಿದ್ದರು.‌ ಆನಂತರ ಹರೀಶ್ ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು. ಅದೇ ವಿಚಾರದಲ್ಲಿ ಸಿಕ್ಕಿಸಿಹಾಕಬೇಕೆಂಬ ದೃಷ್ಟಿಯಿಂದ ಕಿಡಿಗೇಡಿಗಳು ನಕಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದರು. ಇದರಿಂದಾಗಿ ತಾನು ಮಾಡದ ತಪ್ಪಿಗೆ ಸೌದಿ  ಅರೇಬಿಯಾದಲ್ಲಿ ಎರಡು ವರ್ಷ ಕಾಲ ಜೈಲಿನಲ್ಲಿ ಕಳೆಯಬೇಕಾಗಿ ಬಂದಿತ್ತು. ಪೊಲೀಸರ ಸಕಾಲಿಕ ತನಿಖೆಯಿಂದ ಹೊರಗೆ ಬರುವಂತಾಗಿದೆ.


Harish Bangera from Gopady village, Koteshwar near Kundapur, who had been put behind the bars in Saudi Arabia, has succeeded in getting freed from Saudi Arabian prison. He reached Bengaluru on Wednesday August 19.