ಕೃಷ್ಣನೂರಲ್ಲಿ ಸರಳ ವಿಟ್ಲ ಪಿಂಡಿ ಉತ್ಸವ ; ಸಾರ್ವಜನಿಕರಿಗೆ ನಿರ್ಬಂಧ 

10-09-20 06:17 pm       Udupi Reporter   ಕರಾವಳಿ

ಈ ಬಾರಿ ಕರೊನಾ ಹಾವಳಿ ಕಾರಣಕ್ಕೆ ಉಡುಪಿಯಲ್ಲಿ  ಶ್ರೀಕೃಷ್ಣ ಜನ್ಮಾಷ್ಟಮಿಯ ವಿಟ್ಲ ಪಿಂಡಿ ಉತ್ಸವ ಅತ್ಯಂತ ಸರಳವಾಗಿ ನಡೆದಿದೆ.

ಉಡುಪಿ, ಸೆಪ್ಟೆಂಬರ್ 10: ಕೊರೊನಾ ನಿರ್ಬಂಧ ಹಿನ್ನೆಲೆಯಲ್ಲಿ ಉಡುಪಿಯಲ್ಲಿ  ಶ್ರೀಕೃಷ್ಣ ಜನ್ಮಾಷ್ಟಮಿಯ ವಿಟ್ಲ ಪಿಂಡಿ ಉತ್ಸವ ಅತ್ಯಂತ ಸರಳವಾಗಿ ನಡೆದಿದೆ.

ಪರ್ಯಾಯ ಸ್ವಾಮೀಜಿ ಈಶಪ್ರೀಯ ಶ್ರೀಪಾದರು ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ಮಾಡಿದರು. ಅಲ್ಲದೆ, ವಿಟ್ಲ ಪಿಂಡಿ ಪ್ರಯುಕ್ತ ಶ್ರೀಕೃಷ್ಣನಿಗೆ ಇಂದು ಬಾಲಕೃಷ್ಣನ ಅಲಂಕಾರ ಮಾಡಲಾಗಿತ್ತು. ಕೃಷ್ಣನ ಮೂರ್ತಿಯ ಮುಂದೆ ಚಿನ್ನದ ತೊಟ್ಟಿಲಿಟ್ಟು ಸ್ವಾಮೀಜಿ ಕೃಷ್ಣನನ್ನು ವಿಶೇಷವಾಗಿ ಅಲಂಕರಿಸಿದರು. ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಗಳು ವಿಶೇಷ ಅಲಂಕಾರವನ್ನು ಮಾಡಿದ್ದಾರೆ. 

ಅದಮಾರು ಮಠದ ಸ್ವಾಮೀಜಿ ಅಷ್ಟಮಿಯ ವಿಟ್ಲ ಪಿಂಡಿ ಪ್ರಯುಕ್ತ ಮಹಾಪೂಜೆ ನೆರವೇರಿಸಿದರು. ಕೊರೊನಾ ನಿರ್ಬಂಧ ಹಿನ್ನೆಲೆಯಲ್ಲಿ ಉತ್ಸವಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಕೃಷ್ಣಮಠದ ಸಿಬಂದಿ,‌ ಅರ್ಚಕರು, ಸ್ವಾಮೀಜಿಗಳ ವಿನಾ ಬೇರೆ ಯಾರಿಗೂ ವಿಟ್ಲ ಪಿಂಡಿ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಹೊರಭಾಗದಲ್ಲಿ ಹೊರಗಿನ ಜನರು ಬರದಂತೆ ಪೊಲೀಸರು ಭದ್ರತೆ ಏರ್ಪಡಿಸಿದ್ದರು.

ಕೃಷ್ಣಾಷ್ಟಮಿ ಪ್ರಯುಕ್ತ ಸೆ.11ರಂದು ಮಧ್ಯಾಹ್ನ 3ರಿಂದ ಶ್ರೀಕೃಷ್ಣ ಲೀಲೋತ್ಸವ ನಡೆಯಲಿದ್ದು, ಜನದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಮಧ್ಯಾಹ್ನ 12.30ರಿಂದ ಸಾಯಂಕಾಲ 5.30ರವರೆಗೆ ರಥಬೀದಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ ನೀಡಿದ್ದಾಗಿ ಕೃಷ್ಣ ಮಠದ ಪ್ರಕಟಣೆ ತಿಳಿಸಿದೆ. ಇನ್ನೊಂದೆಡೆ, ಪರ್ಯಾಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಆಶಯದಂತೆ ಕೃಷ್ಣ ಪ್ರಸಾದ ವಿತರಣೆಗಾಗಿ ಮಠದಲ್ಲಿ ಒಂದು ಲಕ್ಷ ಉಂಡೆ ಹಾಗೂ ಒಂದು ಲಕ್ಷ ಚಕ್ಕುಲಿ ತಯಾರಿಸಲಾಗುತ್ತಿದೆ.