ಗಾಂಧೀಜಿಯನ್ನು ಬಿಟ್ಟಿಲ್ಲ, ನಿಮ್ಮನ್ನು ಬಿಡುತ್ತೇವಾ ಎಂದಿದ್ದ ಹಿಂದು ಮಹಾಸಭಾ ಮುಖಂಡ ಬಂಧನ

19-09-21 05:17 pm       Mangaluru Correspondent   ಕರಾವಳಿ

ಸಿಎಂ ಬೊಮ್ಮಾಯಿ ಉದ್ದೇಶಿಸಿ ಬೆದರಿಕೆ ಒಡ್ಡುವ ರೀತಿ ಹೇಳಿಕೆ ನೀಡಿದ್ದ ಹಿಂದು ಮಹಾಸಭಾ ಮುಖಂಡ ಧರ್ಮೇಂದ್ರ ಅಮೀನ್ ಅವರನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಸೆ.19: ಹಿಂದುಗಳಿಗೆ ಅನ್ಯಾಯ ಮಾಡಿದ ಗಾಂಧೀಜಿಯನ್ನೇ ಬಿಟ್ಟಿಲ್ಲ. ನೀವು ಯಾವ ಲೆಕ್ಕ ಎಂದು ಸಿಎಂ ಬೊಮ್ಮಾಯಿ ಉದ್ದೇಶಿಸಿ ಬೆದರಿಕೆ ಒಡ್ಡುವ ರೀತಿ ಹೇಳಿಕೆ ನೀಡಿದ್ದ ಹಿಂದು ಮಹಾಸಭಾ ಮುಖಂಡ ಧರ್ಮೇಂದ್ರ ಅಮೀನ್ ಅವರನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ, ದೇವಸ್ಥಾನ ಒಡೆದ ವಿಚಾರವನ್ನು ಖಂಡಿಸುತ್ತಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆನಂತರ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಕೇವಲ ನಾಟಕ ಮಾತ್ರ. ಇವರಿಗೆ ಅಷ್ಟು ಅಭಿಮಾನ ಇದ್ದರೆ ಬಿಜೆಪಿಗೆ ಬೆಂಬಲ ನೀಡಬಾರದು. ದೇವಸ್ಥಾನ ಒಡೆದಿರುವ ವಿಚಾರವನ್ನು ಸಣ್ಣ ತಪ್ಪು ಅನ್ನುತ್ತಿದ್ದಾರೆ. ಇವರಿಗೆ ದೇವಸ್ಥಾನ ಒಡೆದು ಹಾಕಿದ್ದು ಸಣ್ಣ ತಪ್ಪಾದರೆ, ಮತ್ತೆ ಯಾವುದು ದೊಡ್ಡ ತಪ್ಪು. ಬೊಮ್ಮಾಯಿ ಅವರೇ, ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ. ನೀವು ಯಾವ ಲೆಕ್ಕ. ನಿಮ್ಮನ್ನು ಹಾಗೇ ಬಿಡುತ್ತೇವೆ ಎಂದುಕೊಂಡಿರಾ ಎಂದು ಪ್ರಶ್ನೆ ಮಾಡಿದ್ದರು.

ಈ ಬಗ್ಗೆ ಹಿಂದು ಮಹಾಸಭಾದ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡ ಮತ್ತೊಬ್ಬ ವ್ಯಕ್ತಿ ಎಲ್.ಕೆ.ಸುವರ್ಣ ಎಂಬವರು ಧರ್ಮೇಂದ್ರ ಹೇಳಿಕೆಯನ್ನು ವಿರೋಧಿಸಿ ಮತ್ತು ತಮ್ಮ ಸಂಘಟನೆಯ ಹೆಸರನ್ನು ದುರುಪಯೋಗಪಡಿಸಿ ಹೇಳಿಕೆ ನೀಡಿದ್ದಾರೆ ಎಂದು ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಧರ್ಮೇಂದ್ರ ಬಣದಲ್ಲಿ ರಾಜೇಶ್ ಪವಿತ್ರನ್ ಎಂಬವರು ರಾಜ್ಯಾಧ್ಯಕ್ಷರಾಗಿದ್ದು, ತಾನೇ ಅಧ್ಯಕ್ಷ ಎಂದು ಹೇಳಿಕೊಂಡಿದ್ದಲ್ಲದೆ, ಧರ್ಮೇಂದ್ರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಆನಂತರ ಧರ್ಮೇಂದ್ರ ಜೊತೆಗೆ ರಾಜೇಶ್ ಪವಿತ್ರನ್ ಮತ್ತು ಇನ್ನೂ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 


Mangalore state president of Hindu Mahasabaha Rajesh Parivartan and Dharmendra arrested by Mangalore Police for threatening remarks against CM during a press meet held regarding demolition of temples in Karnataka