ಕೊರೋನ ಮಧ್ಯೆ ಕರಾವಳಿ ಚರ್ಚ್‌ಗಳಲ್ಲಿ ಸರಳ ತೆನೆಹಬ್ಬ ಆಚರಣೆ

08-09-20 05:56 pm       Mangalore Reporter   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೊಂತಿ ಹಬ್ಬ (ತೆನೆ ಹಬ್ಬ) ವನ್ನು ಕೊರೋನ ಹಿನ್ನೆಲೆಯಲ್ಲಿ ಇಂದು ಸರಳತೆಯೊಂದಿಗೆ ಆಚರಿಸಿದರು.

ಮಂಗಳೂರು, ಸೆ.8: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೊಂತಿ ಹಬ್ಬ (ತೆನೆ ಹಬ್ಬ) ವನ್ನು ಕೊರೋನ ಹಿನ್ನೆಲೆಯಲ್ಲಿ ಇಂದು ಸರಳತೆಯೊಂದಿಗೆ ಆಚರಿಸಿದರು.

ಹಸಿರು ಹಾಗೂ ಸಮೃದ್ಧಿಯ ಪ್ರತೀಕವಾಗಿ ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನವಾದ ಸೆ. 8ನ್ನು ಮೊಂತಿ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಬಾರಿ ಕೊರೊನ ಹಿನ್ನೆಲೆಯಲ್ಲಿ ಅತ್ಯಂತ ಸರಳ ಹಾಗೂ ಮುಂಜಾಗೃತಾ ಕ್ರಮಗಳೊಂದಿಗೆ ದ.ಕ. ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿ ಬಲಿಪೂಜೆಯೊಂದಿಗೆ ಮೊಂತಿ ಹಬ್ಬವನ್ನು ಆಚರಿಸಲಾಯಿತು.

ಮಂಗಳೂರಿನ ರೊಸೋರಿಯೋ ಕೆಥಡ್ರಲ್‌ನಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಬಲಿಪೂಜೆ ನೆರವೇರಿಸಿದರು. ಅವರು ಸಂದೇಶ ನೀಡಿ, ದೇವರು ಸೃಷ್ಟಿ ಹಾಗೂ ಮನುಜ ಕುಲವನ್ನು ವಿಶೇಷಿವಾಗಿ ಪ್ರೀತಿಸುತ್ತಾರೆ. ಇಂತಹ ಸೃಷ್ಟಿಯ ಪೋಷಣೆ ಜತೆಗೆ ಮನುಜ ಕುಲ ಅದರ ಉತ್ತಮ ನಿರ್ವಹಣೆಯನ್ನು ಮಾಡಬೇಕು ಎಂಬ ಸಂದೇಶ ಈ ಹಬ್ಬದ್ದಾಗಿದೆ ಎಂದರು.

ಕ್ರೈಸ್ತ ಸಮುದಾಯ ಪತ್ರಿಕೆ ಓದುವ ವಿಚಾರದಲ್ಲಿ ತೀರಾ ಹಿಂದಿದೆ. ಯಾವುದೇ ಭಾಷೆಯ ಪತ್ರಿಕೆಗಳು ಇರಲಿ ಅದನ್ನು ಓದುವ ಪ್ರವೃತ್ತಿ ಬೆಳೆಸಬೇಕು. ಈ ಮೂಲಕ ಜ್ಞಾನ ಸಂಪಾದನೆ, ಸಮಾಜದಲ್ಲಿ ನಡೆಯುವ ವಿಚಾರಗಳ ಅರಿವು, ಸರಕಾರದ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಅದನ್ನು ಸಮುದಾಯದಲ್ಲಿ ಬಳಸಿಕೊಳ್ಳುವ ಕೆಲಸವಾಬೇಕು ಎಂದು ಅವರು ಹೇಳಿದರು.

ಬಲಿಪೂಜೆಯಲ್ಲಿ ರೊಸಾರಿಯೊ ಕೆಥಡ್ರಲ್‌ನ ಪ್ರಧಾನ ಧರ್ಮಗೂರು ಫಾ. ಅಲ್ಪ್ರೆಡ್ ಪಿಂಟೋ, ಸಹಾಯಕ ಧರ್ಮಗುರುಗಳಾದ ಫಾ. ವಿನೋದ್ ಲೋಬೋ, ಫಾ. ವಿಕ್ಟರ್ ಡಿಸೋಜಾ, ಗ್ಲಾಡ್‌ಸಮ್ ಮೈನರ್ ಸೆಮಿನರಿಯ ರೆಕ್ಟರ್ ಫಾ. ಅನಿಲ್ ಐವನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.