ಮಂಗಳೂರಿನಲ್ಲು ಡ್ರಗ್ಸ್ ದಂಧೆ ; ನಿಷ್ಪಕ್ಷಪಾತ ತನಿಖೆಗೆ ಡಿಜಿಪಿಗೆ ಎಬಿವಿಪಿ ಮನವಿ

12-09-20 06:31 pm       Mangaluru Correspondant   ಕರಾವಳಿ

ಶೈಕ್ಷಣಿಕ ಹಬ್ ಆಗಿರುವ ಮಂಗಳೂರಿನಲ್ಲಿಯೂ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಪೊಲೀಸರು ನಿಗಾ ವಹಿಸಬೇಕು ಎಂದು ಎಬಿವಿಪಿ ವತಿಯಿಂದ ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದ ಡಿಜಿಪಿ ಪ್ರವೀಣ್ ಸೂದ್ ಗೆ ಮನವಿ ನೀಡಲಾಗಿದೆ.

ಮಂಗಳೂರು, ಸೆಪ್ಟಂಬರ್ 12: ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ನಟಿಯರು ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಹಬ್ ಆಗಿರುವ ಮಂಗಳೂರಿನಲ್ಲಿಯೂ ಪೊಲೀಸರು ನಿಗಾ ವಹಿಸಬೇಕು. ಇಲ್ಲಿನ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ದೊಡ್ಡ ಮಟ್ಟದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಇದನ್ನು ಮಟ್ಟ ಹಾಕಲು ಯಾವುದೇ ರಾಜಕೀಯ ಒತ್ತಡಗಳಿಗೆ ಒಳಗಾಗದೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಎಬಿವಿಪಿ ವತಿಯಿಂದ ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದ ಡಿಜಿಪಿ ಪ್ರವೀಣ್ ಸೂದ್ ಗೆ ಮನವಿ ನೀಡಲಾಗಿದೆ.

ಡ್ರಗ್ಸ್ ದಂಧೆ ಮಟ್ಟ ಹಾಕಲು ಮನವಿ ಪತ್ರದಲ್ಲಿ ಕೆಲವೊಂದು ಸಲಹೆಗಳನ್ನೂ ನೀಡಲಾಗಿದೆ. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾಲೇಜು ಕ್ಯಾಂಪಸ್ ಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಅಲ್ಲದೆ ಅಪರಾಧ ಮಾಹಿತಿಯುಳ್ಳ ಕರಪತ್ರಗಳನ್ನು ಕಾಲೇಜುಗಳಲ್ಲಿ ಅಂಟಿಸಬೇಕು. ಕಾಲೇಜು ಕ್ಯಾಂಪಸ್ ಬಳಿ ಇರುವ ಪಾನ್ ಶಾಪ್, ಜೆರಾಕ್ಸ್ ಶಾಪ್, ಹೊಟೇಲ್, ಜ್ಯೂಸ್ ಸೆಂಟರ್ ಗಳ ಮೇಲೆ ನಿಗಾ ಇಡಬೇಕು. ನಗರದಲ್ಲಿರುವ ಸರಕಾರಿ, ಖಾಸಗಿ ಹಾಸ್ಟೆಲ್ ಗಳು, ಪಿ.ಜಿ.ಗಳ ಬಗ್ಗೆ ಮಾಹಿತಿ ಪಡೆದು ಅಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಕಾಲೇಜು ಕ್ಯಾಂಪಸ್ ಸುತ್ತಮುತ್ತ ದಿನದಲ್ಲಿ ಒಂದು ಬಾರಿಯಾದ್ರೂ ಪೊಲೀಸರು ಗಸ್ತು ತಿರುಗಬೇಕು. ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಬೇಕು. ಒಂದು ವೇಳೆ ವಿದ್ಯಾರ್ಥಿಗಳು ಸಿಕ್ಕಿಬಿದ್ದರೆ ಅಂಥ ವಿದ್ಯಾರ್ಥಿಗಳಿಗೆ ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಕೌನ್ಸೆಲಿಂಗ್ ಮಾಡಬೇಕು. ಎಂಬಿತ್ಯಾದಿ ಸಲಹೆ, ಒತ್ತಾಯಗಳನ್ನು ಮನವಿಯಲ್ಲಿ ಮಾಡಲಾಗಿದೆ.

ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ ಆಶಿಶ್ ಅಜ್ಜಿಬೆಟ್ಟು ಹಾಗೂ ಮಂಗಳೂರು ನಗರ ಸಹ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಮನವಿಯನ್ನು ಡಿಜಿಪಿ ಪ್ರವೀಣ್ ಸೂದ್ ಮತ್ತು ಮಂಗಳೂರು ಕಮಿಷನರ್ ವಿಕಾಸ್ ಕುಮಾರ್ ಅವರಿಗೆ ನೀಡಿದ್ದಾರೆ.

Join our WhatsApp group for latest news updates