ಮರಿಕ್ಕಳ ಕಸಾಯಿಖಾನೆ ಆರೋಪಿಗಳ ಪರ ನಿಂತ ಬಿಜೆಪಿ ಮುಖಂಡ ; ಉಳ್ಳಾಲದಲ್ಲಿ ಬಜರಂಗದಳ - ಬಿಜೆಪಿ ನಡುವೆ ಒಡಕು !

18-09-21 09:47 pm       Mangaluru Correspondent   ಕರಾವಳಿ

ಉಳ್ಳಾಲದಲ್ಲಿ ಬಜರಂಗದಳ ಮತ್ತು ಬಿಜೆಪಿ ನಾಯಕರ ನಡುವೆ ಒಡಕು ಮೂಡಿಸಿದೆ. 

ಉಳ್ಳಾಲ, ಸೆ.18 : ಅಕ್ರಮ ಕಸಾಯಿಖಾನೆಗೆ ಪಿಕ್ ಅಪ್ ವಾಹನದಲ್ಲಿ ಗೋವನ್ನು ಸಾಗಿಸುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದರೂ, ಓರ್ವ ಆರೋಪಿಯನ್ನು ಪಾರು ಮಾಡಲು ಯತ್ನಿಸಿದ್ದರ ಹಿಂದೆ ಬಿಜೆಪಿಯ ಪ್ರಭಾವಿ ಮುಖಂಡರೊಬ್ಬರ ಪಾತ್ರ ಕೆಲಸ ಮಾಡಿದೆ ಎನ್ನುವ ಆರೋಪ ಕೇಳಿಬಂದಿದ್ದು ಇದೇ ವಿಚಾರ ಉಳ್ಳಾಲದಲ್ಲಿ ಬಜರಂಗದಳ ಮತ್ತು ಬಿಜೆಪಿ ನಾಯಕರ ನಡುವೆ ಒಡಕು ಮೂಡಿಸಿದೆ. 

ಗುರುವಾರ ಬೆಳಗ್ಗೆ ಮುಡಿಪು ಪೂಪಾಡಿಕಲ್ಲು ಕ್ರಾಸ್ ಬಳಿ ಬಜರಂಗದಳದ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ಪಿಕ್ ಅಪ್ ವಾಹನದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ಗೋವುಗಳನ್ನ ರಕ್ಷಿಸಿದ್ದರು. ಪೊಲೀಸರು ಪಿಕಪ್ ವಾಹನದ ಜೊತೆ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದರು ಎನ್ನಲಾಗಿದೆ. ಆದರೆ ಎಫ್ಐಆರ್ ನಲ್ಲಿ ಓರ್ವನ ವಿರುದ್ಧವೇ ಪ್ರಕರಣ ದಾಖಲಿಸಿದ್ದ ಪೊಲೀಸರ ವಿರುದ್ಧ ಬಜರಂಗದಳದ ಜಿಲ್ಲಾ ಗೋರಕ್ಷ ಪ್ರಮುಖರಾದ ಪವಿತ್ರ ಕೆರೆಬೈಲ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಗಡಿಭಾಗದಲ್ಲಿ ಕಾರ್ಯ ನಿರ್ವಹಿಸುವ ಮರಿಕ್ಕಳ ಕಸಾಯಿಖಾನೆಯ ಆರೋಪಿಗಳ ಪರ ಉಳ್ಳಾಲದ ಪ್ರಭಾವಿ ಬಿಜೆಪಿ ಮುಖಂಡರೊಬ್ಬರು ಕೈಯಾಡಿಸಿರುವ ಬಗ್ಗೆ ಆರೋಪ ಕೇಳಿಬಂದಿದ್ದು ಬಜರಂಗದಳ ನಾಯಕರು ತೀವ್ರ ಮುನಿಸುಗೊಂಡಿದ್ದಾರೆ. 

ಮರಿಕ್ಕಳ ಖಸಾಯಿ ಖಾನೆ ಪರ ದರ್ಬಾರ್ ! 

