ಭಾರೀ ಮಳೆ ; ಮಂಗಳೂರಿನಲ್ಲಿ ಕೃತಕ ನೆರೆ, ಹಲವು ಮನೆಗಳು ಆತಂಕದಲ್ಲಿ ! ಕೊಟ್ಟಾರ ಹೆದ್ದಾರಿ ಮುಳುಗಡೆ !

11-09-20 12:21 pm       Mangalore Correspondent   ಕರಾವಳಿ

ಮಂಗಳೂರಿನ ಜಪ್ಪಿನಮೊಗರು, ಕುಡುಪಾಡಿ ಪ್ರದೇಶದಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು ಅಲ್ಲಿದ್ದ ನಿವಾಸಿಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. 

ಮಂಗಳೂರು, ಸೆಪ್ಟೆಂಬರ್ 11: ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಮಂಗಳೂರಿನ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿದೆ. ಜಪ್ಪಿನಮೊಗರು, ಕುಡುಪಾಡಿ ಪ್ರದೇಶದಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು ಅಲ್ಲಿದ್ದ ನಿವಾಸಿಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. 

ಆರು ಮನೆಗಳ ನಿವಾಸಿಗಳು ನಿನ್ನೆ ರಾತ್ರಿಯೇ ಮನೆ ಬಿಟ್ಟು ಬೇರೆಡೆ ತೆರಳಿದ್ದರು. ಇಂದು ಬೆಳಗ್ಗೆ ಮತ್ತಷ್ಟು ಮನೆಗಳಿಗೆ ನೀರು ನುಗ್ಗಿದ್ದು ಅರ್ಧಕ್ಕೂ ಹೆಚ್ಚು ಮಟ್ಟದಲ್ಲಿ ಮನೆಗಳು ಮುಳುಗಡೆಯಾಗಿದೆ. ಪ್ರತಿ ಬಾರಿ ಜಪ್ಪಿನಮೊಗರಿನ ಕಂರ್ಭಿಸ್ಥಾನ ಏರಿಯಾದಲ್ಲಿ ಮಳೆನೀರು ಮನೆಗಳಿಗೆ ನುಗ್ಗುವುದು ಸಾಮಾನ್ಯವಾಗಿತ್ತು. ಈ ಬಾರಿ ಹೆದ್ದಾರಿಯ ಬಲಭಾಗದಲ್ಲಿ ಮಳೆನೀರು ಹರಿಯಲು ಸಾಧ್ಯವಾಗದೆ ಆ ಭಾಗದ ಮನೆಗಳಿಗೆ ನುಗ್ಗಿದೆ‌. ಗದ್ದೆ ಇದ್ದ ಜಾಗಕ್ಕೆ ಮಣ್ಣು ತುಂಬಿದ್ದರಿಂದ ನೀರು ಹರಿದು ಹೋಗಲು ಜಾಗ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಅಕ್ಕಪಕ್ಕದ ಮನೆಗಳು ಮುಳುಗಡೆಯಾಗುವ ಭೀತಿ ಎದುರಾಗಿದೆ. ಕೆಲವರು ಮನೆ ಬಿಟ್ಟು ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಮನೆಯ ಸಾಮಗ್ರಿಗಳನ್ನು ಉಳಿಸಿ ಬೇರೆಡೆ ಹೋದರೆ ಹೇಗೆ ಎನ್ನುವ ಪ್ರಶ್ನೆ ಮುಂದಿಡುತ್ತಿದ್ದಾರೆ. ಮಹಾನಗರ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂಥ ಅವಸ್ಥೆ ಆಗಿದೆ ಎನ್ನುತ್ತಿದ್ದಾರೆ. ಅಗ್ನಿಶಾಮಕ ಅಧಿಕಾರಿಗಳು ಅಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ. 

ಇನ್ನು ಮಂಗಳೂರಿನ ಕೊಟ್ಟಾರ ಚೌಕಿಯಲ್ಲೂ ಕೃತಕ ನೆರೆ ಸೃಷ್ಟಿಯಾಗಿದ್ದು ರಾಷ್ಟ್ರೀಯ ಹೆದ್ದಾರಿ ಮುಳುಗಡೆಯಾಗಿದೆ. ನಿನ್ನೆ ಸಂಜೆಯಿಂದಲೇ ನಿರಂತರ ಮಳೆಯಿಂದಾಗಿ ಕೊಟ್ಟಾರ ಹೆದ್ದಾರಿಯಲ್ಲಿ ನೀರು ನುಗ್ಗಿದ್ದು ವಾಹನ ಸಂಚಾರ ತೊಂದರೆಗೀಡಾಗಿತ್ತು. ಅವ್ಯವಸ್ಥೆ ಇಂದು ಕೂಡ ಮುಂದುವರಿದಿದೆ. 

ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಇಡೀ ನಿರಂತರ ಮಳೆಯಾಗಿದ್ದು ಆತಂಕ ಸೃಷ್ಟಿಯಾಗಿದೆ. ಹವಾಮಾನ ಇಲಾಖೆ ಪ್ರಕಾರ, ಇನ್ನೂ ಎರಡು ದಿನ ಭಾರೀ ಮಳೆಯಾಗಲಿದೆ.

Join our WhatsApp group for latest news updates