ಟಿಕ್ ಟಾಕ್ ವಿಡಿಯೋ ಬಗ್ಗೆ ಆಕ್ರೋಶ ; ಯುವಕ - ಯುವತಿಯರಿಂದ ದೇವಸ್ಥಾನದಲ್ಲೇ ಕ್ಷಮೆ ಯಾಚನೆ

29-08-21 01:51 pm       Mangaluru Correspondent   ಕರಾವಳಿ

ದೇವಸ್ಥಾನದ ಅಂಗಣದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿದ್ದ ಬಗ್ಗೆ ಭಕ್ತರು ಮತ್ತು ಸ್ಥಳೀಯರ ಆಕ್ರೋಶ ಕೇಳಿಬರುತ್ತಿದ್ದಂತೆ ಇಂದು ಬೆಳಗ್ಗೆ ಯುವಕ ಮತ್ತು ಯುವತಿಯರು ದೇವಸ್ಥಾನಕ್ಕೆ ಬಂದು ಕ್ಷಮೆ ಕೇಳಿದ್ದಾರೆ.

ಮಂಗಳೂರು, ಆಗಸ್ಟ್ 29: ಪಾವಂಜೆ ಮಹಾಲಿಂಗೇಶ್ವರ ಗಣಪತಿ ದೇವಸ್ಥಾನದ ಅಂಗಣದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿದ್ದ ಬಗ್ಗೆ ಭಕ್ತರು ಮತ್ತು ಸ್ಥಳೀಯರ ಆಕ್ರೋಶ ಕೇಳಿಬರುತ್ತಿದ್ದಂತೆ ಇಂದು ಬೆಳಗ್ಗೆ ಯುವಕ ಮತ್ತು ಯುವತಿಯರು ದೇವಸ್ಥಾನಕ್ಕೆ ಬಂದು ಕ್ಷಮೆ ಕೇಳಿದ್ದಾರೆ.

ಸ್ಥಳೀಯ ನಿವಾಸಿ ಪ್ರತೀಕ್ ಶೆಟ್ಟಿ ಎಂಬಾತ ತನ್ನ ಗೆಳತಿಯರ ಜೊತೆ ಬಂದು ದೇವಸ್ಥಾನದ ಒಳಗಡೆ ಟಿಕ್ ಟಾಕ್ ವಿಡಿಯೋ ಚಿತ್ರೀಕರಣ ಮಾಡಿದ್ದ. ಒಂದೂವರೆ ತಿಂಗಳ ಹಿಂದೆ ಈ ವಿಡಿಯೋ ಮಾಡಿದ್ದಾಗಿ ಹೇಳಲಾಗುತ್ತಿದ್ದು ಎರಡು ದಿನಗಳ ಹಿಂದೆ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ, ದೇವಸ್ಥಾನದ ಒಳಗಡೆ ವಿಡಿಯೋ ಮಾಡಿದ ಘಟನೆ ಬಗ್ಗೆ ಸ್ಥಳೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಯುವಕ- ಯುವತಿಯರು ದೇವಸ್ಥಾನಕ್ಕೆ ಬಂದು ಬಹಿರಂಗ ಕ್ಷಮೆ ಕೇಳಿ, ದೇವರಿಗೆ ತಪ್ಪು ಕಾಣಿಕೆ ಹಾಕಬೇಕೆಂದು ಒತ್ತಾಯಿಸಿದ್ದರು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಆರೋಪಿತ ಯುವಕ ಮತ್ತು ಯುವತಿಯರು ಇಂದು ಬೆಳಗ್ಗೆ ದೇವಸ್ಥಾನಕ್ಕೆ ಬಂದಿದ್ದು, ದೇವಸ್ಥಾನ ಕಮಿಟಿ ಪದಾಧಿಕಾರಿಗಳು, ಅರ್ಚಕರ ಸಮ್ಮುಖದಲ್ಲಿ ಕ್ಷಮೆ ಯಾಚಿಸಿದ್ದಾರೆ. ಇದೇ ವೇಳೆ, ಇನ್ನು ಮುಂದೆ ದೇವಸ್ಥಾನಕ್ಕೆ ಬರುವಾಗ ಆದಷ್ಟು ಆರೋಗ್ಯಕರ ಡ್ರೆಸ್ ಧರಿಸುವಂತೆ ದೇವಸ್ಥಾನ ಪದಾಧಿಕಾರಿಗಳು ಸೂಚನೆ ನೀಡಿದ್ದಾರೆ. ಮಹಿಳೆಯರು ಸೀರೆ ಮತ್ತು ಯುವಕರು ಲುಂಗಿ ಹಾಗೂ ಅಂಗಿ ಧರಿಸಿಕೊಂಡು ದೇವಸ್ಥಾನಕ್ಕೆ ಬರಬೇಕು. ಬೇಕಾಬಿಟ್ಟಿ ಡ್ರೆಸ್ ಹಾಕಿಕೊಂಡು ಬರುವುದು ಹಿಂದು ಧರ್ಮಕ್ಕೆ ಒಳ್ಳೆಯದಲ್ಲ ಎಂದು ಭಕ್ತಾದಿಗಳಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ದೇವಸ್ಥಾನದಲ್ಲಿ ಕಟ್ಟುನಿಟ್ಟಿನ ನಿಮಯಗಳನ್ನು ಜಾರಿಗೆ ತರುವುದಾಗಿ ತಿಳಿಸಿದ್ದಾರೆ.