ಬಜರಂಗದಳದ ಗೋರಕ್ಷ ಪ್ರಮುಖರಾದ ಪವಿತ್ರ ಕೆರೆಬೈಲ್ ಹೇಳುವ ಪ್ರಕಾರ, ಕೆಲವು ದನ ಸಾಕಣೆಯ ಕೇಂದ್ರಗಳೇ ಗಡಿಭಾಗದಲ್ಲಿ ಈಗ ಅಕ್ರಮ ಕಸಾಯಿಖಾನೆಗಳಿಗೆ ಬೆಂಬಲವಾಗಿ ನಿಂತಿದ್ಯಂತೆ.  ಕರ್ನಾಟಕ- ಕೇರಳದ ಗಡಿಭಾಗದ ಮರಿಕ್ಕಳ ಎಂಬಲ್ಲಿರುವ ಅಕ್ರಮ ಕಸಾಯಿ ಖಾನೆ ಪಕ್ಕದಲ್ಲೇ ಕೃಷಿಕ ಹಿಂದು ವ್ಯಕ್ತಿಯೊಬ್ಬರ ಹೆಸರಿನಲ್ಲಿ ಸಣ್ಣ ದನಸಾಕಣೆ ಕೇಂದ್ರವಿದೆ. ಇದರ ಹೆಸರನ್ನೇ ದುರುಪಯೋಗ ಪಡಿಸಿ ದನಸಾಕಣೆ ಕೇಂದ್ರದ ಹೆಸರಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಪಕ್ಕದ ಮರಿಕ್ಕಳ ಕಸಾಯಿಖಾನೆಗೆ ಗೋವುಗಳನ್ನ ಸರಬರಾಜು ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. 

ಮರಿಕ್ಕಳ ಕಸಾಯಿ ಖಾನೆಗೆ ಗೋವುಗಳನ್ನ ಸಾಗಿಸಲು ದನಸಾಕಣೆ ಕೇಂದ್ರದ ಮಾಲೀಕನೇ ಬೆಂಬಲವಾಗಿ ನಿಂತಿದ್ದಾನೆ. ಇದೇ ವ್ಯಕ್ತಿ ಉಳ್ಳಾಲದ ಬಿಜೆಪಿಯ ಪ್ರಭಾವಿ ವ್ಯಕ್ತಿಯ ಚಾರ್ಟರ್ಡ್ ಅಕೌಂಟೆಂಟ್ ಕೂಡ ಆಗಿದ್ದಾನೆ. ಹಾಗಾಗಿ ಬಿಜೆಪಿ ಮುಖಂಡ ತನ್ನ ಎಲ್ಲ ಪ್ರಭಾವ ಬಳಸಿ ಮರಿಕ್ಕಳ ಕಸಾಯಿಖಾನೆಯ ದನಕಳ್ಳರ ರಕ್ಷಣೆಗಾಗಿ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. 

ಆದರೆ, ಬಜರಂಗದಳದ ಮುಖಂಡರು ಬಿಜೆಪಿ ನಾಯಕನಿಗೆ ಸಡ್ಡು ಹೊಡೆದಿದ್ದು ದನ ಕಳ್ಳತನದ ಇನ್ನೊಬ್ಬ ಆರೋಪಿ ಬಂಧನಕ್ಕೆ ಕೊಣಾಜೆ ಪೊಲೀಸರಿಗೆ ನಿರಂತರ ಒತ್ತಡ ಹಾಕುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹಿಂದು ಸಂಘಟನೆಗಳನ್ನ ಬಳಸುವ ಬಿಜೆಪಿ ನಾಯಕರು ಅಕ್ರಮ ಗೋಸಾಗಾಟದ ವಿಚಾರದಲ್ಲಿ ಕಸಾಯಿಖಾನೆಯ ಪರ ನಿಂತಿರುವುದು ಉಳ್ಳಾಲದಲ್ಲಿ ಬಿಜೆಪಿ ಮತ್ತು ಬಜರಂಗದಳದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಮರಿಕ್ಕಳ ಕಸಾಯಿಖಾನೆ ದರ್ಬಾರ್ ; ಗೋಸಾಗಾಟ ಪ್ರಕರಣದಲ್ಲಿ ಒಬ್ಬನ ಬಚಾವ್ ಮಾಡಿದ್ರಾ ಕೊಣಾಜೆ ಪೊಲೀಸರು ? 

Mudipu pick up van held for cattle trafficking dispute erupts between Bjp and Vhp for setting prime accused free.