ಚಂದ್ರನ ಮೇಲೊಂದು ಮನೆಯ ಮಾಡಿ... ಸಾಹಸಕ್ಕೆ ಕೈಹಾಕಿದ್ದಾರೆ ವಿಜ್ಞಾನಿಗಳು ! 

15-08-20 07:26 pm       Bangalore Reporter   ಸ್ಪೆಷಲ್ ಕೆಫೆ

ಭೂಮಿಯ ಮೇಲೆ ಕಟ್ಟಡ ಕಟ್ಟಲು ಜಾಗವಿಲ್ಲದೆ ಮನುಷ್ಯ ತನ್ನ ದೃಷ್ಟಿಯನ್ನು ಚಂದ್ರನತ್ತ ಬೀರಿದ್ದಾನೆ. ಇನ್ನು ಕೆಲವೇ ದಶಕಗಳಲ್ಲಿ ಈ ಕನಸು ನನಸಾದ್ರೂ ಅಚ್ಚರಿಯಿಲ್ಲ. ಚಂದ್ರನ ಮೇಲೆ ಕಟ್ಟಡ ನಿರ್ಮಿಸಲು ಅಗತ್ಯವಾದ ಇಟ್ಟಿಗೆ ಸ್ವರೂಪದ ಆಕೃತಿಗಳನ್ನು ತಯಾರಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಬೆಂಗಳೂರು, ಆಗಸ್ಟ್ 15: ಚಂದ್ರನ ಮೇಲೆ ಮಾನವ ವಾಸ ಮಾಡಲು ಸಾಧ್ಯವೇ ಅನ್ನುವ ಶೋಧನೆ ಆಗುತ್ತಿರುವಾಗಲೇ ಇದೀಗ ಚಂದ್ರನ ಮೇಲೆ ಇಟ್ಟಿಗೆ ತಯಾರಿಸುವ ಸಿದ್ಧತೆ ನಡೆಯುತ್ತಿದೆ. ಹೌದು, ಭೂಮಿಯ ಮೇಲೆ ಕಟ್ಟಡ ಕಟ್ಟಲು ಜಾಗವಿಲ್ಲದೆ ಮನುಷ್ಯ ತನ್ನ ದೃಷ್ಟಿಯನ್ನು ಚಂದ್ರನತ್ತ ಬೀರಿದ್ದಾನೆ. ಇನ್ನು ಕೆಲವೇ ದಶಕಗಳಲ್ಲಿ ಈ ಕನಸು ನನಸಾದ್ರೂ ಅಚ್ಚರಿಯಿಲ್ಲ. ಇದಕ್ಕಾಗಿಯೇ ಮೊದಲಿಗೆ ಇಟ್ಟಿಗೆ ತಯಾರಿಸಲು ವಿಜ್ಞಾನಿಗಳು ತಯಾರಾಗಿದ್ದಾರೆ. 

ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ಚಂದ್ರನ ಮೇಲೆ ಕಟ್ಟಡ ನಿರ್ಮಿಸಲು ಅಗತ್ಯವಾದ ಇಟ್ಟಿಗೆ ಸ್ವರೂಪದ ಆಕೃತಿಗಳನ್ನು ತಯಾರಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಚಂದ್ರನಲ್ಲಿ ಸಿಗುವ ಮಣ್ಣಿಗೆ ಯೂರಿಯಾ ಬಳಸಿ ಭಾರ ತಡೆಯುವಂತಹ ಇಟ್ಟಿಗೆಯಂತಹ ರಚನೆ ಮಾಡಲು ಐಎಎಸ್ಸಿ ಮತ್ತು ಇಸ್ರೋ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವ ವಸತಿ ಕೈಗೊಳ್ಳುವ ಸ್ಥಿತಿ ಬಂದರೆ ಬಾಹ್ಯಾಕಾಶದ ಇಟ್ಟಿಗೆಯನ್ನು ಬಳಸಲು ಈ ಸಂಶೋಧನೆ ಮಾಡಲಾಗ್ತಿದೆ. 

ಇನ್ನು ಭೂಮಿಯ ಮೇಲಿನ ಸಂಪನ್ಮೂಲಗಳೇ ಇದೀಗ ಮನುಕುಲಕ್ಕೆ ಸಾಲುತ್ತಿಲ್ಲ. ಹೀಗಾಗಿಯೇ ಇತರೆ ಗ್ರಹಗಳತ್ತ ತನ್ನ ನೋಟ ಬೀರಿದ್ದಾನೆ. ಇನ್ನು ಹೀಲಿಯಂ, ಟೈಟಾನಿಯಂ ಮುಂತಾದ ಖನಿಜಗಳು ಸಿಗುವುದು ಅನ್ಯಗೃಹಗಳಲ್ಲಿ. ಅವುಗಳನ್ನು ಭೂಮಿಗೆ ತರುವುದು ವೈಜ್ಞಾನಿಕ ಕ್ಷೇತ್ರದ ಮುಖ್ಯ ಗುರಿ. ಅದಕ್ಕೆ ಅಲ್ಲಿ ಮನುಷ್ಯ ವಾಸ ಸ್ಥಳ ನಿರ್ಮಿಸಬೇಕಾಗಿದೆ. ಇನ್ನು ಭೂಮಿಯಿಂದ ಅರ್ಧ ಕೆಜಿ ವಸ್ತು ಒಯ್ಯಲು 7.5 ಲಕ್ಷ ರೂ. ವೆಚ್ಚ ಆಗುತ್ತದೆ. ಹೀಗಾಗಿ ಚಂದ್ರನಲ್ಲಿಯೇ ಇಟ್ಟಿಗೆಯಂತಹ ವಸ್ತು ನಿರ್ಮಾಣ ಮಾಡಿ ಅಲ್ಲಿಂದಲೇ ಬಳಕೆ ಮಾಡಿದರೆ ಖರ್ಚು ಉಳಿತಾಯ ಆಗುತ್ತದೆ ಅನ್ನುವ ಲೆಕ್ಕಾಚಾರವೂ ಇಲ್ಲಿದೆ. 

ಚಂದ್ರನ ಮೇಲೆ ವಾಸಕ್ಕೆ ಯೋಗ್ಯ ಮನೆ ನಿರ್ಮಿಸಲು ಮನುಷ್ಯನ ಮೂತ್ರದಲ್ಲಿರುವ ಯೂರಿಯಾ ಮತ್ತು ಚಂದ್ರನ ಮಣ್ಣನ್ನು ಬಳಸಿ ಇಟ್ಟಿಗೆ ತಯಾರಿಸಬಹುದಾಗಿದೆ. ಸಿಮೆಂಟ್ ಬದಲಿಗೆ ಗೋರಿಕಾಯಿಯನ್ನು ಅಂಟಿನ ರೂಪದಲ್ಲಿ ಬಳಸಬಹುದಾಗಿದೆ ಎಂದು ಐಐಎಸ್‍ಸಿ ಹೇಳಿದೆ. ಹಾಗಾಗಿ ಭೂಮಿಯ ನಂತರ ಮನುಷ್ಯ ಚಂದ್ರನ ಮೇಲೆ ವಾಸಿಸಲು ಏನೆಲ್ಲಾ ಬೇಕೋ ಅದರ ಸಿದ್ಧತೆಗಳನ್ನು ವಿಜ್ಞಾನಿಗಳು ಮಾಡ ಹೊರಟಿದ್ದಾರೆ.