ವಂಚನೆ ಆರೋಪ ; ಮಂಜೇಶ್ವರ ಶಾಸಕ ಕಮರುದ್ದೀನ್ ಮನೆ ಮೇಲೆ ದಾಳಿ

08-09-20 05:20 pm       Mangalore Reporter   ಕರಾವಳಿ

ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ಹಾಗೂ ಟಿಕೆ ಪೂಕೊಯಾ ತಂಗಲ್ ಎಂಬುವರ ಮನೆ ಮೇಲೆ ಸ್ಥಳೀಯ ಪೊಲೀಸರು ಇಂದು ದಿಢೀರ್ ದಾಳಿ ನಡೆಸಿದ್ದಾರೆ.

ಕಾಸರಗೋಡು, ಸೆಪ್ಟೆಂಬರ್ 8: ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ಹಾಗೂ ಟಿಕೆ ಪೂಕೊಯಾ ತಂಗಲ್ ಎಂಬುವರ ಮನೆ ಮೇಲೆ ಸ್ಥಳೀಯ ಪೊಲೀಸರು ಇಂದು ದಿಢೀರ್ ದಾಳಿ ನಡೆಸಿದ್ದಾರೆ.

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಶಾಸಕ ಕಮರುದ್ದೀನ್ ವಿರುದ್ಧ ಆರ್ಥಿಕ ಅವ್ಯವಹಾರದ ಆರೋಪ ಕೇಳಿ ಬಂದಿತ್ತು. ಚಿನ್ನದ ಮೇಲಿನ ಹೂಡಿಕೆಗೆ ಸಂಬಂಧಿಸಿದ ವ್ಯಾಪಾರದಲ್ಲಿ ಭಾರಿ ವಂಚನೆಯಾಗಿದ್ದು, ಹಲವಾರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ಹಾಗೂ ಟಿಕೆ ಪೂಕೊಯಾ ತಂಗಲ್ ಇಬ್ಬರು ನಡೆಸುತ್ತಿದ್ದ ಚಿನ್ನದ ಮೇಲಿನ ಹೂಡಿಕೆ ವ್ಯವಹಾರದಲ್ಲಿ ಸುಮಾರು 100 ಕೋಟಿ ರುಗೂ ಅಧಿಕ ವಂಚನೆಯಾಗಿದೆ ಎಂದು ಗ್ರಾಹಕರ ದೂರುಗಳನ್ನು ಆಧಾರಿಸಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಫ್ಯಾಷನ್ ಗೋಲ್ಡ್ ಇಂಟರ್ ನ್ಯಾಷನಲ್ ಎಂಬ ಹೆಸರಿನ ಚಿನ್ನಾಭರಣ ವ್ಯವಹಾರ ನಡೆಸುತ್ತಿದ್ದರು. ಕಮರುದ್ದೀನ್ ಚೇರ್ಮನ್ ಆಗಿದ್ದರೆ, ಪೂಕೊಯಾ ತಂಗಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ ಎಂದು ಎಸ್ ಎಚ್ ಒ ಪಿ ನಾರಾಯಣನ್ ಹೇಳಿದ್ದಾರೆ.

ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಕಾಸರಗೋಡು, ಚಂಡೆರಾ ಸೇರಿದಂತೆ ವಿವಿಧ ಠಾಣೆಗಳಲ್ಲಿ 12ಕ್ಕೂ ಅಧಿಕ ದೂರುಗಳನ್ನು ಕ್ರೈಂ ಬ್ರ್ಯಾಂಚ್ ಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಕಮರುದ್ದೀನ್, ಇದು ರಾಜಕೀಯ ಷಡ್ಯಂತ್ರ, ಗ್ರಾಹಕರಿಗೆ ಹಣ ಹಿಂತಿರುಗಿಸಲು ನಾವು ಬದ್ಧವಾಗಿದ್ದೇವೆ ಎಂದಿದ್ದಾರೆ. ಕರ್ನಾಟಕಕ್ಕೆ ತಾಗಿಕೊಂಡಿರುವ ಕ್ಷೇತ್ರವೂ ಆಗಿರುವ ಮಂಜೇಶ್ವರದಲ್ಲಿ ಶಾಸಕರಾಗಿದ್ದ ಪಿ. ಬಿ ಅಬ್ದುಲ್ ರಝಾಕ್ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಸೋಲಿಸಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಅಭ್ಯರ್ಥಿ ಕಮರುದ್ದೀನ್ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಕೇರಳ ವಿಧಾನಸಭೆಯಲ್ಲಿ ಕನ್ನಡ ಭಾಷೆಯಲ್ಲಿ ಶಾಸಕ ಪ್ರಮಾಣವಚನ ಸ್ವೀಕರಿಸಿ ಸುದ್ದಿಯಾಗಿದ್ದರು.