ಟಿಕ್ ಟಾಕ್ ವಿಡಿಯೋದ ಬಗ್ಗೆ ಶನಿವಾರ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದ್ದಂತೆ ಎಚ್ಚೆತ್ತ ಯುವಕ- ಯುವತಿಯರು ಸಂಜೆಯೇ ದೇವಸ್ಥಾನಕ್ಕೆ ಬಂದು ಕ್ಷಮೆ ಯಾಚಿಸಿ, ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ತಾನು ಯುವಸೇನೆ ಸೇರಿ ಹಿಂದು ಸಂಘಟನೆಗಳಲ್ಲಿದ್ದು, ಇದೀಗ ಉದ್ದೇಶಪೂರ್ವಕವಾಗಿ ವಿಡಿಯೋ ವೈರಲ್ ಮಾಡಿದ್ದಾರೆ. ನಾನು ಈ ವಿಡಿಯೋವನ್ನು ಒಂದು ತಿಂಗಳ ಹಿಂದೆಯೇ ಡಿಲೀಟ್ ಮಾಡಿದ್ದೆ ಎಂದು ವಿಡಿಯೋದಲ್ಲಿ ಪ್ರತೀಕ್ ಶೆಟ್ಟಿ ಹೇಳಿಕೊಂಡಿದ್ದ. ಆದರೆ, ದೇವಸ್ಥಾನದಲ್ಲಿ ಯಾರೂ ಇಲ್ಲದಾಗ ಬಂದು ಕ್ಷಮೆ ಯಾಚಿಸಿದ್ದನ್ನು ದೇವಸ್ಥಾನ ಕಮಿಟಿಯವರು ಒಪ್ಪಿರಲಿಲ್ಲ. ಇಂದು ಬೆಳಗ್ಗೆ ಬಂದು ಎಲ್ಲರ ಮುಂದೆ ಕ್ಷಮೆ ಯಾಚಿಸಲು ಹೇಳಿದ್ದರು. ಇಲ್ಲದಿದ್ದರೆ ಪೊಲೀಸ್ ದೂರು ಕೊಡುವುದಾಗಿ ಎಚ್ಚರಿಸಿದ್ದರು. 

ಪಾವಂಜೆ ದೇವಸ್ಥಾನದ ಅಂಗಣದಲ್ಲಿ ಟಿಕ್ ಟಾಕ್ ವಿಡಿಯೋ !! ಹುಡುಗ- ಹುಡುಗಿಯರ ಹುಚ್ಚಾಟದ ವಿಡಿಯೋ ವೈರಲ್

Mangalore Tiktok video inside Pavanje temple haleangadi youths asks forgiveness. Their video had gone viral on social media breaking into a huge controversy.