ಸಮುದ್ರ ಮಧ್ಯೆ ಸಿಕ್ಕಿಬಿದ್ದ 24 ಮೀನುಗಾರರ ರಕ್ಷಣೆ ; ಕೋಸ್ಟ್ ಗಾರ್ಡ್ ಕಾರ್ಯಾಚರಣೆ 

11-09-20 02:18 pm       Mangalore Reporter   ಕರಾವಳಿ

ಸಮುದ್ರ ಮಧ್ಯೆ ಸಿಕ್ಕಿಬಿದ್ದ ಮೀನುಗಾರಿಕಾ ಬೋಟ್ ನಲ್ಲಿದ್ದ 24 ಮಂದಿಯನ್ನು ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ. 

ಮಂಗಳೂರು, ಸೆಪ್ಟೆಂಬರ್ 11: ಭಾರೀ ಮಳೆ ಮತ್ತು ಗಾಳಿಯಿಂದಾಗಿ ಸಮುದ್ರ ಮಧ್ಯೆ ಸಿಕ್ಕಿಬಿದ್ದ ಮೀನುಗಾರಿಕಾ ಬೋಟ್ ನಲ್ಲಿದ್ದ 24 ಮಂದಿಯನ್ನು ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ. 

ಭಟ್ಕಳದಿಂದ ತೆರಳಿದ್ದ ಬೋಟ್ ಗಾಳಿಮಳೆಗೆ ಮುಳುಗುವ ಭೀತಿ ಎದುರಾಗಿತ್ತು. ಅಲ್ಲದೆ, ಬೋಟಿನಲ್ಲಿ ತಾಂತ್ರಿಕ ತೊಂದರೆಯೂ ಕಾಣಿಸಿಕೊಂಡಿದ್ದರಿಂದ ಮೀನುಗಾರರು ಮೀನುಗಾರಿಕಾ ಇಲಾಖೆಗೆ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದರು. ಭಟ್ಕಳದಿಂದ 17 ನಾಟಿಕಲ್ ಮೈಲ್ ದೂರದಲ್ಲಿ ಘಟನೆ ನಡೆದಿತ್ತು. 

ಭಾರತೀಯ ತಟರಕ್ಷಣಾ ಪಡೆಯ ಕಸ್ತೂರಬಾ ಗಾಂಧಿ ಹಡಗಿನ ಮೂಲಕ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಎಲ್ಲ 24 ಮಂದಿಯನ್ನು ಸುರಕ್ಷಿತವಾಗಿ  ಸಮುದ್ರ ತೀರಕ್ಕೆ ಕರೆತಂದಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ಖಮರುಲ್ ಬಹಾರ್ ಹೆಸರಿನ ಬೋಟ್, ಎಂಜಿನ್ ವೈಫಲ್ಯದಿಂದ ಸಮುದ್ರದಲ್ಲಿ ಗಾಳಿ ಮಳೆ ಹೊಡೆತಕ್ಕೆ ಸಿಲುಕಿ ಅಪಾಯದಲ್ಲಿತ್ತು . ಬೋಟ್ ಮಾಲೀಕರು ಮೀನುಗಾರಿಕೆ ಇಲಾಖೆಗೆ ಮಾಹಿತಿ ನೀಡಿ, ರಕ್ಷಣೆಗೆ ಮನವಿ ಮಾಡಿದ್ದರು. ಈ ಬಗ್ಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಭಾರತೀಯ ತಟ ರಕ್ಷಣಾ ಪಡೆಗೆ  ಮಾಹಿತಿ ರವಾನಿಸಿದ್ದರು.

ಸಮುದ್ರದಲ್ಲಿ ಗಸ್ತಿನಲ್ಲಿದ್ದ ಕಸ್ತೂರಬಾ ಗಾಂಧಿ ಹಡಗು ಕೂಡಲೇ ಮಾಹಿತಿಗೆ ಸ್ಪಂದಿಸಿ, ಮೀನುಗಾರರು ಹಾಗೂ ಬೋಟ್ ಅನ್ನು ದಡಕ್ಕೆ ಕರೆತಂದಿದೆ.