"ಏನ್ರೀ ನೀವು 11 ಗಂಟೆಗೆ ಬರ್ತೀರಿ, ಜನರಿಗೆ ದರ್ಪ ತೋರಿಸ್ತೀರೇನ್ರೀ..‌." ಸಬ್ ರಿಜಿಸ್ಟ್ರಾರ್ ಗೆ ದಬಾಯಿಸಿದ ಶಾಸಕ ಮಠಂದೂರು !! 

12-09-20 12:30 pm       Mangalore Reporter   ಕರಾವಳಿ

ಪುತ್ತೂರು ಶಾಸಕ ಸಂಜೀವ ಮಠಂದೂರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರು ಸಾರ್ವಜನಿಕರ ಎದುರಲ್ಲೇ ತರಾಟೆಗೆತ್ತಿಕೊಂಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. 

ವಿಟ್ಲ , ಸೆಪ್ಟೆಂಬರ್ 11: ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ವಿಟ್ಲ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರು ಸಾರ್ವಜನಿಕರ ಎದುರಲ್ಲೇ ತರಾಟೆಗೆತ್ತಿಕೊಂಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. 

ಸಾರ್ವಜನಿಕರ ನಿರಂತರ ದೂರಿನ ಹಿನ್ನೆಲೆಯಲ್ಲಿ ವಿಟ್ಲ ಉಪನೋಂದಣಿ ಕಚೇರಿಗೆ ದಿಢೀರ್ ಆಗಿ ಭೇಟಿ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು, ಉಪ ನೋಂದಣಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಚೇರಿ ಹೊರಗೆ ಸ್ವಲ್ಪ ಹೊತ್ತು ನಿಂತು ಏಕಾಏಕಿ ಕಚೇರಿ ಒಳಗೆ ಪ್ರವೇಶಿಸಿದ ಶಾಸಕರು, ನಿಮ್ಮ ಬಗ್ಗೆ ಕಳೆದ ಒಂದು ತಿಂಗಳುಗಳಿಂದ ದೂರುಗಳು ಬರುತ್ತಿವೆ. ನೀವು ಬೆಳಗ್ಗೆ 11 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೀರಿ, ಪ್ರತಿನಿತ್ಯ ಜನರು ತಮ್ಮ ಕೆಲಸಕ್ಕೆ ಕಾಯಬೇಕು. ಕೆಲವರು ಕೆಲಸ ಪೂರ್ಣಗೊಳ್ಳದೇ  ಹಿಂತಿರುಗುತ್ತಿದ್ದಾರೆ. ಜನರೊಂದಿಗೆ ದರ್ಪದಿಂದ ವರ್ತಿಸುತ್ತಿದ್ದೀರಿ ಎಂಬ ದೂರು ಬರುತ್ತಿದೆ. ನಾನು ಬಂದು ಕೆಲವು ಹೊತ್ತು ಕಳೆದರೂ ಹೊರಗಡೆ ನಿಂತುಕೊಂಡಿದ್ದೆ. ಶಾಸಕರ ಜತೆ ಹೇಗೆ ನಡೆದುಕೊಳ್ಳಬೇಕೆಂದು ನಿಮಗೆ ಗೊತ್ತಿಲ್ಲ. ಇನ್ನೂ ಜನರನ್ನು ಯಾವ ರೀತಿ ನಡೆಸಿಕೊಳ್ಳುತ್ತೀರಿ.. ಸ್ವಲ್ಪವಾದರೂ ಜವಾಬ್ದಾರಿ ಇದೆಯಾ ನಿಮಗೆ ಎಂದು ಪ್ರಶ್ನಿಸಿದ್ದಾರೆ? 

ಇದಕ್ಕೆ ಪ್ರತಿಕ್ರಿಯಿಸಿದ ಉಪ ನೋಂದಣಾಧಿಕಾರಿ ಪ್ರೇಮಾ, ನೀವು ಹಾಗೆ ಮಾತನಾಡಬೇಡಿ ಸರ್.. ಇಲ್ಲಿ  ಸರ್ವರ್ ಸಮಸ್ಯೆ ಇದೆ. ಇಲ್ಲಿ ಇಬ್ಬರು ಮಾತ್ರ ಸಿಬ್ಬಂದಿ ಮಾತ್ರ ಇರುವುದು. ಕಂಪ್ಯೂಟರ್ ಕೂಡಾ ಕೈ ಕೊಡುತ್ತಿದೆ. ಈ ಸಮಸ್ಯೆಯಿಂದ ಕೆಲಸ ತಡವಾಗುತ್ತದೆ. ನಾನು ಸಮಯಕ್ಕೆ ಸರಿಯಾಗಿ ಕರ್ತವ್ಯ ಹಾಜರಾಗುತ್ತಿದ್ದೇನೆ. ಟೋಕನ್ ನೀಡಿದ ಎಲ್ಲರ ಕೆಲಸ ನಡೆಯುತ್ತಿದೆ ಎಂದು ಹೇಳಿದರು. 

ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಸರಿಪಡಿಸುವ ಜವಾಬ್ದಾರಿ ನಿಮ್ಮದಾಗಿದೆ. ತಮ್ಮ ಕೆಲಸ ಕಾರ್ಯಗಳಿಗೆ ಬರುವ ಜನರಿಗೆ ಯಾವುದೇ ಸಮಸ್ಯೆ ಆಗಬಾರದು. ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದರು. ಸಮಸ್ಯೆ ಇದ್ದರೆ ಮೇಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿ.. ಇಲ್ಲಿಯ ಪರಿಸ್ಥಿತಿಯ ಬಗ್ಗೆ ವಿವರಿಸಿ, ತಕ್ಷಣವೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸೂಚನೆ ನೀಡಿದರು.

Video: